ಬೆಂಗಳೂರು: ನಾಲ್ಕನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವಕನನ್ನು ಇರ್ಫಾನ್ ಮುಲ್ಲಾನಿ (26) ಎಂದು ಗುರುತಿಸಲಾಗಿದೆ. ಜನವರಿ 30ರಂದು ಭಾರತಿನಗರದ ಫ್ರೂಟ್ಸ್ ಮಾರ್ಕೆಟ್ ಸಮೀಪ ದುರ್ಘಟನೆ ಸಂಭವಿಸಿದೆ.
ಇರ್ಫಾನ್ ಮುಲ್ಲಾನಿ ಭಾರತಿನಗರದಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದ. ಈ ವೇಳೆ ಏಕಾಏಕಿ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ. ಕೆಳಕ್ಕೆ ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಮುಂದಾದ ವೇಳೆ ಆತನ ಕೊನೆಯುಸಿರೆಳೆದಿದ್ದ ಎಂದು ತಿಳಿದುಬಂದಿದೆ.
ಇರ್ಫಾನ್ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೋ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದು ತಿಳಿದುಬಂದಿಲ್ಲ. ಯುವಕನು ಸಂಬಂಧಿಕರ ಮನೆಗೆ ಬಂದಿದ್ದಾಗ ದುರ್ಘಟನೆ ಸಂಭವಿಸಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
ಪಾರ್ಕಿಂಗ್ ವಿಚಾರ ಕೊಲೆಯಲ್ಲಿ ಅಂತ್ಯ, ಆಟೋ ನಿಲ್ಲಿಸುವ ಕುರಿತ ತಗಾದೆ ಸ್ನೇಹಿತನ ಜೀವ ತೆಗೆಯಿತು
ಭಾರತಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅದರ ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ. ಸದ್ಯಕ್ಕೆ ಪೊಲೀಸರು ಇದನ್ನು 'ಅಸಹಜ ಸಾವು' ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಪೈಪ್‌ಲೈನ್ ಚೇಂಬರ್‌ಗೆ ಬಿದ್ದು ಬಾಲಕ ಮೃತ್ಯು
ಬೆಂಗಳೂರು: ಬೆಂಗಳೂರು ಜಲಮಂಡಳಿ ಪೈಪ್‌ಲೈನ್‌ನ ಚೇಂಬರ್‌ನಲ್ಲಿ ಬಾಲಕ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಬಳಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ (14) ಮೃತ ಬಾಲಕ.
ರಜನಿಕಾಂತ್ ಕುಟುಂಬ ತಾತಗುಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿತ್ತು. ಪ್ರೀತಮ್ ಕಳೆದ ಮೂರು ದಿನಗಳ ಹಿಂದೆ ಬಾಲಕ ಕಾಣೆಯಾಗಿದ್ದ. ಈ ಬಗ್ಗೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸುತ್ತಿದ್ದ ವೇಳೆ ಭಾನುವಾರ ಜಲಮಂಡಳಿ ಕಾಮಗಾರಿ ನಡೆಯುತ್ತಿದ್ದ ಸ್ಥಳದ ತೆರೆದ ಸಂಪ್‌ನಲ್ಲಿ ಶವ ಪತ್ತೆಯಾಗಿದೆ. ಕಳೆದ ಹಲವು ದಿನಗಳಿಂದ ಸಂಪನ್ನು ಜಲಮಂಡಳಿ ಮುಚ್ಚದೇ ಬಿಡಲಾಗಿತ್ತು. ಬಾಲಕ ಓಡಾಡುವ ವೇಳೆ ಸಂಪ್‌ಗೆ ಬಿದ್ದು ಸಾವನ್ನಪ್ಪಿದ್ದಾನೆ.
ಉದ್ಯಮಿ ಸಿಜೆ ರಾಯ್ ಅಸಹಜ ಸಾವು; ನ್ಯಾಯಾಂಗ ತನಿಖೆಗೆ ಕೇರಳ ಸಿಎಂ ಪಿಣರಾಯ್ ವಿಜಯನ್ ಆಗ್ರಹ
ಕಗ್ಗಲೀಪುರ ಪೊಲೀಸರು ಮೃತದೇಹವನ್ನು ಸಂಪ್‌ನಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.