ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರು ಸಾಲಾಗಿ ಬಾಲಿವುಡ್‌ನತ್ತ ಹೆಜ್ಜೆ ಇಡುತ್ತಿದ್ದಾರೆ. ಎ. ಹರ್ಷ, ಸಚಿನ್ ರವಿ, ರವಿವರ್ಮ ಹಾಗೂ ಪವನ್ ಒಡೆಯರ್ ಅವರ ಸಾಲಿಗೆ ಈಗ '777 ಚಾರ್ಲಿ' ಸಿನಿಮಾ ಖ್ಯಾತಿಯ ನಿರ್ದೇಶಕ ಕೆ. ಕಿರಣ್‌ರಾಜ್ ಸೇರಲು ಸಜ್ಜಾಗಿದ್ದಾರೆ. ಅವರಿಗೆ ಹಿಂದಿ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆ ಹಾಗೂ ಸ್ಟಾರ್ ನಟರಿಂದ ಭಾರಿ ಬೇಡಿಕೆ ಬಂದಿದೆ.
ಈ ಹಿಂದೆ ಬಾಲಿವುಡ್ ನಟ ಜಾನ್ ಅಬ್ರಹಾಂ ಜೊತೆ ಕಿರಣ್‌ರಾಜ್ ಕಾಣಿಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಕಿರಣ್‌ರಾಜ್ ಅವರು ಬಾಲಿವುಡ್‌ನ ಪ್ರಸಿದ್ಧ ನಟರಾದ ಸೈಫ್ ಅಲಿ ಖಾನ್ ಹಾಗೂ ಕಾರ್ತಿಕ್ ಆರ್ಯನ್ ಅವರೊಂದಿಗೆ ಕಥೆಯ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಮುಖ ಸ್ಟಾರ್‌ಗಳಿಗೆ ಕಥೆ ವಿವರಿಸಿದ ಕಿರಣ್‌ರಾಜ್
ಲಭ್ಯವಿರುವ ಮಾಹಿತಿಯ ಪ್ರಕಾರ, ಕಿರಣ್‌ರಾಜ್ ಅವರು ಬಾಲಿವುಡ್‌ನ ಹಲವು ಪ್ರಮುಖ ನಟರಿಗೆ ತಮ್ಮ ಕಥೆಗಳನ್ನು ಹೇಳಿದ್ದಾರೆ. ಸೈಫ್ ಅಲಿ ಖಾನ್ ಅಥವಾ ಕಾರ್ತಿಕ್ ಆರ್ಯನ್ ಪೈಕಿ ಯಾರ ಸಿನಿಮಾಗೆ ಅಂತಿಮ ಮುದ್ರೆ ಬೀಳಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಷ್ಟೇ ಅಲ್ಲದೆ, ಬಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯೊಂದಿಗೂ ಚರ್ಚೆಗಳು ನಡೆಯುತ್ತಿದ್ದು, ಪ್ರಾಜೆಕ್ಟ್ ಅಂತಿಮಗೊಂಡ ನಂತರ ನಿರ್ಮಾಣ ಸಂಸ್ಥೆಯೇ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಿದೆ.ಯಂತೆ.
ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ '777 ಚಾರ್ಲಿ'
2022ರ ಜೂನ್‌ನಲ್ಲಿ ಬಿಡುಗಡೆಯಾಗಿದ್ದ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ, ಏಕಾಂಗಿ ವ್ಯಕ್ತಿ ಹಾಗೂ ನಾಯಿಯ ನಡುವಿನ ಭಾವುಕ ಸಂಬಂಧದ ಕಥೆಯೊಂದಿಗೆ ದೇಶಾದ್ಯಂತ ಅಪಾರ ಯಶಸ್ಸು ಕಂಡಿತ್ತು. ಈ ಚಿತ್ರದ ಮೂಲಕ ಕಿರಣ್‌ರಾಜ್ ಅವರ ಕಥೆ ಹೇಳುವ ಶೈಲಿಯು ಗಡಿಗಳನ್ನು ದಾಟಿ ಪ್ರೇಕ್ಷಕರನ್ನು ತಲುಪಬಲ್ಲದು ಎಂಬುದು ಸಾಬೀತಾಗಿತ್ತು.
ಧ್ರುವ ಸರ್ಜಾ ಸಿನಿಮಾವೋ? ಅಥವಾ ಬಾಲಿವುಡ್ ಚಿತ್ರವೋ?
ಮತ್ತೊಂದೆಡೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಕಿರಣ್‌ರಾಜ್ ಮಾಡಲಿರುವ ಹೊಸ ಸಿನಿಮಾದ ಕೆಲಸಗಳು ಕೂಡ ಸದ್ದಿಲ್ಲದೆ ಚಾಲ್ತಿಯಲ್ಲಿವೆ. ಹಾಗಾಗಿ, ಕಿರಣ್‌ರಾಜ್ ಅವರ ಮುಂದಿನ ಹೆಜ್ಜೆ ಧ್ರುವ ಸರ್ಜಾ ಜೊತೆಗಿನ ಕನ್ನಡ ಸಿನಿಮಾವೋ ಅಥವಾ ಬಾಲಿವುಡ್‌ನ ಹಿಂದಿ ಸಿನಿಮಾವೋ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಸದ್ಯಕ್ಕೆ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಎರಡೂ ರಂಗಗಳಲ್ಲಿ ಬ್ಯುಸಿಯಾಗಿರುವ ಕಿರಣ್‌ರಾಜ್ ಅವರಿಂದ ಅಧಿಕೃತ ಮಾಹಿತಿ ಹೊರಬರುವುದನ್ನೇ ಸಿನಿಪ್ರಿಯರು ಕಾಯುತ್ತಿದ್ದಾರೆ.