Yaduveer Wadiyar: ಪೌರಕಾರ್ಮಿಕರು, ದಲಿತರ ಜತೆ ಸಂಸದ ಯದುವೀರ್ ಸಹಪಂಕ್ತಿ ಭೋಜನ
Yaduveer Wadiyar: ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ದಲಿತರ ಕಾಲೋನಿಯ ಮಂಜುಳಮ್ಮ ಮನೆ ಬಳಿ ಸಹಪಂಕ್ತಿ ಭೋಜನ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಂಸದ ಯದುವೀರ್ ಒಡೆಯರ್ ಭೋಜನ ಸವಿದಿದ್ದು, ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.
ಚಿತ್ರದುರ್ಗ: ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಅವರು ದಲಿತ ಕಾಲೋನಿಯಲ್ಲಿ ಪೌರಕಾರ್ಮಿಕರು, ದಲಿತರ ಜತೆ ಸಹಪಂಕ್ತಿ ಭೋಜನ ಮಾಡಿ ಸಮಾನತೆಯ ಸಂದೇಶ ಸಾರಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ದಲಿತರ ಕಾಲೋನಿಯ ಮಂಜುಳಮ್ಮ ಮನೆ ಬಳಿ ಸಹಪಂಕ್ತಿ ಭೋಜನ ಆಯೋಜನೆ ಮಾಡಲಾಗಿತ್ತು. ಈ ವೇಳೆ ಸಂಸದ ಯದುವೀರ್ ಒಡೆಯರ್ ಭೋಜನ ಸವಿದಿದ್ದು, ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿನ ದಲಿತ ಕಾಲೋನಿಯಲ್ಲಿ ಸಹಪಂಕ್ತಿ ಭೋಜನ ಆಯೋಜಿಸಲಾಗಿತ್ತು. ಯದುವೀರ್ ಒಡೆಯರ್ ಜತೆ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಮುಖಂಡ ಲಕ್ಷ್ಮಿಕಾಂತ್ ಮತ್ತಿತರರು ಇದ್ದರು.
ಸಹಪಂಕ್ತಿ ಭೋಜನದ ಬಳಿಕ ಸಂಸದ ಯದುವೀರ್ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, 'ಸಮಸ್ತ ನಾಗರಿಕರಿಗೂ ಸಂವಿಧಾನದಿಂದ ಸಮಾನ ಹಕ್ಕುಗಳಿವೆ. ಯಾರೇ ಅಧಿಕಾರದಲ್ಲಿ ಇರಲಿ, ನಾಗರಿಕರಿಗೆ ಸಮಾನ ಹಕ್ಕುಗಳಿರುತ್ತವೆ. ಅರ್ಧ ಸತ್ಯ ಮಂಡಿಸುವ ಮೂಲಕ ಅಪಪ್ರಚಾರ ಮಾಡುವ ಮಂದಿಗೆ ನಾವು ಉತ್ತರ ಕೊಡಬೇಕಿದೆ. ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿ ಸಂವಿಧಾನ ಬದಲಿಸುತ್ತಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
'ನಮ್ಮ ಪಕ್ಷದ ನಾಯಕರು ಎಂದೂ ಅಧಿಕೃತವಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಪಕ್ಷದ ಲಾಭಕ್ಕಾಗಿ ಸಂವಿಧಾನ ಬದಲಿಸಿರುವವರು ಯಾರು? ಸಂವಿಧಾನದ ಮೂಲಕ ಜನರನ್ನು ಸುಭದ್ರವಾಗಿಟ್ಟಿರುವವರು ಯಾರು ಎಂದು ಜನ ನೋಡಿದ್ದಾರೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ತಿದ್ದುಪಡಿಯ ಮೂಲಕ ಅಧಿಕಾರ ಉಳಿಸಿಕೊಳ್ಳುವ ಕೆಲಸ ಮಾಡಿದವರ ಬಗ್ಗೆ ಜನಕ್ಕೆ ತಿಳಿದಿದೆ. ಅಗತ್ಯ ಇರುವುದಕ್ಕಿಂತ ಹೆಚ್ಚಿನ ತಿದ್ದುಪಡಿ ಮಾಡಿದರು. ಅದು ಸಂವಿಧಾನದ ಮೇಲೆ ನಡೆದ ಹಲ್ಲೆಯಾಗಿತ್ತು. ತಿದ್ದುಪಡಿ ಮಾಡುವ ನಿಯಮಗಳನ್ನೇ ತಿದ್ದುಪಡಿ ಮಾಡಿದರು' ಎಂದರು.
'ಸಂಪೂರ್ಣ ಭಾರತದ ಅಭಿವೃದ್ಧಿ ನಮ್ಮ ಗುರಿ. 25 ಕೋಟಿ ಜನರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಡತನದಿಂದ ಹೊರ ತಂದಿದ್ದಾರೆ. ಮುಂದಿನ ಎರಡು ದಶಕಕ್ಕೆ ಭಾರತ ಎಷ್ಟು ಬಲಿಷ್ಠ ಇರಬೇಕೆಂದು ಪ್ರಧಾನಿ ಯೋಚಿಸಿದ್ದಾರೆ. ಮುಂಬರುವ ಪೀಳಿಗೆಯ ದೃಷ್ಟಿಯಿಂದ ನೀವೆಲ್ಲಾ ನಮಗೆ ಕೈಜೋಡಿಸಿ' ಎಂದು ಮನವಿ ಮಾಡಿದರು.
ವಿವಿ ಸಾಗರ ಜಲಾಶಯಕ್ಕೆ ಸಂಸದ ಯದುವೀರ್ ಬಾಗಿನ ಅರ್ಪಣೆ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಿವಿ ಸಾಗರ ವಾಣಿವಿಲಾಸ ಸಾಗರ ಜಲಾಶಯಕ್ಕೆ ಸಂಸದ ಯದುವೀರ್ ಮಂಗಳವಾರ ಬಾಗಿನ ಅರ್ಪಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಯದುವೀರ್ ಅವರು, ಇದೊಂದು ಅತ್ಯಂತ ಸಂತೋಷದ ವಿಷಯ. ಈ ಭಾಗದ ಜನರಿಗೂ, ಮೈಸೂರಿನ ಅರಮನೆಗೂ ಅವಿನಾಭಾವ ಸಂಬಂಧವಿದೆ. ಈ ಭಾಗದ ಜನರಿಗೆ ನೀರು ಕೊಡುವ ದೃಷ್ಟಿಯಿಂದ ಈ ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಅರಮನೆಗೆ ನಿಕಟವಾದ ಸಂಬಂಧ ಇರುವುದರಿಂದ ಬಾಗಿನ ಅರ್ಪಣೆ ಮಾಡಲಾಗಿದೆ. ಮೂರನೇ ಬಾರಿ ಜಲಾಶಯ ತುಂಬಿರುವುದರಿಂದ ಗಂಗೆ, ವರುಣನಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಬಣ ರಾಜಕೀಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂಸದರಾಗಿ ನನ್ನ ಚಟುವಟಿಕೆ ಮುಂದುವರಿಸುತ್ತಿದ್ದೇನೆ. ಮೇಲ್ಮಟ್ಟದಲ್ಲಿ ನಡೆಯುತ್ತಿರುವುದನ್ನು ಕಾರ್ಯಕರ್ತರಾಗಿ ಅನುಭವಿಸುತ್ತಿದ್ದೇವೆ. ನಾವು ಆಚೆ ಬಂದ್ಮೇಲೆ ಒಗ್ಗಟ್ಟಿನ ಪ್ರದರ್ಶನ ಆಗಬೇಕಿದೆ. ಏನೇ ಸಮಸ್ಯೆ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗಬೇಕಿದೆ. ಏನೇ ವ್ಯತ್ಯಾಸಗಳಿದ್ದರೂ ಅದನ್ನು ಪಕ್ಷದ ಒಳಗಡೆ ಬಗೆಹರಿಸಿ ಮುಂದುವರಿಯಬೇಕಿದೆ. ಎಲ್ಲಾ ಸಮಸ್ಯೆಗಳನ್ನು ಹೈಕಮಾಂಡ್ ಬಗೆಹರಿಸುವ ವಿಶ್ವಾಸವಿದೆ ಎಂದು ಹೇಳಿದರು.
ಬಿಜೆಪಿ ನಾಯಕರಿಂದ ವಿಜಯೇಂದ್ರ ಬದಲಾವಣೆ ಕೂಗಿಗೆ ಪ್ರತಿಕ್ರಿಯಿಸಿ, ಎಲ್ಲಾ ಪಕ್ಷದಲ್ಲಿಯೂ ಕುರ್ಚಿ ಗದ್ದಲ ನಡೆಯುತ್ತದೆ. ಕುರ್ಚಿಗಳು ಕಡಿಮೆ, ಆದರೆ ಆಕಾಂಕ್ಷಿಗಳು ಜಾಸ್ತಿ ಇದ್ದಾರೆ. ಯಾರಿಗೆ ಸಾಮರ್ಥ್ಯ, ಯೋಗ್ಯತೆ ಇರುತ್ತೋ ಅವರು ಆ ಕುರ್ಚಿಗೆ ಬರ್ತಾರೆ. ಸಮಸ್ತ ಜನ ಅದನ್ನು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Ambigara Chaudaiah: ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ನಿಜಶರಣ ಅಂಬಿಗರ ಚೌಡಯ್ಯ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ