ಸ್ಯಾಂಡಲ್‌ವುಡ್‌ನ ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು 'ಪೊಲೀಸ್ ಸ್ಟೋರಿ' ಚಿತ್ರದ ನಂತರ ಸುಮಾರು 15 ವರ್ಷಗಳ ಬಳಿಕ ಮತ್ತೆ ಆ್ಯಕ್ಷನ್ ಕಟ್ ಹೇಳಿರುವ 'ಡೆಡ್ಲಿ ಕಿಲ್ಲರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ಹಿನ್ನೆಲೆ ಹೊಂದಿರುವ ಈ ಚಿತ್ರದ ಭರ್ಜರಿ ಟ್ರೇಲರ್ ಅನ್ನು ಇತ್ತೀಚೆಗೆ ನಟಿ ರಾಗಿಣಿ ದ್ವಿವೇದಿ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಕೀರ್ತಿ ಸಿಲ್ವರ್ ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಟಿ. ತಂಬ್ರಳ್ಳಿಮಠ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. 'ಸಂಭ್ರಮ' ಖ್ಯಾತಿಯ ನಟ ಅಭಯ್‌ವೀರ್ ಹಾಗೂ ನಿವೀಕ್ಷಾ ಚಿತ್ರದ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ರವಿಚೇತನ್ ಹಾಗೂ ವಿಕ್ಟರಿ ವಾಸು ಅತಿಥಿಗಳಾಗಿ ಭಾಗವಹಿಸಿದ್ದರು.
ಕಷ್ಟದ ದಿನಗಳಲ್ಲಿ ಜೊತೆಯಾಗಿದ್ದ ಅಭಯ್
ಡೆಡ್ಲಿ ಕಿಲ್ಲರ್ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಟಿ ರಾಗಿಣಿ ದ್ವಿವೇದಿ, "ನಮ್ಮ ಸಿನಿಮಾದವರಿಗೆ 6 ಲಕ್ಕಿ ನಂಬರ್. ಜೂನ್ 6, 2026 ರಂದು ಈ ಚಿತ್ರದ ಟ್ರೇಲರ್ ಲಾಂಚ್ ಮಾಡುವ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ನಾನು ಚಿತ್ರರಂಗಕ್ಕೆ ಹೊಸಬಳಾಗಿ ಬಂದಾಗ ನನ್ನ ಮೊದಲ ಸಿನಿಮಾಗೆ ಆಕ್ಷನ್ ಹೇಳಿಕೊಟ್ಟವರು ಥ್ರಿಲ್ಲರ್ ಮಂಜು ಮಾಸ್ಟರ್. ಇನ್ನು, ನಾಯಕ ಅಭಯ್ ನನ್ನ ಕಷ್ಟದ ದಿನಗಳಲ್ಲಿ ನಮ್ಮ ಫ್ಯಾಮಿಲಿ ಜೊತೆ ನಿಂತಿದ್ದರು. ಕನ್ನಡಿಗರು ಹೊಸಬರ ಚಿತ್ರಗಳನ್ನು ನೋಡಿ, ಕನ್ನಡ ಚಿತ್ರರಂಗವನ್ನು ಬೆಳೆಸಬೇಕು" ಎಂದು ಹೇಳಿದರು.
ಕಾಡಿನ ಹಿನ್ನೆಲೆಯ ಸಸ್ಪೆನ್ಸ್ ಥ್ರಿಲ್ಲರ್ ಕಥೆ
ʻಡೆಡ್ಲಿ ಕಿಲ್ಲರ್ʼ ಚಿತ್ರದ ಒನ್‌ಲೈನ್ ಸ್ಟೋರಿ ಬಿಟ್ಟುಕೊಟ್ಟ ನಿರ್ದೇಶಕ ಥ್ರಿಲ್ಲರ್ ಮಂಜು, "ಆರು ಜನ ಗ್ಯಾಂಗ್‌ಸ್ಟರ್ಸ್ ಕಾಡಿನಲ್ಲಿ ತಪ್ಪಿಸಿಕೊಳ್ಳುತ್ತಾರೆ. ಅವರನ್ನು ನಾಯಕ ಹೇಗೆ ಟ್ರ್ಯಾಪ್ ಮಾಡಿ ಹಿಡಿಯುತ್ತಾನೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು. ಕಥೆ ತುಂಬಾ ಫಾಸ್ಟ್ ಆಗಿ ಸಾಗುತ್ತದೆ. ಅಭಯ್ ಅದ್ಭುತ ನಟ, ಮುಂದೆ ಅವರು ಸ್ಟಾರ್ ಆಗ್ತಾರೆ. ನಾಯಕಿ ನಿವೀಕ್ಷಾ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇದೊಂದು ಅದ್ಭುತ ನರೇಷನ್ ಒಳಗೊಂಡ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ" ಎಂದರು.
ಸಿನಿಮಾವೇ ನನ್ನ ಪ್ಯಾಷನ್ ಎಂದ ಅಭಯ್‌ವೀರ್
"ನಮ್ಮದು ಉತ್ತರ ಕರ್ನಾಟಕ. ತಂದೆಯವರ ಬ್ಯುಸಿನೆಸ್ ಇದ್ದರೂ ಸಿನಿಮಾವನ್ನು ಪ್ಯಾಷನ್ ಆಗಿ ತಗೊಂಡಿದ್ದೇನೆ. 25 ವರ್ಷದಲ್ಲಿ 8 ಸಿನಿಮಾ ಮಾಡಿದರೂ ಇನ್ನೂ ಸೈಕಲ್ ಹೊಡೆಯುತ್ತಿದ್ದೇನೆ. ಈ ಚಿತ್ರದಲ್ಲಿ 6 ವಿಭಿನ್ನ ಆಕ್ಷನ್ ದೃಶ್ಯಗಳಿದ್ದು, ಇಡೀ ಸಿನಿಮಾದಲ್ಲಿ ನಾನು ಒಂದೇ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಕೆಲಸಗಳಲ್ಲಿ ಸಕ್ರಿಯರಾಗಿದ್ದ ನಮ್ಮ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ವಿನಯ್ ಇಂದು ನಮ್ಮೊಂದಿಗಿಲ್ಲ" ಎಂದು ನಟ ಅಭಯ್‌ವೀರ್ ಹೇಳಿದರು.
"ಚಿತ್ರದಲ್ಲಿ ನಾನು ನಾಯಕನ ಪತ್ನಿಯಾಗಿ, ಗೃಹಿಣಿಯ ಪಾತ್ರ ಮಾಡಿದ್ದೇನೆ. ನನ್ನ ಪಾತ್ರಕ್ಕೆ ಎರಡು ವಿಭಿನ್ನ ಶೇಡ್‌ಗಳಿವೆ" ಎಂದು ನಾಯಕಿ ನಿವೀಕ್ಷಾ ಹೇಳಿದರು. "ಅಭಯ್ ನನ್ನ ಗೆಳೆಯ. ಅವರ ಮೂಲಕವೇ ಥ್ರಿಲ್ಲರ್ ಮಂಜು ಅವರ ಪರಿಚಯವಾಗಿ, ಪ್ರೊಡಕ್ಷನ್ ಲೈನ್ ಕಲಿತೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ" ಎಂದು ನಿರ್ಮಾಪಕ ಪ್ರಶಾಂತ್ ತಂಬ್ರಳ್ಳಿಮಠ ವಿಶ್ವಾಸ ವ್ಯಕ್ತಪಡಿಸಿದರು.
ಈ ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ವಿನು ಮನಸು ಸಂಗೀತ ಸಂಯೋಜನೆ ನೀಡಿದ್ದಾರೆ. ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣ ಹಾಗೂ ದೀಪು ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ಹೈಲೈಟ್ ಆಗಿರುವ 6 ವಿಶಿಷ್ಠ ಸಾಹಸ ದೃಶ್ಯಗಳಿಗೆ ಖುದ್ದೂ ನಿರ್ದೇಶಕ ಥ್ರಿಲ್ಲರ್ ಮಂಜು ಅವರೇ ಸಾಹಸ ಸಂಯೋಜನೆ ಮಾಡಿದ್ದಾರೆ. ವೇದಿಕ್ ವೀರ್ ಪೋಸ್ಟ್ ಪ್ರೊಡಕ್ಷನ್ ಜವಾಬ್ದಾರಿ ನಿಭಾಯಿಸಿದ್ದಾರೆ. ಉಳಿದ ಪ್ರಮುಖ ಪಾತ್ರಗಳಲ್ಲಿ ಲೋಕೇಂದ್ರ ಸೂರ್ಯ, ಥ್ರಿಲ್ಲರ್ ಮಂಜು, ಸುನಿಲ್ ಬಾಲ್ಡರ್, ಪುನೀತ್ ಮತ್ತು ಅಭಿ ನಟಿಸಿದ್ದಾರೆ. ಸದ್ಯದಲ್ಲೇ 'ಡೆಡ್ಲಿ ಕಿಲ್ಲರ್' ರಾಜ್ಯಾದ್ಯಂತ ಬೆಳ್ಳಿಪರದೆಗೆ ಬರಲಿದೆ.