ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಪದಾರ್ಪಣೆ ಮಾಡಿಲ್ಲವಾದರೂ ಇಂಗ್ಲೆಂಡ್ ಸ್ಟಾರ್ ವೇಗಿ ಕೇಟ್ ಕ್ರಾಸ್ ಅವರನ್ನು 2025ರ ಡಬ್ಲ್ಯಪಿಎಲ್ (womens premier league) ಟೂರ್ನಿಯ ನಿಮಿತ್ತ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಉಳಿಸಿಕೊಂಡಿತ್ತು. ಆದರೆ ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳಿರುವಂತೆ ಟೂರ್ನಿಯಿಂದ ಹಿಂದೆ ಸರಿದ ಕೇಟ್ ಕ್ರಾಸ್ (Kate Cross ) ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ತಿಳಿಸಿದ್ದಾರೆ.
ಕಳೆದ ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ನ್ಯೂಜಿಲೆಂಡ್‌ನ ಸ್ಟಾರ್ ಸೋಫಿ ಡಿವೈನ್ ಹಾಗೂ ಕೇಟ್ ಕ್ರಾಸ್ ಅವರ ಬದಲಿ ಆಟಗಾರ್ತಿಯರಾಗಿ ಬೆಂಗಳೂರು ಫ್ರಾಂಚೈಸಿ ಆಸ್ಟ್ರೇಲಿಯಾದ ಹೀದರ್ ಗ್ರಹಾಂ ಹಾಗೂ ಕಿಮ್ ಗರ್ತ್ ಅವರಿಗೆ ಸ್ಥಾನ ನೀಡಿ ತಂಡವನ್ನು ಬಲಿಷ್ಠಗೊಳಿಸಿದೆ.
WPL 2025: ಚಾಂಪಿಯನ್ ಆರ್‌ಸಿಬಿ ತಂಡ ಸೇರಿಕೊಂಡ ಆಸ್ಟ್ರೇಲಿಯಾ ಸ್ಟಾರ್‌ಗಳು!
ಡಬ್ಲ್ಯೂಪಿಎಲ್ ನಿಂದ ಹಿಂದೆ ಸರಿದಿದ್ದು ಕಠಿಣ ಸಂಗತಿ: ಕೇಟ್ ಕ್ರಾಸ್
2025ರ ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿದಿದ್ದಕ್ಕೆ ನನಗೆ ತುಂಬಾ ಬೇಸರವಾಗುತ್ತಿದೆ ಎಂದು ಕೇಟ್ ಕ್ರಾಸ್ ಅವರು ತಮ್ಮ ಅಧಿಕೃತ ಇನ್ಸಾಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಮಹಿಳಾ ಪ್ರೀಮಿಯರ್ ಲೀಗ್‌ನಿಂದ ದೂರ ಸರಿಯುವ ನನ್ನ ನಿರ್ಧಾರ ಸಾಕಷ್ಟು ಕಠಿಣ ಸಂಗತಿಯಾಗಿದೆ. ಆದರೆ ಬೆನ್ನು ನೋವಿನ ಸಮಸ್ಯೆಯಿಂದ ಪೂರ್ಣವಾಗಿ ಚೇತರಿಸಿಕೊಳ್ಳಲು, ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳ್ಳಲು ಹಾಗೂ ಮುಂಬರುವ ಬೇಸಿಗೆಯಿಂದ ಆರಂಭವಾಗುವ ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ಸೇವೆ ಸಲ್ಲಿಸಲು ಈ ವಿರಾಮ ಅಗತ್ಯವಾಗಿತ್ತು," ಎಂದು ಇಂಗ್ಲೆಂಡ್ ವೇಗಿ ತಿಳಿಸಿದ್ದಾರೆ.
ಆರ್‌ಸಿಬಿಗೆ ಶುಭ ಕೋರಿದ ಕ್ರಾಸ್
"ಆರ್‌ಸಿಬಿ ತಂಡದೊಂದಿಗೆ ಆಡುವ ಅವಕಾಶ ಕಳೆದುಕೊಂಡಿದ್ದಕ್ಕೆ ನನಗೆ ಬೇಸರವಾಗುತ್ತಿದೆ. ಆದರೆ ಸ್ಮೃತಿ ಮಂಧಾನಾ ಸಾರಥ್ಯದ ತಂಡದ ಆಟಗಾರ್ತಿಯರಿಗೆ ಅದೃಷ್ಟ ಒಲಿದು ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲಿ ಎಂದು ಹಾರೈಸುತ್ತೇನೆ," ಎಂದು ಕೇಟ್ ಕ್ರಾಸ್ ಶುಭ ಕೋರಿದ್ದಾರೆ.
WPL 2025: ಡಬ್ಲ್ಯುಪಿಎಲ್‌ನಿಂದ ಹಿಂದೆ ಸರಿದ ಸೋಫಿ ಡಿವೈನ್
ಕೇಟ್ ಕ್ರಾಸ್‌ಗೆ ಆರ್‌ಸಿಬಿ ಹಾರೈಕೆ
ಇಂಗ್ಲೆಂಡ್ ವೇಗಿಯ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಆರ್‌ಸಿಬಿ ಫ್ರಾಂಚೈಸಿ, "ನಿಮ್ಮನ್ನು (ಕೇಟ್ ಕ್ರಾಸ್) ಮೈದಾನದಲ್ಲಿ ಮತ್ತೆ ನೋಡಲು ಎದುರು ನೋಡುತ್ತಿದ್ದೇವೆ. ಕ್ರಾಸ್ ನೀವು ಶೀಘ್ರ ಗುಣಮುಖರಾಗಿ," ಎಂದು ಹಾರೈಸಿದೆ.
2024ರಲ್ಲಿ 30 ಲಕ್ಷ ರೂ. ಗಳಿಗೆ ಆರ್‌ಸಿಬಿ ತಂಡ ಸೇರಿಕೊಂಡ ಕೇಟ್ ಕ್ರಾಸ್ ಇದುವರೆಗೂ ಡಬ್ಲ್ಯೂ ಪಿಎಲ್‌ನಲ್ಲಿ ಪದಾರ್ಪಣೆ ಮಾಡದಿದ್ದರೂ, ರಾಷ್ಟ್ರೀಯ ತಂಡದ ಪರ 18 ಟಿ20ಐ ಪಂದ್ಯಗಳಿಂದ 14 ವಿಕೆಟ್ ಪಡೆದಿದ್ದಾರೆ. ಅಲ್ಲದೆ 72 ಏಕದಿನ ಹಾಗೂ 8 ಟೆಸ್ಟ್ ಪಂದ್ಯದಲ್ಲಿ ಆಡಿದ್ದಾರೆ.