ಬಾಲಿವುಡ್ ನಟ ಬಾಬಿ ಡಿಯೋಲ್ ಮತ್ತು ಸನಿ ಡಿಯೋಲ್ ಸಹೋದರರಿಗೆ ತಮ್ಮ ತಂದೆ ಧರ್ಮೇಂದ್ರ, ತಾಯಿ ಪ್ರಕಾಶ್ ಕೌರ್ ಅವರನ್ನು ಕಂಡರೆ ಅಪಾರ ಪ್ರೀತಿ, ಭಯ, ಗೌರವ ಎಲ್ಲವೂ ಇದೆ. ಈಚೆಗೆ ತಮ್ಮ ತಾಯಿ ಬಗ್ಗೆ ಮಾತನಾಡಿರುವ ನಟ ಬಾಬಿ ಡಿಯೋಲ್, "ನಾನು ಶಾಲೆಯಲ್ಲಿ ಹಿಂದಿಯನ್ನು ಮಾತನಾಡಿದರೆ, ಅಮ್ಮ ಚಪ್ಪಲಿಯಲ್ಲಿ ಹೊಡೆಯುತ್ತಿದ್ದರು" ಎಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಅವರೇಕೆ ಮಗನಿಗೆ ಹೀಗೆ ಶಿಕ್ಷಿಸುತ್ತಿದ್ದರು? ಮುಂದೆ ಓದಿ.
ಒಂದು ಸಣ್ಣ ಹಳ್ಳಿಯಿಂದ ಬಂದ ಧರ್ಮೇಂದ್ರ ಮುಂಬೈನಂತಹ ಮಹಾನಗರದಲ್ಲಿ ಖ್ಯಾತ ನಟರಾಗಿ ಬೆಳೆದರು. ಬಾಲಿವುಡ್‌ನಲ್ಲಿ ತಮ್ಮದೇ ಆದ ಒಂದು ಗುರುತನ್ನು ಮೂಡಿಸಿದರು. ಇನ್ನು, ಅವರ ಮನೆಯಲ್ಲಿ ಇಬ್ಬರೂ ಮಕ್ಕಳನ್ನು ಶಿಸ್ತಿನಲ್ಲಿಡಲು ಧರ್ಮೇಂದ್ರ ಪತ್ನಿ ಪ್ರಕಾಶ್ ಕೌರ್ ತುಂಬಾ ಕಟ್ಟುನಿಟ್ಟಾಗಿದ್ದರು. ಇತ್ತೀಚೆಗೆ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಬಿ ಡಿಯೋಲ್, ತಾವು ಶಾಲೆಯಲ್ಲಿ ಸರಿಯಾಗಿ ಓದದಿದ್ದಾಗ ತಾಯಿ ತಮಗೆ ಮನಬಂದಂತೆ ಹೊಡೆಯುತ್ತಿದ್ದರು ಎಂಬ ವಿಷಯವನ್ನು ಹೇಳಿಕೊಂಡಿದ್ದಾರೆ.
Bandar Movie: ಬಾಬಿ ಡಿಯೋಲ್ ಹೊಸ ಸಿನಿಮಾದಲ್ಲಿ ಮಿಂಚಿದ ಕನ್ನಡದ ರಾಜ್ ಬಿ. ಶೆಟ್ಟಿ - ನಟೇಶ್ ಹೆಗಡೆ
ಶಾಲೆಯಿಂದ ತಾಯಿಗೆ ದೂರು ಹೋಗುತ್ತಿತ್ತು
"ಶಾಲೆಯಲ್ಲಿ ನೀವು ಚೆನ್ನಾಗಿ ಓದುತ್ತಿದ್ರಾ?" ಎಂಬ ಪ್ರಶ್ನೆಗೆ ಉತ್ತರಿಸಿದ ಬಾಬಿ ಡಿಯೋಲ್, "ಖಂಡಿತವಾಗಿಯೂ ಇಲ್ಲ. ಶಾಲೆಗೆ ಹೋಗದಿದ್ದರೆ ನನಗೆ ತುಂಬಾ ಏಟು ಬೀಳುತ್ತಿತ್ತು. ನನಗೆ ಶಾಲೆ ಎಂದರೆ ಇಷ್ಟವಿರಲಿಲ್ಲ. ಅದರಲ್ಲೂ ಬಾಲ್ಯದಲ್ಲಿ ನಾನು ಹೆಚ್ಚಾಗಿ ಹಿಂದಿ ಮಾತನಾಡುತ್ತಿದ್ದೆ. ಆದರೆ ನನ್ನದು ಇಂಗ್ಲಿಷ್ ಮೀಡಿಯಂ ಶಾಲೆಯಾಗಿದ್ದರಿಂದ, 'ನಿಮ್ಮ ಮಗ ಕೇವಲ ಹಿಂದಿ ಮಾತನಾಡುತ್ತಾನೆ, ಹಾಗಾಗಿ ಅವನನ್ನು ಹಿಂದಿ ಮೀಡಿಯಂಗೆ ಸೇರಿಸಿ' ಎಂದು ಶಾಲೆಯಿಂದ ನನ್ನ ತಾಯಿಗೆ ದೂರುಗಳು ಹೋಗುತ್ತಿದ್ದವು" ಎಂದು ಹೇಳಿದ್ದಾರೆ.
ಈಗ ನನ್ನ ಯೋಚನೆಯೂ ಇಂಗ್ಲಿಷ್‌ನಲ್ಲೇ!
"ಮನಗೆ ದೂರುಗಳು ಬಂದ ನಂತರ ನನಗೆ ಬೈಗುಳಗಳ ಸುರಿಮಳೆಯೇ ಆಗುತ್ತಿತ್ತು. ಆಮೇಲೆ ನಾನು ಹಿಂದಿ ಮಾತನಾಡುವುದನ್ನು ಬಿಟ್ಟು ಇಂಗ್ಲಿಷ್ ಕಲಿಯಲು ನಿರ್ಧರಿಸಿದೆ, ಈಗ ಎಷ್ಟರಮಟ್ಟಿಗೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ ಎಂದರೆ, ನಾನು ಯೋಚಿಸುವುದೂ ಕೂಡ ಇಂಗ್ಲಿಷ್‌ನಲ್ಲೇ ಆಗಿದೆ. ನಮ್ಮ ಮನೆ ಶಾಲೆಯ ಹತ್ತಿರವೇ ಇತ್ತು. ಹಾಗಾಗಿ ಕೆಲವು ದಿನ ಬೆಳಿಗ್ಗೆ ನನ್ನ ತಾಯಿ ನನಗೆ ಹೊಡೆಯುತ್ತಲೇ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು" ಎಂದು ಬಾಬಿ ಡಿಯೋಲ್ ಹೇಳಿದ್ದಾರೆ.
ಚಪ್ಪಲಿಯಿಂದಲೇ ಹೊಡೆಯುತ್ತಿದ್ದರು!
"ಒಂದು ದಿನ ಶಾಲೆಯ ಪ್ರಿನ್ಸಿಪಾಲ್ ಗೇಟ್ ಬಳಿಯೇ ನಿಂತಿದ್ದರು. ಅವರು ನನ್ನ ತಾಯಿಯನ್ನು ನೋಡಿ, 'ನಿಮ್ಮ ಮಗನಿಗೆ ಓದಲು ಇಷ್ಟವಿಲ್ಲ, ಇವನನ್ನು ಈಗಲೇ ಮನೆಗೆ ವಾಪಸ್ ಕರೆದುಕೊಂಡು ಹೋಗಿ' ಎಂದರು. ನಂತರ ಅಲ್ಲಿಂದ ಮನೆ ತನಕ ನನ್ನ ತಾಯಿ ನನಗೆ ಹೊಡೆಯುತ್ತಲೇ ಕರೆದುಕೊಂಡು ಬಂದರು. ಅವರು ಹೆಚ್ಚಾಗಿ ಚಪ್ಪಲಿಯಿಂದಲೇ ಹೊಡೆಯುತ್ತಿದ್ದರು, ಅದೇ ಅವರ ಪ್ರಮುಖ ಅಸ್ತ್ರವಾಗಿತ್ತು" ಎಂದು ಬಾಬಿ ಡಿಯೋಲ್ ಹೇಳಿದ್ದಾರೆ.
Bandar trailer: ಬಾಬಿ ಡಿಯೋಲ್, ರಾಜ್ ಬಿ.ಶೆಟ್ಟಿ ನಟನೆಯ 'ಬಂದರ್' ಸಿನಿಮಾ ಟ್ರೈಲರ್ ಔಟ್
ಬಾಬಿ ಡಿಯೋಲ್ ಹೊಸ ಸಿನಿಮಾ ʻಬಂದರ್ʼ
ಸದ್ಯ ಬಾಬಿ ಡಿಯೋಲ್ ಅವರು ಅನುರಾಗ್ ಕಶ್ಯಪ್ ನಿರ್ದೇಶನದ 'ಬಂದರ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಆಕ್ಷನ್-ಥ್ರಿಲ್ಲರ್ ಸಿನಿಮಾ ಜೂನ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆಗೆ, ವೈಆರ್‌ಎಫ್ (YRF) ನಿರ್ಮಾಣದ ಬಹುನಿರೀಕ್ಷಿತ 'ಅಲ್ಫಾ' ಸಿನಿಮಾದಲ್ಲಿಯೂ ಆಲಿಯಾ ಭಟ್ ಮತ್ತು ಶಾರ್ವರಿ ಜೊತೆಗೆ ಪ್ರಮುಖ ಪಾತ್ರದಲ್ಲಿ ಬಾಬಿ ನಟಿಸುತ್ತಿದ್ದಾರೆ.