ಆಸ್ಕರ್ ಸನಿಹಕ್ಕೆ ಕರಣ್ ಜೋಹರ್ ನಿರ್ಮಾಣದ ʻಹೋಮ್‌ಬೌಂಡ್ʼ ಸಿನಿಮಾ; ಭಾರತಕ್ಕೆ ದಕ್ಕಲಿದೆಯಾ ಪ್ರತಿಷ್ಠಿತ ಪ್ರಶಸ್ತಿ?
Homebound at Oscars: ನೀರಜ್ ಗಯ್ವಾನ್ ನಿರ್ದೇಶನದ ‘ಹೋಮ್‌ಬೌಂಡ್’ ಸಿನಿಮಾವು ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ಪ್ರವೇಶ ಪಡೆದಿದ್ದು, ಸದ್ಯ ಅಂತಿಮ 15 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದೆ. ಧರ್ಮ, ಜಾತಿ ರಾಜಕಾರಣ ಮತ್ತು ಮಾನವೀಯ ಸಂಬಂಧಗಳ ಕಥೆ ಹೊಂದಿರುವ ಈ ಚಿತ್ರವು ಜನವರಿ 22ರಂದು ಹೊರಬರಲಿರುವ ಅಂತಿಮ ನಾಮಿನೇಷನ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದೆ.
-
ವಿಶ್ವದ ಅತ್ಯುನ್ನತ ಸಿನಿಮಾ ಪ್ರಶಸ್ತಿ ಎಂದೇ ಪರಿಗಣಿಸಲಾಗುವ ಅಕಾಡೆಮಿ ಅವಾರ್ಡ್ಸ್ (ಆಸ್ಕರ್) ನಲ್ಲಿ ಈ ಬಾರಿ ಭಾರತದ ಚಿತ್ರ ‘ಹೋಮ್‌ಬೌಂಡ್’ ಸದ್ದು ಮಾಡುತ್ತಿದೆ. ಭಾರತದಿಂದ ಅಧಿಕೃತವಾಗಿ ಆಸ್ಕರ್ ಅಖಾಡಕ್ಕೆ ಪ್ರವೇಶಿಸಿರುವ ಈ ಸಿನಿಮಾ, ಈಗ ನಾಮಿನೇಷನ್ ಹಂತದ ಶಾರ್ಟ್ ಲಿಸ್ಟ್‌ನಲ್ಲಿ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿಯತ್ತ ಇನ್ನಷ್ಟು ಸನಿಹವಾಗಿದೆ. ಈಗಾಗಲೇ ಪ್ರಾಥಮಿಕ ಹಂತ ಮತ್ತು ಅಂತಿಮ 15 ಚಿತ್ರಗಳ ಪಟ್ಟಿಯಲ್ಲಿ (Shortlist) ಸ್ಥಾನ ಪಡೆದಿದ್ದ ಈ ಸಿನಿಮಾ, ಇದೀಗ ನಾಮಿನೇಷನ್ಗೆ ಶಾರ್ಟ್ ಲಿಸ್ಟ್ ಆಗುವ ಚಲನಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಕರಣ್ ಜೋಹರ್ ನಿರ್ಮಾಣದ ಸಿನಿಮಾ
ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಚಿತ್ರ ಮೂಡಿಬಂದಿದ್ದು, ನೀರಜ್ ಗಯ್ವಾನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅತ್ಯಂತ ಗಂಭೀರವಾದ ವಿಷಯಗಳಾದ ಧರ್ಮ, ಜಾತಿ ರಾಜಕಾರಣ ಮತ್ತು ಮಹಿಳಾ ದೌರ್ಜನ್ಯದ ಸುತ್ತ ‘ಹೋಮ್‌ಬೌಂಡ್’ ಸಿನಿಮಾದ ಕಥೆ ಸಾಗುತ್ತದೆ. ಇಶಾನ್ ಕಟ್ಟರ್, ಜಾನ್ಹವಿ ಕಪೂರ್ ಮತ್ತು ವಿಶಾಲ್ ಜೇಟ್ವಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಎಲ್ಲಾ ಕಲಾವಿದರು ತಮ್ಮ ಅದ್ಭುತ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.
Kamal Haasan: ಬರೋಬ್ಬರಿ ಏಳು ಬಾರಿ ಆಸ್ಕರ್‌ಗೆ ನಾಮಿನೇಟ್ ಆಗಿದ್ದ ಆ ನಟ ಯಾರು ಗೊತ್ತಾ?
ಜನವರಿ 22ರಂದು ಪಟ್ಟಿ ಘೋಷಣೆ
ಭಾರತೀಯ ಚಿತ್ರರಂಗದ ಮಟ್ಟಿಗೆ ಇದು ಅತ್ಯಂತ ಮಹತ್ವದ ಕ್ಷಣವಾಗಿದೆ. ಯಾಕೆಂದರೆ, ಇದುವರೆಗೆ ವಿದೇಶಿ ಸಿನಿಮಾ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಟ್ಟಿಯ 'ಶಾರ್ಟ್ ಲಿಸ್ಟ್' ಹಂತ ತಲುಪಿದ ಭಾರತದ ಕೇವಲ ಐದು ಸಿನಿಮಾಗಳಲ್ಲಿ ಇದೀಗ ‘ಹೋಮ್‌ಬೌಂಡ್’ ಕೂಡ ಒಂದಾಗಿದೆ. ಜನವರಿ 22 ರಂದು ನಾಮಿನೇಷನ್ಸ್ ಪಟ್ಟಿಯನ್ನು ಘೋಷಣೆ ಆಗಲಿದ್ದು, ಅಂದು ಹೋಮ್‌ಬೌಂಡ್ ಸಿನಿಮಾ ನಾಮಿನೇಷನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆಯಾ ಇಲ್ಲವಾ ಎಂಬುದು ಗೊತ್ತಾಗಲಿದೆ. ಈ ಹಿಂದೆ 'ಲಗಾನ್' ಸಿನಿಮಾ ಮಾತ್ರವೇ ವಿದೇಶಿ ಚಿತ್ರ ವಿಭಾಗದಲ್ಲಿ ಅಂತಿಮ ನಾಮಿನೇಷನ್ ಪಡೆಯುವಲ್ಲಿ ಯಶಸ್ವಿಯಾಗಿತ್ತು
ವಿದೇಶಿ ಸಿನಿಮಾಗಳಿಂದ ಭಾರಿ ಪೈಪೋಟಿ
ಅಂದಹಾಗೆ, ವಿಶ್ವಮಟ್ಟದಲ್ಲಿ ʻಹೋಮ್‌ಬೌಂಡ್’ ಸಿನಿಮಾಗೆ ಕಠಿಣ ಪೈಪೋಟಿ ಸಹ ಇದೆ. ಈ ಚಿತ್ರಕ್ಕೆ ಇರಾಖ್ನ ‘ದಿ ಪ್ರೆಸಿಡೆಂಟ್ ಕೇಕ್’, ಪ್ಯಾಲೆಸ್ತೇನಿನ ‘ಪ್ಯಾಲೆಸ್ತೇನ್ 36’ ಮತ್ತು ದಕ್ಷಿಣ ಕೊರಿಯಾದ ‘ನೋ ಅದರ್ ಚಾಯ್ಸ್’ ಚಿತ್ರಗಳಿಂದ ಭಾರಿ ಪೈಪೋಟಿ ಎದುರಾಗಿದೆ.
ಆಸ್ಕರ್‌ನಿಂದ ಅಧಿಕೃತ ಟ್ವೀಟ್
Fifteen films advanced to the next round of voting in the International Feature Film category. Here’s where they land on the map:
— The Academy (@TheAcademy) January 5, 2026
Argentina, BELÉN
Brazil, THE SECRET AGENT
France, IT WAS JUST AN ACCIDENT
Germany, SOUND OF FALLING
India, HOMEBOUND
Iraq, THE PRESIDENT’S CAKE… pic.twitter.com/BayF3hOfeM
ಇನ್ನು, ಈ ಸಿನಿಮಾವು ಆಸ್ಕರ್ ರೇಸ್‌ನಲ್ಲಿ ಇರುವುದರಿಂದ ಚಿತ್ರದ ನಿರ್ಮಾಪಕರು ದೊಡ್ಡಮಟ್ಟದಲ್ಲಿ ಹಣ ಖರ್ಚು ಮಾಡಬೇಕಿದೆ. ಹೌದು, ಅಂತಿಮ ಹಂತ ತಲುಪಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ಪ್ರಚಾರ ಮಾಡಬೇಕಿದೆ. ಹೋಮ್‌ಬೌಂಡ್ ನಿರ್ಮಾಪಕರು ಅದನ್ನು ಮಾಡುತ್ತಾರಾ ಅನ್ನೋದೇ ಅನುಮಾನವಾಗಿದೆ.