ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೋಹಿತ್‌ ಶರ್ಮಾ ಒಡಿಐ ಕ್ರಿಕೆಟ್‌ ಭವಿಷ್ಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ರಿಕಿ ಪಾಂಟಿಂಗ್‌!

Ricky Ponting on Rohit Shrama's Future: ತಮ್ಮ ನಾಯಕತ್ವದಲ್ಲಿ ಭಾರತ ತಂಡಕ್ಕೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್‌ ಶರ್ಮಾ ಅವರನ್ನು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ರೋಹಿತ್‌ ಶರ್ಮಾ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಆಡುವ ಗುರಿಯನ್ನು ಹೊಂದಿದ್ದಾರೆಂದು ತಿಳಿಸಿದ್ದಾರೆ.

ರೋಹಿತ್‌ 2027ರ ಏಕದಿನ ವಿಶ್ವಕಪ್‌ ಆಡ್ತಾರಾ? ಪಾಂಟಿಂಗ್‌ ಹೇಳಿದ್ದಿದು!

ರೋಹಿತ್‌ ಶರ್ಮಾಗೆ ರಿಕಿ ಪಾಂಟಿಂಗ್‌ ಮೆಚ್ಚುಗೆ.

Profile Ramesh Kote Mar 12, 2025 3:32 PM

ನವದೆಹಲಿ: ತಮ್ಮ ನಾಯಕತ್ವದಲ್ಲಿ ಇತ್ತೀಚೆಗೆ ಭಾರತ ತಂಡಕ್ಕೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್‌ ಶರ್ಮಾ (Rohit Sharma) ಖಚಿತವಾಗಿಯೂ 2027ರ ಐಸಿಸಿ ಏಕದಿನ ವಿಶ್ವಕಪ್‌ (ODI World Cup 2027) ಟೂರ್ನಿಯನ್ನು ಆಡುವ ಉದ್ದೇಶವನ್ನು ಹೊಂದಿದ್ದಾರೆಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ (Ricky Ponting) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ದದ ಫೈನಲ್‌ ಪಂದ್ಯದ ಬಳಿಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಫೈನಲ್‌ ಪಂದ್ಯವನ್ನು ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರೋಹಿತ್‌ ಶರ್ಮಾ,ತಾವು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಭಾನುವಾರ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ರೋಹಿತ್‌ ಶರ್ಮಾ 76 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡದ ನಾಲ್ಕು ವಿಕೆಟ್‌ ಗೆಲುವಿಗೆ ನೆರವು ನೀಡುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಐಸಿಸಿ ರಿವ್ಯೂವ್‌ನ ಇತ್ತೀಚಿನ ಎಪಿಸೋಡ್‌ನಲ್ಲಿ ಮಾತನಾಡಿದ ರಿಕಿ ಪಾಂಟಿಂಗ್‌, ರೋಹಿತ್‌ ಶರ್ಮಾ ಫೈನಲ್‌ ಪಂದ್ಯದಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರುವ ಮೂಲಕ ನಿವೃತ್ತಿ ಬಗೆಗಿನ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ತಾವು ಇನ್ನೂ ಚೆನ್ನಾಗಿ ಆಡಬಲ್ಲರು ಹಾಗೂ ಭಾರತ ತಂಡವನ್ನು ಮುನ್ನಡೆಸಲು ಇಷ್ಟಪಡುತ್ತೇನೆಂದು ಹೇಳಿದ್ದಾರೆ ಎಂದು ಪಾಂಟಿಂಗ್‌ ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ 2027ರ ವಿಶ್ವಕಪ್‌ ಆಡಬೇಕೆಂದ ಯೋಗರಾಜ್‌ ಸಿಂಗ್‌!

ರೋಹಿತ್‌ ಶರ್ಮಾಗೆ ಏಕದಿನ ವಿಶ್ವಕಪ್‌ ಆಡುವ ಗುರಿ ಇದೆ

"ನೀವು ನಿಮ್ಮ ವೃತ್ತಿ ಜೀವನದ ಒಂದು ಹಂತಕ್ಕೆ ತಲುಪಿದ ಬಳಿಕ ಎಲ್ಲರೂ ನಿಮ್ಮ ನಿವೃತ್ತಿಗಾಗಿ ಕಾಯುತ್ತಾ ಇರುತ್ತಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಾವಿನ್ನೂ ಉತ್ತಮವಾಗಿ ಆಡಬಲ್ಲರು ಎಂಬುದನ್ನು ಸಾಬೀತುಪಡಿಸಿದ್ದರು. ನಿವೃತ್ತಿ ಬಗೆಗಿನ ಎಲ್ಲಾ ಪ್ರಶ್ನೆಗಳನ್ನು ಮರೆತು, ತಾನು ಚೆನ್ನಾಗಿ ಆಡುತ್ತಿದ್ದೇನೆಂದು ಹೇಳಲು ಪ್ರಯತ್ನಿಸುತ್ತಿದ್ದೇನೆಂದು ನಾನು ಭಾವಿಸುತ್ತೇನೆ. ಈ ತಂಡದ ಪರ ಆಡುವುದನ್ನೂ ನಾನಿನ್ನೂ ಇಷ್ಟಪಡುತ್ತೇನೆ ಹಾಗೂ ಈ ತಂಡವನ್ನು ಮುನ್ನಡೆಸಲು ಇಷ್ಟಪಡುತ್ತೇನೆಂದು ಅವರು ಖಚಿತಪಡಿಸಿದ್ದರು," ಎಂದು ರಿಕಿ ಪಾಂಟಿಂಗ್‌ ಹೇಳಿದ್ದಾರೆ.

"ರೋಹಿತ್‌ ಶರ್ಮಾ ಹೇಳಿದ ಮಾತನ್ನು ನಾವು ನೋಡುವುದಾದರೆ, 2027ರ ಐಸಿಸಿ ಏಕದಿನ ವಿಶ್ವಕಪ್‌ಟೂರ್ನಿಯಲ್ಲಿ ಆಡುವ ಯೋಜನೆಯನ್ನು ಅವರು ಹೊಂದಿದ್ದಾರೆಂದು ತಿಳಿದುಕೊಳ್ಳಬಹುದು," ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ತಿಳಿಸಿದ್ದಾರೆ.

ಭಾರತದ ಸಾರ್ವಕಾಲಿಕ ನಾಯಕರಲ್ಲಿ ರೋಹಿತ್‌ ಶರ್ಮಾ ಕೂಡ ಒಬ್ಬರು: ದಿನೇಶ್‌ ಕಾರ್ತಿಕ್‌!

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಸೋಲು ಇನ್ನೂ ರೋಹಿತ್‌ ಶರ್ಮಾಗೆ ಕಾಡುತ್ತಿದೆ ಹಾಗೂ ಅವರು ಈ ಪ್ರಶಸ್ತಿಯನ್ನು ಗೆಲ್ಲಬೇಕೆಂಬ ಉದ್ದೇಶವನ್ನು ಹೊಂದಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ತೋರಿದ ಪ್ರದರ್ಶನವನ್ನು ಗಮನಿಸಿದರೆ, ರೋಹಿತ್‌ ಶರ್ಮಾ ವೃತ್ತಿ ಜೀವನ ಸದ್ಯದಲ್ಲಿಯೇ ಅಂತ್ಯವಾಗುವುದಿಲ್ಲ ಎಂದು ರಿಕಿ ಪಾಂಟಿಂಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೋಹಿತ್‌ ಶರ್ಮಾರ ಒಡಿಐ ನಿವೃತ್ತಿ ಸದ್ಯಕ್ಕೆ ಇಲ್ಲ

"ಭಾರತ ತಂಡ ಕೊನೆಯ ಬಾರಿ ಫೈನಲ್‌ ಪಂದ್ಯದಲ್ಲಿ ಸೋತಿತ್ತು. ಇದು ರೋಹಿತ್‌ ಶರ್ಮಾ ಮನಸಿನಲ್ಲಿ ಇರಬಹುದು ಹಾಗೂ ಮತ್ತೊಮ್ಮೆ ಆ ಪಂದ್ಯವನ್ನು ಗೆಲ್ಲಬೇಕೆಂಬ ಬಯಕೆಯನ್ನು ಅವರು ಹೊಂದಿರಬಹುದು. ಟಿ20 ವಿಶ್ವಕಪ್‌ ಹಾಗೂ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಯನ್ನು ಗೆದ್ದಿದ್ದಾರೆ. ಅದರಂತೆ ಇನ್ನೊಂದು ಏಕದಿನ ವಿಶ್ವಕಪ್‌ ಅನ್ನು ಗೆಲ್ಲುವ ಉದ್ದೇಶವನ್ನು ಹೊಂದಿದ್ದಾರೆ. ಏಕೆಂದರೆ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಆಡಿದ ಆಟವನ್ನು ನೋಡಿದರೆ, ಅವರು ಈಗಲೇ ನಿವೃತ್ತಿ ಹೇಳುವುದಿಲ್ಲ ಎಂದು ಭಾವಿಸುತ್ತೇನೆ," ಎಂದು ರಿಕಿ ಪಾಂಟಿಂಗ್‌ ತಿಳಿಸಿದ್ದಾರೆ.