ನಟ ಯಶ್ ಅಭಿನಯದ ʻಟಾಕ್ಸಿಕ್ʼ ಚಿತ್ರದ ಟೀಸರ್ ನಲ್ಲಿ ಅಶ್ಲೀಲ ದೃಶ್ಯಗಳು ಮಹಿಳೆಯರ ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಆ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಇಂದು (ಜ.12) ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ದೂರು ನೀಡಿದೆ.
ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ
"ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಅಪಮಾನವಾಗುತ್ತಿರುವ ಕಾರಣ, ಟಾಕ್ಸಿಕ್ ಟೀಸರ್ ಅನ್ನು ರದ್ದು ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಟಾಕ್ಸಿಕ್ ಟೀಸರ್ ನಲ್ಲಿರುವ ಅಶ್ಲೀಲ ದೃಶ್ಯಗಳನ್ನ ತೆಗೆದುಹಾಕುವಂತೆ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಬೆಂಗಳೂರಿನಲ್ಲಿರುವ ರಾಜ್ಯ ಮಹಿಳಾ ಅಯೋಗದ ಕಚೇರಿಗೆ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಸದಸ್ಯರು ಹೋಗಿ ದೂರು ಸಲ್ಲಿಸಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಇರದ ಕಾರಣ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪ ಆರ್ ಅವರಿಗೆ ದೂರನ್ನು ನೀಡಲಾಗಿದೆ.
ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ರೀ ಎಂಟ್ರಿ?; ಟಾಕ್ಸಿಕ್ ಸ್ಟೈಲ್‌ನಲ್ಲಿ ಎಚ್‌ಡಿಕೆ ವಿಡಿಯೋ ರಿಲೀಸ್!
ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಕಾರ್ಯದರ್ಶಿ ಉಷಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಯಶ್ ಅವರು ಒಂದು ಸಂದರ್ಶನದಲ್ಲಿ ಹೇಳುತ್ತಾರೆ, ನಾನು ಮಾಡುವ ಸಿನಿಮಾಗಳನ್ನು ಇಡೀ ಫ್ಯಾಮಿಲಿ ಒಟ್ಟಿಗೆ ನೋಡಬೇಕು. ಅಂತ ಕಂಫರ್ಟ್ ಇರ್ಬೇಕು ಅಂತಾರೆ. ಇದೇನಾ ಅದು? ಎಲ್ಲಿ ಇದೆ ಕಂಫರ್ಟ್? ಟೀಸರ್‌ನಲ್ಲಿರೋ ದೃಶ್ಯಗಳನ್ನ ತೆಗೆದು ಹಾಕಬೇಕು. ಕನ್ನಡ ಸಿನಿಮಾವನ್ನು ಹಾಲಿವುಡ್ ರೇಂಜ್‌ಗೆ ತೆಗೆದುಕೊಂಡು ಹೋಗಬೇಕು ಎಂದರೆ, ನಮ್ಮ ಸಂಸ್ಕೃತಿ ಇರುವ ಸಿನಿಮಾಗಳನ್ನು ಮಾಡಲಿ. ಅದು ಬಿಟ್ಟು ಈ ರೀತಿಯ ಸಿನಿಮಾಗಳು ಅಲ್ಲ" ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ದೂರಿನಲ್ಲಿ ಏನಿದೆ?
"ಈ ಚಿತ್ರದ ಟೀಸರ್‌ನಲ್ಲಿರುವ ಅಶ್ಲೀಲ ಮತ್ತು ಪ್ರೌಢ ದೃಶ್ಯಗಳು ಹೆಂಗಳೆಯರ ಹಾಗೂ ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಅತ್ಯಂತ ಧಕ್ಕೆ ಉಂಟು ಮಾಡುತ್ತಿವೆ. ಯಾವುದೇ ವಯಸ್ಸಿನ ಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ಈ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿದ್ದು ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಮಾಡುತ್ತಿರುವ ಅವಮಾನವಾಗಿದೆ. ಸಮಾಜದ ಮೇಲೆ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಮೇಲೆ ಇದು ಬೀರುತ್ತಿರುವ ದುಷ್ಪರಿಣಾಮಗಳನ್ನು ಗಮನಿಸಿ, ರಾಜ್ಯ ಮಹಿಳಾ ಆಯೋಗವು ಈ ಕೂಡಲೇ ಮಧ್ಯಪ್ರವೇಶಿಸಬೇಕು.
ಈ ಟೀಸರ್ ಅನ್ನು ತಕ್ಷಣವೇ ರದ್ದುಗೊಳಿಸಲು ಮತ್ತು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಮ್ಮ ನಾಡಿನ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಹಿಳಾ ಆಯೋಗವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮ ಪಕ್ಷದ ಮಹಿಳಾ ಘಟಕದ ಪರವಾಗಿ ನಾವು ಒತ್ತಾಯಿಸುತ್ತೇವೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನು, ಯಶ್ ಅವರ ಟಾಕ್ಸಿಕ್ ಸಿನಿಮಾವನ್ನು ನಿರ್ದೇಶಿಸಿರುವುದು ಮಲಯಾಳಂನ ಗೀತು ಮೋಹನ್‌ದಾಸ್. ಟೀಸರ್‌ನಲ್ಲಿರುವ ದೃಶ್ಯಗಳ ಬಗ್ಗೆ ಕೆಂಡಕಾರಿರುವ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಕಾರ್ಯಕರ್ತೆಯರು, "ಗೀತು ಮೋಹನ್ ದಾಸ್, ಈ ರೀತಿ ದೃಶ್ಯ ತೆಗೆಯುವುದಕ್ಕೆ ನಿನಗೆ ನಾಚಿಗೆ ಆಗಲ್ವಾ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.