ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶನಿವಾರ ಮಧ್ಯಾಹ್ನ ಮುಂಬೈನ ಬಾಂದ್ರಾದಲ್ಲಿರುವ ಆಮೀರ್ ಖಾನ್ ಅವರ ನಿವಾಸದಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ವಿವಾಹ ನೋಂದಣಿ (ರಿಜಿಸ್ಟರ್ ಮ್ಯಾರೇಜ್) ಪ್ರಕ್ರಿಯೆ ಅತ್ಯಂತ ಸರಳವಾಗಿ ನೆರವೇರಿತು. ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿ ಭಾನುವಾರ ಮಧ್ಯಾಹ್ನ 12.45 ಕ್ಕೆ ವಿವಾಹ ದಾಖಲೆಗಳಿಗೆ ಸಹಿ ಹಾಕುವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದರು.
ಆಪ್ತರ ಸಮ್ಮುಖದಲ್ಲಿ ನಡೆದ ಕಲ್ಯಾಣ
ತಮ್ಮ ವಿವಾಹದ ಸಂಭ್ರಮವನ್ನು ಸಂಪೂರ್ಣವಾಗಿ ಖಾಸಗಿಯಾಗಿಡಲು ಬಯಸಿದ್ದ ಈ ಜೋಡಿ, ಸಮಾರಂಭವನ್ನು ಆಪ್ತ ವಲಯಕ್ಕೆ ಮಾತ್ರ ಸೀಮಿತಗೊಳಿಸಿದ್ದರು. ಈ ವಿವಾಹ ಮಹೋತ್ಸವದಲ್ಲಿ ಆಮೀರ್ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್ ಹಾಗೂ ಗೌರಿ ಅವರ ಮಗ ಸೇರಿದಂತೆ ದೇಶ-ವಿದೇಶಗಳಿಂದ ಬಂದಿದ್ದ ಸುಮಾರು 150 ಅತಿಥಿಗಳು ಭಾಗವಹಿಸಿದ್ದರು. ಮದುವೆಗೂ ಮುನ್ನ ಆಮೀರ್ ಮಕ್ಕಳಾದ ಇರಾ ಖಾನ್ ಹಾಗೂ ಜುನೈದ್ ಖಾನ್ ನಿವಾಸಕ್ಕೆ ಆಗಮಿಸುತ್ತಿರುವುದು ಕಂಡುಬಂದಿತು. ಇವರೊಂದಿಗೆ 'ಲಗಾನ್' ಚಿತ್ರದ ನಿರ್ದೇಶಕ ಅಶುತೋಷ್ ಗೋವಾರಿಕರ್ ಮತ್ತು ನಟಿ ಎಲ್ಲೀ ಅವ್ರಾಮ್ ಕೂಡ ಭಾಗವಹಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.
ಬೆಂಗಳೂರಿನಿಂದ ಮುಂಬೈಗೆ...
ಮೂಲತಃ ಬೆಂಗಳೂರಿನವರಾದ ಗೌರಿ ಅವರು ಮಾಜಿ ಸಲೂನ್ ಮಾಲೀಕರಾದ ರೀಟಾ ಸ್ಪ್ರಾಟ್ ಅವರ ಪುತ್ರಿಯಾಗಿದ್ದು, ವೆಲ್ನೆಸ್ ಮತ್ತು ಬ್ಯೂಟಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಲಂಡನ್‌ನ ಯೂನಿವರ್ಸಿಟಿ ಆಫ್ ದಿ ಆರ್ಟ್ಸ್‌ನಲ್ಲಿ ಸ್ಟೈಲಿಂಗ್ ಮತ್ತು ಫೋಟೋಗ್ರಫಿ ಕೋರ್ಸ್ ಮಾಡಿರುವ ಅವರು ಪ್ರಸ್ತುತ ಮುಂಬೈನಲ್ಲಿ ಬಿಬ್ಲಂಟ್ ಸಲೂನ್ ನಡೆಸುತ್ತಿದ್ದಾರೆ.
ಆಮಿರ್ ಖಾನ್ & ಗೌರಿ ಕಲ್ಯಾಣ
ಸುಮಾರು 25 ವರ್ಷಗಳ ಹಿಂದೆ ಮೊದಲ ಬಾರಿಗೆ ಭೇಟಿಯಾಗಿದ್ದ ಈ ಜೋಡಿ, 2024ರಲ್ಲಿ ಬೆಂಗಳೂರಿನಲ್ಲಿದ್ದ ಆಮಿರ್ ಸೋದರಸಂಬಂಧಿ ನುಜಹತ್ ಖಾನ್ ಮೂಲಕ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಆರಂಭದಲ್ಲಿ ಲಾಂಗ್-ಡಿಸ್ಟೆನ್ಸ್ ಸಂಬಂಧದಲ್ಲಿದ್ದ ಈ ಜೋಡಿಯನ್ನು ಆಮಿರ್ ಖಾನ್ ಅವರು 2025ರ ತಮ್ಮ 60 ನೇ ಜನ್ಮದಿನದಂದು ಮಾಧ್ಯಮಗಳಿಗೆ ತಮ್ಮ "ಜೊತೆಗಾತಿ" ಎಂದು ಪರಿಚಯಿಸಿದ್ದರು. ಆ ಬಳಿಕ ಗೌರಿ ಮುಂಬೈಗೆ ಸ್ಥಳಾಂತರಗೊಂಡು ಆಮೀರ್ ಖಾನ್ ಪ್ರೊಡಕ್ಷನ್ಸ್ ಸೇರಿಕೊಂಡರು. ಮದುವೆಗೂ ಮುನ್ನ ಇಬ್ಬರೂ ಒಂದು ವರ್ಷಕ್ಕೂ ಹೆಚ್ಚು ಕಾಲ ಲೈವ್-ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎಂಬ ಮಾಹಿತಿ ಸಿಕ್ಕಿದೆ. ಅಂದಹಾಗೆ, ಆಮಿರ್ ಖಾನ್ ಅವರಿಗೆ ಈಗ 61 ವಯಸ್ಸಾಗಿದ್ದರೆ, ಗೌರಿಗೆ ಈಗ 47 ವರ್ಷ. ಇಬ್ಬರಿಗೂ 14 ವರ್ಷಗಳ ವಯಸ್ಸಿನ ಅಂತರವಿದೆ.
Aamir Khan: ತೆರೆ ಮೇಲೆ ಬರಲಿದೆ ಮೇಘಾಲಯ ಮರ್ಡರ್ ಕೇಸ್; ಸೋನಂ- ರಾಜಾ ಸ್ಟೋರಿ ಮಾಡ್ತಾರಾ ಆಮಿರ್ ಖಾನ್?
ಆಮಿರ್ ಖಾನ್‌ಗೆ ಇದು ಮೂರನೇ ಮದುವೆ
ಇದು ನಟ ಆಮರ್ ಖಾನ್ ಅವರ ಮೂರನೇ ವಿವಾಹವಾಗಿದೆ. ಈ ಹಿಂದೆ 1986ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದ ಅವರು 2002ರಲ್ಲಿ ವಿಚ್ಛೇದನ ಪಡೆದಿದ್ದರು, ಈ ದಂಪತಿಗೆ ಜುನೈದ್ ಮತ್ತು ಇರಾ ಎಂಬ ಮಕ್ಕಳಿದ್ದಾರೆ. ನಂತರ 2005ರಲ್ಲಿ ನಿರ್ದೇಶಕಿ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದ ಆಮಿರ್, 16 ವರ್ಷಗಳ ದಾಂಪತ್ಯದ ನಂತರ 2021ರಲ್ಲಿ ಬೇರ್ಪಟ್ಟಿದ್ದರು. ಕಿರಣ್ ರಾವ್ ಮತ್ತು ಆಮಿರ್ ಜಂಟಿಯಾಗಿ ತಮ್ಮ ಮಗ ಆಜಾದ್‌ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು, ವೃತ್ತಿಪರವಾಗಿಯೂ ಸೌಹಾರ್ದಯುತ ಸಂಬಂಧವನ್ನು ಮುಂದುವರಿಸಿದ್ದಾರೆ.