ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಪ್ರಧಾನಿ ಮೋದಿ ಅವರೇ ಟ್ವೀಟ್‌ ಮಾಡಿದ್ದು ಹೆಮ್ಮೆಯ ಸಂಗತಿ..ʼ; ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಸಿಕ್ಕಿದ್ದಕ್ಕೆ ಅನಂತ್‌ ನಾಗ್‌ ಫಸ್ಟ್‌ ರಿಯಾಕ್ಷನ್‌

ಹಿರಿಯ ನಟ ಅನಂತ್ ನಾಗ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಅಭಿನಂದನಾ ಟ್ವೀಟ್‌ಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಕಲೆಯ ಪಯಣಕ್ಕೆ ಸಾಥ್ ನೀಡಿದ ಕರ್ನಾಟಕದ ಸಮಸ್ತ ಜನತೆ, ರಂಗಕರ್ಮಿಗಳು ಹಾಗೂ ಪತ್ರಕರ್ತರಿಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವವನ್ನು ಅರ್ಪಿಸುವುದಾಗಿ ಭಾವುಕರಾಗಿ ತಿಳಿಸಿದ್ದಾರೆ.

ಭಾರತೀಯ ಚಿತ್ರರಂಗದ ಅತ್ಯುನ್ನತ ಹಾಗೂ ಪ್ರತಿಷ್ಠಿತ ಗೌರವವಾದ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ಹಿರಿಯ ನಟ ಅನಂತ್ ನಾಗ್ ಅವರು, ಈ ಮನ್ನಣೆ ತಮಗೆ ಅಪಾರ ಸಂತಸ ಹಾಗೂ ಸಾರ್ಥಕತೆಯ ಭಾವ ಮೂಡಿಸಿದೆ ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷವಷ್ಟೇ ಕನ್ನಡಿಗರು, ಮಾಧ್ಯಮ ಮಿತ್ರರ ನಿರಂತರ ಬೆಂಬಲ ಹಾಗೂ ಪ್ರೀತಿಯಿಂದ ತಮಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು ಎಂಬುದನ್ನು ನೆನಪಿಸಿಕೊಂಡ ಅವರು, ನಟನೆಯ ಸಾಧನೆಗಾಗಿಯೇ ದೇಶದ ಪರಮೋಚ್ಛ ಫಾಲ್ಕೆ ಪ್ರಶಸ್ತಿ ಒಲಿದು ಬಂದಿರುವುದು ಅತ್ಯಂತ ವಿಶೇಷ ಎಂದಿದ್ದಾರೆ. ಇದಕ್ಕಿಂತ ಮಿಗಿಲಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ಟ್ವೀಟ್ ಮಾಡಿ ಅಭಿನಂದಿಸಿರುವುದು ತಮಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಧಾನಿಗೆ ಮೆಚ್ಚುಗೆ

"ಕಳೆದ 25-26 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಒಬ್ಬ ವ್ಯಕ್ತಿ ಗುಜರಾತ್‌ನಿಂದ ಆರಂಭಿಸಿ ಇಂದು ಇಡೀ ದೇಶದ ಮಟ್ಟದಲ್ಲಿ ಈ ರೀತಿಯ ಅದ್ಭುತ ಸಾಧನೆ ಮಾಡಿರುವುದು ಸಾಮಾನ್ಯದ ಮಾತಲ್ಲ; ಅಂತಹ ದೃಢ ನಾಯಕ ಹಾಗೂ ದೇಶದ ಪ್ರಧಾನಿಯಿಂದ ಮೆಚ್ಚುಗೆಯ ಮಾತುಗಳು ಬಂದಿರುವುದು ಜೀವನದಲ್ಲಿ ಧನ್ಯತೆಯ ಭಾವ ತಂದಿದೆ. ಪ್ರಧಾನಮಂತ್ರಿಯವರೇ ಸ್ವತಃ ಟ್ವೀಟ್ ಮಾಡಿದ್ದಾರೆ. ಅದನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ನಾನು ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಕೃತಜ್ಞನಾಗಿದ್ದೇನೆ." ಎಂದು ಅನಂತ್‌ ನಾಗ್ ಹೇಳಿದ್ದಾರೆ.

''ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವ'': ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತ್‌ ನಾಗ್‌ಗೆ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ಕನ್ನಡಿಗರಿಗೆ ಈ ಪ್ರಶಸ್ತಿ ಅರ್ಪಣೆ

"ಇದೆಲ್ಲವೂ ಸಾಧ್ಯವಾಗಿದ್ದು ಕರ್ನಾಟಕದ ಜನತೆಯಿಂದಾಗಿ. ಕಳೆದ 50 ವರ್ಷಗಳಿಂದ ಅವರು ನನ್ನನ್ನು ಹರಸಿದ್ದಾರೆ, ನನ್ನ ಚಲನಚಿತ್ರಗಳನ್ನು ಪ್ರೋತ್ಸಾಹಿಸಿದ್ದಾರೆ ಮತ್ತು ಬೆಂಬಲಿಸಿದ್ದಾರೆ. ಇವುಗಳಲ್ಲಿ ವಿಶೇಷವಾಗಿ ಕರ್ನಾಟಕದ ಪತ್ರಕರ್ತರು ಕಳೆದ 50 ವರ್ಷಗಳಿಂದಲೂ ಎಲ್ಲಾ ದಿನಪತ್ರಿಕೆಗಳವರು ನನಗೆ ಅಪಾರವಾದ ನೆರವು ಹಾಗೂ ಬೆಂಬಲ ನೀಡಿದ್ದಾರೆ. ಆ ನಂತರ ಟಿವಿ ವಾಹಿನಿಗಳು, ಹಾಗೂ ಸಹಜವಾಗಿಯೇ ಸಮಸ್ತ ಜನತೆ. ಹಿರಿಯ ರಂಗಕರ್ಮಿಗಳ ಮಾರ್ಗದರ್ಶನ ಮತ್ತು ಪ್ರೋತ್ಸಾಹವೇ ತಮ್ಮ ನಟನಾ ಪಯಣಕ್ಕೆ ಭದ್ರ ಬುನಾದಿ ಹಾಕಿತು. ಆನಂತರ ಬೆಂಗಳೂರಿಗೆ ಬಂದಾಗ ಪರಿಚಿತರೇ ಇಲ್ಲದ ತಮಗೆ ಪತ್ರಕರ್ತರೇ ಆಪ್ತ ಸ್ನೇಹಿತರಾದರು. ಹಾಗಾಗಿ ನಾನು ತುಂಬು ಕೃತಜ್ಞನಾಗಿದ್ದೇನೆ. ಕಳೆದ ವರ್ಷ ಬಂದ ಪದ್ಮಭೂಷಣ ಪ್ರಶಸ್ತಿಯನ್ನು ಹೇಗೆ ಕರ್ನಾಟಕದ ಜನತೆಗೆ ಅರ್ಪಿಸಿದ್ದೆನೋ, ಹಾಗೆಯೇ ಈ ವರ್ಷ ನನಗೆ ಸಿಕ್ಕಿರುವ ಈ ಗೌರವವನ್ನೂ ಸಹ ನಾನು ಮತ್ತೊಮ್ಮೆ ಕರ್ನಾಟಕದ ಜನತೆಗೆ ಅರ್ಪಿಸುತ್ತಿದ್ದೇನೆ" ಎಂದು ಅನಂತ್‌ ನಾಗ್‌ ಹೇಳಿದ್ದಾರೆ

ವಿನಮ್ರತೆಯಿಂದ ಈ ಗೌರವವನ್ನು ಸ್ವೀಕರಿಸುತ್ತೇನೆ

70ರ ದಶಕದಲ್ಲಿ ಕಲಾತ್ಮಕ ಹಾಗೂ ಸಮಾಂತರ ಚಿತ್ರಗಳ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ದಿನಗಳ ಕುರಿತು ಮಾತನಾಡಿದ ಅನಂತ್ ನಾಗ್, ಆ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಹೊಸ ಅಲೆಯ ಸಾಹಿತ್ಯಿಕ, ಕಾದಂಬರಿ ಆಧಾರಿತ ಹಾಗೂ ಪ್ರಬುದ್ಧ ಕೌಟುಂಬಿಕ ಕಥಾಹಂದರದ ಸಿನಿಮಾಗಳಿಗೆ ಉತ್ತಮ ಮನ್ನಣೆ ಸಿಗುತ್ತಿತ್ತು.

ಕರ್ನಾಟಕದ ಶೇ. 70ರಿಂದ 75ರಷ್ಟು ಮಧ್ಯಮ ವರ್ಗದ ಜನರು ಅತ್ಯುತ್ತಮ ಶಿಕ್ಷಣ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಸಂಸ್ಕಾರವನ್ನು ಹೊಂದಿದವರಾಗಿದ್ದರಿಂದಲೇ ಇಂತಹ ವಿಶಿಷ್ಟ ಹಾಗೂ ಪ್ರಯೋಗಾತ್ಮಕ ಚಿತ್ರಗಳಿಗೆ ಪ್ರೇಕ್ಷಕರ ಬೆಂಬಲ ಸಿಗಲು ಸಾಧ್ಯವಾಯಿತು. ಅಂತಹ ಸದಭಿರುಚಿಯ ಸುವರ್ಣ ಕಾಲದಲ್ಲಿ ತಮಗೆ ವಿಭಿನ್ನ ಪಾತ್ರಗಳು ಲಭಿಸಿದವು. ಈ ಮಹಾನ್ ಪ್ರಶಸ್ತಿಯು ಈ ಹಿಂದೆ ಹಲವು ದಿಗ್ಗಜ ಮಹನೀಯರಿಗೆ ಸಂದಿದೆ ಎಂಬ ಅರಿವು ನನಗಿರುವುದರಿಂದ ಯಾವುದೇ ಅಹಂ ಇಲ್ಲದೆ, ವಿನಮ್ರತೆಯಿಂದ ಈ ಗೌರವವನ್ನು ಸ್ವೀಕರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.