ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಟಾಕ್ಸಿಕ್‌ʼ ಹೀರೋ ಯಶ್‌ ಬಗ್ಗೆ ಎಷ್ಟೊಳ್ಳೆ ಮಾತು ಹೇಳಿದ್ರು ನೋಡಿ ಬಾಲಿವುಡ್‌ ನಟ ಅನುಪಮ್‌ ಖೇರ್!‌

ನಟ ಯಶ್‌ ಅವರನ್ನು ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಭೇಟಿಯಾಗಿದ್ದಾರೆ. ಯಶ್ ಅವರ ಸರಳ ವ್ಯಕ್ತಿತ್ವ ಮತ್ತು ನಟನಾ ಕೌಶಲವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೆಜಿಎಫ್ ಚಿತ್ರದ ಅಭಿನಯವನ್ನು ಕೊಂಡಾಡಿದ ಅನುಪಮ್ ಖೇರ್, ತೆರೆಯ ಹಿಂದಿನ ಯಶ್ ಅವರ ವಿನಮ್ರತೆ ಹಾಗೂ ಚಿಂತನೆಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.

‘ಟಾಕ್ಸಿಕ್‌’ ಸಿನಿಮಾದ ರಿಲೀಸ್‌ ಬ್ಯುಸಿಯಲ್ಲಿರುವ ನಟ ಯಶ್‌ ಅವರು ಇತ್ತೀಚೆಗೆ ಬಾಲಿವುಡ್‌ನ ಹಿರಿಯ ನಟ ಅನುಪಮ್‌ ಖೇರ್‌ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನುಪಮ್‌ ಖೇರ್‌, ಯಶ್ ಅವರ ವ್ಯಕ್ತಿತ್ವ ಹಾಗೂ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಯಶ್‌ ಭೇಟಿ ಬಳಿಕ ಅನುಪಮ್‌ ಹೇಳಿದ್ದೇನು?

"ಯಶ್ ಎಂಬ ಅದ್ಭುತ ಶಕ್ತಿಯನ್ನು ಭೇಟಿಯಾಗಿದ್ದು ಅತ್ಯಂತ ಖುಷಿ ನೀಡಿತು. 'ಕೆಜಿಎಫ್: ಚಾಪ್ಟರ್ 1' ಮತ್ತು 'ಕೆಜಿಎಫ್: ಚಾಪ್ಟರ್ 2' ಚಿತ್ರಗಳಲ್ಲಿ ಅವರ ಪಯಣ ನನಗೆ ತುಂಬಾ ಇಷ್ಟವಾಗಿತ್ತು. ಅವರು ಕೇವಲ 'ರಾಕಿ' ಪಾತ್ರವನ್ನು ಮಾಡಲಿಲ್ಲ, ಬದಲಿಗೆ ಆ ಪಾತ್ರಕ್ಕೆ ಜೀವ ತುಂಬಿ, ಅದಕ್ಕೊಂದು ರಾಜಗಾಂಭೀರ್ಯದ ಶೈಲಿ ನೀಡಿ ಭಾರತೀಯ ಚಿತ್ರರಂಗದಲ್ಲೇ ಎಂದೂ ಮರೆಯಲಾಗದ ಸ್ಥಾನ ತಂದುಕೊಟ್ಟರು" ಎಂದು ಅನುಪಮ್‌ ಖೇರ್‌ ತಿಳಿಸಿದ್ದಾರೆ.

ಜೀವನ ಪಯಣಗಳ ಬಗ್ಗೆ ಚರ್ಚೆ

"ತೆರೆಯ ಮೇಲಿನ ಆ ಶಕ್ತಿಶಾಲಿ ವ್ಯಕ್ತಿತ್ವದ ಹಿಂದೆ ಅತ್ಯಂತ ಆತ್ಮೀಯ, ವಿನಮ್ರ ಹಾಗೂ ಆಳವಾದ ಚಿಂತನೆಗಳನ್ನು ಹೊಂದಿರುವ ಸುಂದರ ಮನಸ್ಸಿನ ವ್ಯಕ್ತಿಯೊಬ್ಬರನ್ನು ನಾನು ಕಂಡೆ. ನಾವಿಬ್ಬರೂ ಸ್ಟುಡಿಯೋದಲ್ಲಿ ಭೇಟಿಯಾಗಿ ಸಿನಿಮಾ, ಜೀವನ, ಹೆತ್ತವರು, ಕುಟುಂಬ, ಕನಸುಗಳು ಮತ್ತು ನಮ್ಮನ್ನು ರೂಪಿಸಿದ ಜೀವನ ಪಯಣಗಳ ಕುರಿತು ಸುದೀರ್ಘವಾಗಿ ಮಾತನಾಡಿದೆವು" ಎಂದು ಅನುಪಮ್‌ ಬರೆದುಕೊಂಡಿದ್ದಾರೆ.

ನಮ್ಮ ಕನಸುಗಳ ಭಾಷೆ ಒಂದೇ

"ಅಸಾಧಾರಣವಾದುದನ್ನು ಸೃಷ್ಟಿಸಲು ಅಪಾರ ಆಸೆ ಮತ್ತು ಉತ್ಸಾಹ ಹೊಂದಿರುವ ಯುವ ಪ್ರತಿಭಾವಂತರನ್ನು ಭೇಟಿಯಾದಾಗಲೆಲ್ಲ ನನಗೂ ಹೊಸ ಚೈತನ್ಯ ಬರುತ್ತದೆ. ಅವರಲ್ಲಿರುವ ಆ ಕಿಚ್ಚು ಇನ್ನಷ್ಟು ಕಠಿಣವಾಗಿ ಶ್ರಮಿಸಲು, ಹೊಸದನ್ನು ಅನ್ವೇಷಿಸಲು ಮತ್ತು ಅತ್ಯುತ್ತಮವಾದುದನ್ನು ನೀಡಲು ನನಗೆ ಸ್ಫೂರ್ತಿ ನೀಡುತ್ತದೆ. ಬಹುಶಃ ಸಿನಿಮಾದ ಸೌಂದರ್ಯವೇ ಇದು ಇರಬೇಕು! ನಾವಿಬ್ಬರೂ ಬೇರೆ ಬೇರೆ ತಲೆಮಾರಿಗೆ ಸೇರಿದವರಾಗಿರಬಹುದು, ಆದರೆ ನಮ್ಮ ಕನಸುಗಳ ಭಾಷೆ ಮಾತ್ರ ಒಂದೇ" ಎಂದಿದ್ದಾರೆ ಅನುಪಮ್‌.

Anupam Kher: ನೂರಾರು ಸಿನಿಮಾಗಳಲ್ಲಿ ನಟನೆ... ಅನೇಕ ವರ್ಷಗಳ ಸಿನಿ ಜರ್ನಿ! ಆದ್ರೂ ಇರೋದು ಮಾತ್ರ ಬಾಡಿಗೆ ಮನೆಯಲ್ಲಿ

‘ಟಾಕ್ಸಿಕ್‌’ ಚಿತ್ರಕ್ಕೆ ಶುಭ ಹಾರೈಕೆ

"ನನ್ನ ಆತ್ಮೀಯ ಯಶ್, ನಿಮ್ಮ ಮುಂಬರುವ ‘ಟಾಕ್ಸಿಕ್‌’ ಸಿನಿಮಾ ಹೊಸ ಮ್ಯಾಜಿಕ್ ಸೃಷ್ಟಿಸಲಿ, ಅಪಾರ ಪ್ರೀತಿ ಮತ್ತು ಅಭೂತಪೂರ್ವ ಯಶಸ್ಸನ್ನು ಗಳಿಸಲಿ. ಹೀಗೇ ಸದಾ ಸ್ಫೂರ್ತಿಯಾಗಿರಿ, ಜಯಿಸುತ್ತಾ ಮುನ್ನಡೆಯಿರಿ. ನನ್ನ ಪ್ರೀತಿಯ ಸ್ನೇಹಿತನಿಗೆ ಶುಭ ಹಾರೈಕೆಗಳು" ಎಂದು ಅನುಪಮ್‌ ಖೇರ್‌ ಹಾರೈಸಿದ್ದಾರೆ.