ʻಗೋಲ್ಡನ್ ಸ್ಟಾರ್ʼ ಗಣೇಶ್ ನಟನೆಯ ಸೂಪರ್ ಹಿಟ್ 'ಕೃಷ್ಣಂ ಪ್ರಣಯ ಸಖಿ' ಚಿತ್ರವನ್ನು ನಿರ್ಮಿಸಿ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ್ದ ನಿರ್ಮಾಪಕ ಪ್ರಶಾಂತ್ ಜಿ. ರುದ್ರಪ್ಪ ಇದೀಗ ಮತ್ತೊಂದು ಬಿಗ್ ಬಜೆಟ್ ಚಿತ್ರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ತ್ರಿಶೂಲ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿ ಮೂಡಿಬರುತ್ತಿರುವ ಈ ನೂತನ ಚಿತ್ರದಲ್ಲಿ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಅವರ ಪುತ್ರ, ನಟ ಆದಿ ಸಾಯಿಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಸದ್ಯಕ್ಕೆ ‘ಪ್ರೊಡಕ್ಷನ್ ನಂ. 3’ ಎಂಬ ತಾತ್ಕಾಲಿಕ ಶೀರ್ಷಿಕೆಯಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನವರಸನ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಕೌತುಕ ಕೆರಳಿಸುವ ನಿರೂಪಣೆ
ದೈವಿಕ ರಹಸ್ಯ, ಸಸ್ಪೆನ್ಸ್ ಹಾಗೂ ರೋಮಾಂಚನಕಾರಿ ಕಥಾಹಂದರವನ್ನು ಹೊಂದಿರುವ ಈ ಚಿತ್ರವು ಆಧ್ಯಾತ್ಮಿಕ ನಂಬಿಕೆಗಳು, ಪುರಾತನ ಆಚರಣೆಗಳು, ಅತಿಮಾನುಷ ಶಕ್ತಿಗಳು ಮತ್ತು ನಿಗೂಢ ಸಂಗತಿಗಳ ಸುತ್ತ ಸಾಗಲಿದೆ. ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಬಗೆಯ ದೃಶ್ಯವೈಭವ ಹಾಗೂ ಭಿನ್ನ ಸಿನಿಮೀಯ ಅನುಭವ ಕಟ್ಟಿಕೊಡುವ ಉದ್ದೇಶದಿಂದ ಚಿತ್ರತಂಡ ಸಿದ್ಧತೆ ನಡೆಸಿದೆ. ಅದ್ದೂರಿ ಮೇಕಿಂಗ್, ಕೌತುಕ ಕೆರಳಿಸುವ ನಿರೂಪಣೆ, ಗಾಢ ವಾತಾವರಣ ಸೃಷ್ಟಿಸುವ ದೃಶ್ಯ ಸಂಯೋಜನೆ ಮತ್ತು ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಪ್ರಮುಖ ಜೀವಾಳವಾಗಿರಲಿವೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
ಅಕ್ಟೋಬರ್ 20ರಂದು ಹೆಚ್ಚಿನ ಮಾಹಿತಿ
ಈ ಚಿತ್ರದ ಅನೌನ್ಸ್‌ಮೆಂಟ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ತನ್ನ ವಿಶಿಷ್ಟ ಕಾನ್ಸೆಪ್ಟ್‌ನಿಂದ ಸಿನಿಪ್ರಿಯರ ಗಮನ ಸೆಳೆದಿದೆ. ಕತ್ತಲು ಆವರಿಸಿದ ದಟ್ಟ ಅರಣ್ಯ, ಅದರ ಮಧ್ಯೆ ಇರುವ ಪುರಾತನ ಆರಾಧನಾ ಸ್ಥಳ ಹಾಗೂ ಮಧ್ಯಭಾಗದಲ್ಲಿ ತ್ರಿಶೂಲವನ್ನು ಸುತ್ತಿಕೊಂಡು ಹೆಡೆಯೆತ್ತಿ ನಿಂತಿರುವ ಬೃಹತ್ ನಾಗರಹಾವು ಪೋಸ್ಟರ್‌ನ ನಿಗೂಢತೆಯನ್ನು ಹೆಚ್ಚಿಸಿದೆ.
Yash Toxic: ‘ಲಗಾನ್’ ಸಿನಿಮಾ ಉದಾಹರಣೆ ನೀಡಿ ʼಟಾಕ್ಸಿಕ್ʼ ಬಗ್ಗೆ ಅಜನೀಶ್ ಲೋಕನಾಥ್ ಏನಂದ್ರು?
ಇದರ ಸುತ್ತಲೂ ಕತ್ತಿಗಳು, ಕೊಡಲಿಗಳು, ಭರ್ಜಿಗಳು, ಅರ್ಧಚಂದ್ರಾಕೃತಿಯ ಆಯುಧಗಳು ಹಾಗೂ ಗದೆಗಳನ್ನು ಜೋಡಿಸಲಾಗಿದ್ದು, ಚಿತ್ರದ ಸುತ್ತಲಿನ ಕೌತುಕವನ್ನು ದುಪ್ಪಟ್ಟು ಮಾಡಿದೆ. ಈ ಪ್ರಾಜೆಕ್ಟ್‌ಗೆ ಸಂಬಂಧಿಸಿದ ಮಹತ್ವದ ವಿವರಗಳನ್ನು ಇದೇ ಅಕ್ಟೋಬರ್ 20ರಂದು ಅಧಿಕೃತವಾಗಿ ಬಹಿರಂಗಪಡಿಸುವುದಾಗಿ ಚಿತ್ರತಂಡ ಘೋಷಿಸಿದೆ.
ಆದಿ ಸಾಯಿಕುಮಾರ್ ಅವರ ವೃತ್ತಿಜೀವನದಲ್ಲಿ ಈ ಸಿನಿಮಾ ಮತ್ತೊಂದು ಬಹುದೊಡ್ಡ ಮೈಲಿಗಲ್ಲಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಈವರೆಗೆ ಅವರು ಕಾಣಿಸಿಕೊಂಡ ಪಾತ್ರಗಳಿಗಿಂತ ಸಂಪೂರ್ಣ ಭಿನ್ನವಾದ, ಸವಾಲಿನ ಪಾತ್ರ ಇದಾಗಿದ್ದು, ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಅಜನೀಶ್ ಸಂಗೀತ ನಿರ್ದೇಶನ
ವಿಶೇಷವೆಂದರೆ, ಕನ್ನಡದ ಹೆಮ್ಮೆಯ 'ಕಾಂತಾರ' ಸೇರಿದಂತೆ ತೆಲುಗಿನ 'ವಿರೂಪಾಕ್ಷ' ಹಾಗೂ 'ಮಂಗಳವಾರಂ' ಮುಂತಾದ ಮಿಸ್ಟರಿ-ಥ್ರಿಲ್ಲರ್ ಚಿತ್ರಗಳಿಗೆ ಮೈನವಿರೇಳಿಸುವ ಸಂಗೀತ ನೀಡಿ ಸೈ ಎನಿಸಿಕೊಂಡಿರುವ ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ಒದಗಿಸುತ್ತಿದ್ದಾರೆ.
ಚಿತ್ರದ ಶೀರ್ಷಿಕೆ, ಸಂಪೂರ್ಣ ತಾರಾಗಣ ಹಾಗೂ ಇತರ ತಾಂತ್ರಿಕ ಬಳಗದ ವಿವರಗಳನ್ನು ಸದ್ಯಕ್ಕೆ ರಹಸ್ಯವಾಗಿಟ್ಟಿರುವ ನಿರ್ಮಾಣ ಸಂಸ್ಥೆ, ಹಂತ ಹಂತವಾಗಿ ಪ್ರಚಾರ ಕಾರ್ಯಗಳ ಮೂಲಕ ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ಫಸ್ಟ್ ಲುಕ್ ಹಾಗೂ ಟೈಟಲ್ ಲಾಂಚ್ ಮೂಲಕ ಚಿತ್ರತಂಡ ಶೀಘ್ರದಲ್ಲೇ ಪ್ರೇಕ್ಷಕರ ಎದುರು ಬರಲಿದೆ.