ಬೆಂಗಳೂರು: ಹಿಂದೂ ಧಾರ್ಮಿಕ ನಂಬಿಕೆಗಳು ಹಾಗೂ ವಾಸ್ತು ಶಾಸ್ತ್ರದಲ್ಲಿ (Vastu Shastra) ಕೆಲವು ಸಸ್ಯಗಳಿಗೆ ವಿಶೇಷ ಸ್ಥಾನವಿದೆ. ಅವುಗಳಲ್ಲಿ ಶಂಖಪುಷ್ಪ ಅಥವಾ ಅಪರಾಜಿತಾ ಗಿಡವೂ ಒಂದು. ಸುಂದರ ಹೂ ನೀಡುವ ಈ ಗಿಡವನ್ನು ಕೆಲವರು ಚಹಾ ಸೇರಿ ವಿವಿಧ ರೀತಿಯಲ್ಲಿ ಬಳಸುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಶಂಖಪುಷ್ಪ ಗಿಡವನ್ನು ಬೆಳೆಸುವುದರಿಂದ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಹಾಗೂ ಸಮೃದ್ಧಿ ಹೆಚ್ಚುತ್ತದೆ.
ಆದರೆ ವಾಸ್ತು ನಂಬಿಕೆಗಳ ಪ್ರಕಾರ, ಗಿಡವನ್ನು ಬೆಳೆಸುವುದಷ್ಟೇ ಅಲ್ಲದೆ ಅದನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಲಾಗುತ್ತದೆ ಎಂಬುದಕ್ಕೂ ಮಹತ್ವವಿದೆ. ಹಾಗಾದರೆ ಶಂಖಪುಷ್ಪ ಗಿಡವನ್ನು ವಾಸ್ತು ಶಾಸ್ತ್ರದ ಸಲಹೆಯಂತೆ (Vastu Tips) ಯಾವ ದಿಕ್ಕಿನಲ್ಲಿ ನೆಡುವುದು ಶುಭ? ಯಾವ ದಿನ ನೆಟ್ಟರೆ ಉತ್ತಮ? ತಿಳಿಯೋಣ.
ಯಾವ ದಿಕ್ಕಿನಲ್ಲಿ ನೆಡಬೇಕು?
ವಾಸ್ತು ನಂಬಿಕೆಗಳ ಪ್ರಕಾರ ಈಶಾನ್ಯ, ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಶಂಖಪುಷ್ಪ ಗಿಡವನ್ನು ಬೆಳೆಸುವುದು ಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕುಗಳನ್ನು ದೇವತೆಗಳು ಹಾಗೂ ಕುಬೇರನೊಂದಿಗೆ ಸಂಬಂಧಿಸಿದ ದಿಕ್ಕುಗಳೆಂದು ನಂಬಲಾಗುತ್ತದೆ. ಹೀಗಾಗಿ ಇಲ್ಲಿ ಗಿಡವನ್ನು ಬೆಳೆಸುವುದರಿಂದ ಮನೆಯಲ್ಲಿ ಐಶ್ವರ್ಯ, ಸಮೃದ್ಧಿ ಹಾಗೂ ಸಕಾರಾತ್ಮಕತೆ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.
ಯಾವ ದಿನ ನೆಡುವುದು ಶುಭ?
ಶಂಖಪುಷ್ಪ ಗಿಡವನ್ನು ಗುರುವಾರ ಅಥವಾ ಶುಕ್ರವಾರ ನೆಡುವುದು ಉತ್ತಮ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ. ಗುರುವಾರವನ್ನು ಮಹಾವಿಷ್ಣುವಿಗೆ ಹಾಗೂ ಶುಕ್ರವಾರವನ್ನು ಮಹಾಲಕ್ಷ್ಮೀ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಗಿಡ ನೆಡುವುದರಿಂದ ಲಕ್ಷ್ಮೀ-ನಾರಾಯಣರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಹಣದ ವಿಚಾರದಲ್ಲಿ ಈ ವಾಸ್ತು ನಿಯಮಗಳನ್ನು ನಿರ್ಲಕ್ಷಿಸಬೇಡಿ; ಈ ಸ್ಥಳಗಳಲ್ಲಿ ದುಡ್ಡು ಇಡುವುದು ಅಶುಭ!
ಮನೆಯ ಎಲ್ಲಿ ಇಟ್ಟರೆ ಉತ್ತಮ?
ವಾಸ್ತು ನಂಬಿಕೆಗಳ ಪ್ರಕಾರ, ಮನೆಯ ಮುಖ್ಯ ಬಾಗಿಲಿನ ಬಲಭಾಗದಲ್ಲಿ ಶಂಖಪುಷ್ಪ ಗಿಡವನ್ನು ಕುಂಡದಲ್ಲಿ ಇಡುವುದು ಶುಭವೆಂದು ಹೇಳಲಾಗುತ್ತದೆ. ಇದರಿಂದ ಮನೆಯೊಳಗೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ನಕಾರಾತ್ಮಕ ಪ್ರಭಾವಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.
ಈ ದಿಕ್ಕಿನಲ್ಲಿ ಇಡಬೇಡಿ
ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ಶಂಖಪುಷ್ಪ ಗಿಡವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದನ್ನು ತಪ್ಪಿಸುವುದು ಉತ್ತಮ. ಈ ದಿಕ್ಕುಗಳಲ್ಲಿ ಗಿಡವನ್ನು ಇಟ್ಟರೆ ನಕಾರಾತ್ಮಕತೆ ಹೆಚ್ಚಾಗಿ, ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ.