ಇಂದು ದೇಶ-ವಿದೇಶಗಳಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಜೊತೆ ಒಂದು ಸೆಲ್ಫಿ, ಆಟೋಗ್ರಾಫ್ ಪಡೆಯಲು ಜನ ಮುಗಿಬೀಳುತ್ತಾರೆ. ಆದರೆ, ಇದೇ ಯಶ್ ಬಾಲ್ಯದಲ್ಲಿ ತಮಗಿಷ್ಟವಾದ ನಟನೊಬ್ಬನಿಂದ ಆಟೋಗ್ರಾಫ್ ಸಿಗದೆ ತೀವ್ರ ಅವಮಾನ ಅನುಭವಿಸಿದ್ದರು ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಖ್ಯಾತ ಟಿವಿ ಶೋ 'ಆಪ್ ಕಿ ಅದಾಲತ್'ನಲ್ಲಿ ನಿರೂಪಕ ರಜತ್ ಶರ್ಮಾ ಎದುರು ಯಶ್ ತಮ್ಮ ಬಾಲ್ಯದ ಈ ಕಹಿ ನೆನಪನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಆರಾಧ್ಯ ದೈವ ಎಂದುಕೊಂಡಿದ್ದ ನಟನಿಂದಲೇ ಕಹಿ ಅನುಭವ
ಚಿಕ್ಕಂದಿನಲ್ಲಿ ಯಶ್ ಕೂಡ ಸಾಮಾನ್ಯ ಅಭಿಮಾನಿಯಂತೆಯೇ ಸಿನಿಮಾ ನಟರನ್ನು ಆರಾಧಿಸುತ್ತಿದ್ದರು. ಆ ಸಮಯದಲ್ಲಿ ತಮಗೆ ಅತ್ಯಂತ ನೆಚ್ಚಿನ ನಟರೊಬ್ಬರನ್ನು ಖುದ್ದಾಗಿ ಭೇಟಿಯಾಗುವ ಅವಕಾಶ ಯಶ್‌ಗೆ ಸಿಕ್ಕಿತ್ತು. ಬಹಳ ಉತ್ಸಾಹ ಮತ್ತು ಪ್ರೀತಿಯಿಂದ ಆ ನಟನ ಬಳಿ ಹೋಗಿ, "ಒಂದು ಆಟೋಗ್ರಾಫ್ ಪ್ಲೀಸ್" ಎಂದು ಕೈಚಾಚಿದ್ದರು. ಆದರೆ ಆ ನಟ ಯಶ್ ಅವರನ್ನು ಕಡೆಗಣಿಸಿದ್ದಲ್ಲದೆ, ಅತ್ಯಂತ ಒರಟಾಗಿ ವರ್ತಿಸಿ ಅವಮಾನಿಸಿ ಕಳುಹಿಸಿದ್ದರುಂತೆ.
ದ್ವೇಷದ ಬದಲು ಜೀವನ ಪಾಠ ಕಲಿತ ‘ರಾಕಿ ಭಾಯ್’
ಈ ಘಟನೆ ಬಾಲಕ ಯಶ್ ಮನಸ್ಸಿನ ಮೇಲೆ ತೀವ್ರವಾದ ಆಘಾತ ಉಂಟುಮಾಡಿತ್ತು. ಎಷ್ಟರಮಟ್ಟಿಗೆ ಎಂದರೆ, ತಾನು ಆರಾಧಿಸುತ್ತಿದ್ದ ನಟನ ಸಿನಿಮಾಗಳನ್ನು ನೋಡುವುದನ್ನೇ ಯಶ್ ಅಂದಿನಿಂದ ಶಾಶ್ವತವಾಗಿ ನಿಲ್ಲಿಸಿದರು. ತಮಗೆ ಆದ ಅವಮಾನವನ್ನು ಕೇವಲ ನೋವು ಅಥವಾ ದ್ವೇಷವಾಗಿ ಉಳಿಸಿಕೊಳ್ಳದ ಯಶ್, ಅದನ್ನು ಬದುಕಿನ ದೊಡ್ಡ ಪಾಠವನ್ನಾಗಿ ಸ್ವೀಕರಿಸಿದರು. ನಟರಾದ ಮೇಲೆ ಒತ್ತಡ, ಮನಸ್ಥಿತಿಯ ಏರುಪೇರು ಇರುವುದು ಸಹಜ.
"ದೂರದ ಊರುಗಳಿಂದ ಬರುವ ಅಭಿಮಾನಿಗಳು ನಮ್ಮೊಂದಿಗೆ ಕಳೆಯುವುದು ಕೇವಲ ಹತ್ತು ಸೆಕೆಂಡ್ ಅಥವಾ ಒಂದು ನಿಮಿಷ ಮಾತ್ರ. ಆ ಕೆಲವೇ ಕ್ಷಣಗಳಲ್ಲಿ ನಟರು ತೋರಿಸುವ ಪ್ರೀತಿ ಅಭಿಮಾನಿಗಳ ಮನಸ್ಸಿನಲ್ಲಿ ಜೀವನಪೂರ್ತಿ ಉಳಿಯುತ್ತದೆ. ಅಂದು ಬಾಲಕನಾಗಿ ನಾನು ಅನುಭವಿಸಿದ ಆ ನೋವು, ಇಂದು ನನ್ನನ್ನು ಹುಡುಕಿಕೊಂಡು ಬರುವ ಯಾವ ಅಭಿಮಾನಿಗೂ ಆಗಬಾರದು" ಎಂಬ ದೃಢ ಸಂಕಲ್ಪವನ್ನು ಯಶ್ ಮಾಡಿಕೊಂಡರು.
Yash-Radhika Pandit: ಯಶ್ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್! ಚೆಂದದ ವಿಡಿಯೊ ಶೇರ್ ಮಾಡಿದ ರಾಧಿಕಾ ಪಂಡಿತ್
ಆ ನಟ ಯಾರೆಂದು ಬಾಯಿಬಿಡದ ಯಶ್
ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಯಶ್‌ಗೆ ಅವಮಾನಿಸಿದ ಆ ನಟ ಯಾರಿರಬಹುದು ಎಂಬ ಚರ್ಚೆ ನೆಟ್ಟಿಗರಲ್ಲಿ ಶುರುವಾಗಿದೆ. ಆದರೆ ಯಶ್ ಮಾತ್ರ ಎಲ್ಲೂ ಆ ನಟನ ಹೆಸರನ್ನು ಪ್ರಸ್ತಾಪಿಸಿಲ್ಲ. ಇಂದು ನಿತ್ಯ ನೂರಾರು ಅಭಿಮಾನಿಗಳು ಯಶ್ ನಿವಾಸದ ಮುಂದೆ ಗಂಟೆಗಟ್ಟಲೆ ಕಾಯುತ್ತಾರೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಪ್ರತಿಯೊಬ್ಬರ ಬಳಿ ತೆರಳಿ, ಮುಗುಳ್ನಕ್ಕು ಕೈಕುಲುಕಿ ಫೋಟೋ ನೀಡುವುದು ಯಶ್ ಅವರ ಈ ಬಾಲ್ಯದ ಪಾಠಕ್ಕೆ ಸಾಕ್ಷಿಯಾಗಿದೆ.