ಬೆಂಗಳೂರು: ಡಾ. ಶಿವ ರಾಜ್‌ಕುಮಾರ್ ಮತ್ತು ಧನಂಜಯ ಅಭಿನಯಿಸುತ್ತಿರುವ ಬಹು ನಿರೀಕ್ಷಿತ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದ (666 Operation Dream Theatre) ಶೂಟಿಂಗ್ ಭರದಿಂದ ಸಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಿ ನಿರ್ದೇಶಕ ಎಂ. ಹೇಂಮತ್ ರಾವ್ ಚಿತ್ರೀಕರಣ ನಡೆಸುತ್ತಿದ್ದಾರೆ. ಇದೀಗ '666 ಆಪರೇಷನ್ ಡ್ರೀಮ್ ಥಿಯೇಟರ್' ಅಂಗಳಕ್ಕೆ WWE ಸೂಪರ್ ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ (Sukhwinder Singh Grewal) ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಖಾನ್ ನಟನೆಯ ʼಜವಾನ್ʼ ಹಾಗೂ ಆರ್ಯನ್ ಖಾನ್ ನಿರ್ದೇಶನದ 'ಬ್ಯಾಡ್ಸ್ ಆಫ್ ಬಾಲಿವುಡ್'ನಲ್ಲಿ ನಟಿಸಿರುವ ಸುಖಿ ಗ್ರೆವಾಲ್ ಈಗ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.
ಸದ್ಯ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಬಿರುಸಿ ನಿಂದ ನಡೆಯುತ್ತಿದೆ. ಸುಖಿ ಎಂಟ್ರಿ ಬಗ್ಗೆ ಮಾತನಾಡಿದ ನಿರ್ದೇಶಕ ಹೇಮಂತ್ ಎಂ. ರಾವ್, 'ʼನಮಗೆ ಭಯಾನಕವಾಗಿ ಕಾಣುವ ವ್ಯಕ್ತಿತ್ವದ ಪಾತ್ರಧಾರಿ ಬೇಕಿತ್ತು. ದೊಡ್ಡ ಪರದೆಯನ್ನೂ ಚಿಕ್ಕದಾಗಿ ಕಾಣುವಂತೆ ಮಾಡಿದ ವ್ಯಕ್ತಿ. ಸುಖಿ ಪಾತ್ರವು ಒಂದು ರೀತಿಯ ಪಾತ್ರಕ್ಕೆ ಸರಿ ಹೊಂದುತ್ತದೆ. ನಾನು ಸೆಟ್‌ನಲ್ಲಿ ಭೇಟಿಯಾದ ಅತ್ಯಂತ ಸೌಮ್ಯ ವ್ಯಕ್ತಿಗಳಲ್ಲಿ ಅವರು ಒಬ್ಬರು. ಇದು ಅವರ ದೈತ್ಯ ವ್ಯಕ್ತಿತ್ವಕ್ಕೆ ಸಾಕಷ್ಟು ಭಿನ್ನವಾಗಿದೆ. ಅವರ ವ್ಯಕ್ತಿತ್ವವನ್ನು ಸರಿಹೊಂದಿಸಲು ನಾವು ಸೆಟ್‌ನ ಎತ್ತರವನ್ನು ಹೆಚ್ಚಿಸಬೇಕಾಗಿತ್ತು ಎಂದು ನಾನು ಹೇಳಿದಾಗ ಅದು ಉತ್ಪ್ರೇಕ್ಷೆಯಾಗುವುದಿಲ್ಲʼ' ಎಂದು ಹೇಳಿ ಕೊಂಡಿದ್ದಾರೆ.
ಸುಖ್ವಿದರ್ ಸಿಂಗ್ ಗ್ರೆವಾಲ್ ಮಾತನಾಡಿ, ʼ'ದಕ್ಷಿಣ ಚಲನಚಿತ್ರೋದ್ಯಮದ ಬಗ್ಗೆ ನಾನು ಬಹಳಷ್ಟು ಕೇಳಿದ್ದೇನೆ. ಕನ್ನಡ ಚಲನಚಿತ್ರೋದ್ಯಮದ ಭಾಗವಾಗುವುದು ಅದ್ಭುತವಾಗಿದೆ. ಧನಂಜಯ ಮತ್ತು ಡಾ. ಶಿವ ರಾಜ್‌ಕುಮಾರ್ ಇರುವ ಚಿತ್ರದಲ್ಲಿ ಕೆಲಸ ಮಾಡುವುದು ಒಂದು ಗೌರವ. ನಾನು ಸೆಟ್‌ನಲ್ಲಿರಲು ಇಷ್ಟಪಡುತ್ತೇನೆ. ಇಲ್ಲಿನ ಜನರು ತುಂಬಾ ಪ್ರೀತಿಯಿಂದ ಇದ್ದಾರೆ. ನನ್ನ ಅಭಿನಯಕ್ಕೆ ಕನ್ನಡ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನಾನು ಎದುರು ನೋಡುತ್ತಿದ್ದೇನೆ ಮತ್ತು ಇಲ್ಲಿನ ಹೆಚ್ಚಿನ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ. ಸೆಟ್‌ನಲ್ಲಿ ವಾತಾವರಣ ಮತ್ತು ಮುಖ್ಯವಾಗಿ ಬೆಂಗಳೂರಿನ ವಾತಾವರಣ ನಾನು ಹೆಚ್ಚು ಆನಂದಿಸಿದೆ. ನಾನು ನಗರವನ್ನು ಹೆಚ್ಚು ಅನ್ವೇಷಿಸಿಲ್ಲ, ಆದರೆ ಇಲ್ಲಿನ ಆಹಾರವನ್ನು ನಾನು ಆನಂದಿಸಿದೆ. ಅದಕ್ಕಾಗಿಯೇ ನಾನು ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯಬೇಕಾಯಿತುʼ' ಎಂದರು.
ಇದನ್ನು ಓದಿ:Landlord Movie: ರಚಿತಾ ರಾಮ್ ಹುಟ್ಟುಹಬ್ಬಕ್ಕೆ ʼಲ್ಯಾಂಡ್ ಲಾರ್ಡ್ʼ ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ
ಈಗಾಗಲೇ ತಮ್ಮ ಭಾಗದ ಆ್ಯಕ್ಷನ್ ಸೀಕ್ವೆನ್ಸ್ ಅನ್ನು ಸುಖಿ ಮುಕ್ತಾಯಗೊಳಿಸಿದ್ದಾರೆ. ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ಮಿಸಲಾಗುತ್ತಿದೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಈ ಸಿನಿಮಾಕ್ಕಿದೆ. ರೆಟ್ರೋ ಲುಕ್‌ನಲ್ಲಿ ಡಾ. ಶಿವ ರಾಜ್‌ಕುಮಾರ್ ಹಾಗೂ ಧನಂಜಯ್ ಕಾಣಿಸಿಕೊಂಡಿದ್ದು, ಪೋಸ್ಟರ್ ಈಗಾಗಲೇ ರಿಲೀಸ್ ಆಗಿದೆ. ಈ ಲುಕ್ ಡಾ. ರಾಜ್ ಕುಮಾರ್ ಅವರ ಬಾಂಡ್ ಸಿನಿಮಾಗಳಾದ ʼಜೇಡರ ಬಲೆʼ, ʼಆಪರೇಷನ್ ಡೈಮಂಡ್ ರಾಕೆಟ್ʼ, ʼಗೋವಾದಲ್ಲಿ CID 999ʼ ನೆನಪಿಸುತ್ತದೆ.