ನಟ ಚಿಕ್ಕಣ್ಣ ಸದ್ಯ ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಅವರ ಮದುವೆ ನಿಶ್ಚಯವಾಗಿದೆ. ಆದರೂ ತಮ್ಮ ಸಿನಿಮಾ ಕಮಿಟ್‌ಮೆಂಟ್ ಅನ್ನು ಅವರು ಮರೆತಿಲ್ಲ. ಸದ್ಯ ತಮ್ಮ ಅಭಿನಯದ 'ಜೋಡೆತ್ತು' ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಅನ್ನು ಅವರು ಪೂರ್ಣಗೊಳಿಸಿಕೊಟ್ಟಿದ್ದಾರೆ.
ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ 'ಜೋಡೆತ್ತು' ಚಿತ್ರದಲ್ಲಿ ಚಿಕ್ಕಣ್ಣ ಅವರೊಂದಿಗೆ ತೆಲುಗು ನಟ ಸುನಿಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಜೋಡೆತ್ತು' ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಮೈಸೂರಿನ ಹೊರವಲಯದ ಇಮ್ಮಾವು ಬಳಿ ಅದ್ಧೂರಿಯಾಗಿ ನಡೆಯುತ್ತಿದೆ. ಅಲ್ಲಿ ಛಾಯಾಗ್ರಾಹಕ ಕಮ್ ನಿರ್ದೇಶಕ ಸುಧಾಕರ್ ಅವರು ಈ ರೋಮಾಂಚನಕಾರಿ ಎತ್ತಿನಗಾಡಿ ಚೇಸಿಂಗ್ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.
ಎರಡು ಹಾಡುಗಳು ಮಾತ್ರ ಬಾಕಿ
ಸಾವಿರಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಮತ್ತು ನೂರಾರು ಎತ್ತಿನಗಾಡಿಗಳನ್ನು ಬಳಸಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಈ ರೇಸ್ ಸನ್ನಿವೇಶದಲ್ಲಿ ಅದ್ಭುತ ಫೈಟ್ ದೃಶ್ಯಗಳನ್ನು ಸಹ ಸಂಯೋಜಿಸಲಾಗಿತ್ತು. ಈ ಕುರಿತು ಚಿಕ್ಕಣ್ಣ ಮಾತನಾಡಿ, "ಕಳೆದ ಒಂದು ವಾರದಿಂದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುತ್ತಿದ್ದೇವೆ. ಇದರೊಂದಿಗೆ ಟಾಕಿ ಪೋರ್ಷನ್ ಮುಕ್ತಾಯವಾಗಿದ್ದು, ಇನ್ನು ಎರಡು ಹಾಡುಗಳು ಮಾತ್ರ ಬಾಕಿಯಿವೆ. ಈ ರೇಸ್‌ಗಾಗಿ ನಿರ್ಮಾಪಕರು ಸುತ್ತಮುತ್ತಲಿನ ಊರುಗಳಿಂದ ಎತ್ತಿನಗಾಡಿಗಳನ್ನು ತರಿಸಿದ್ದರು. ಬಾಕಿ ಇರುವ ಎರಡು ಗೀತೆಗಳನ್ನು ಮುಂದಿನ ತಿಂಗಳು ಶೂಟ್ ಮಾಡುತ್ತೇವೆ" ಎಂದರು.
Chikkanna Marriage: ಕಾಮಿಡಿ ಕಿಂಗ್ ಚಿಕ್ಕಣ್ಣ ಮದುವೆಗೆ ಮೂಹೂರ್ತ ಫಿಕ್ಸ್! ಇಲ್ಲಿದೆ ಡಿಟೇಲ್ಸ್
ಸಾವಿರಕ್ಕೂ ಹೆಚ್ಚು ಜೂನಿಯರ್ ಕಲಾವಿದರ ಬಳಕೆ
ನಿರ್ದೇಶಕ ಸುಧಾಕರ್ ಎಸ್. ರಾಜ್ ಮಾಹಿತಿ ನೀಡಿ, "ನಮ್ಮ ಚಿತ್ರದ 95% ಶೂಟಿಂಗ್ ಮುಕ್ತಾಯವಾಗಿದೆ. ಸಾವಿರಕ್ಕೂ ಹೆಚ್ಚು ಜೂನಿಯರ್ ಕಲಾವಿದರನ್ನು ಬಳಸಿ ಕ್ಲೈಮ್ಯಾಕ್ಸ್ ಸೀನ್ ಮಾಡಿದ್ದೇವೆ. ಚಿತ್ರದ ಎಲ್ಲಾ ಕಲಾವಿದರೂ ಇದರಲ್ಲಿ ಭಾಗವಹಿಸಿದ್ದರು. ನಿರ್ಮಾಪಕರು ಯಾವುದಕ್ಕೂ ಕೊರತೆ ಮಾಡದೆ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮೈಸೂರು, ಮಂಡ್ಯ, ಮದ್ದೂರು, ಚನ್ನಪಟ್ಟಣ ಮುಂತಾದ ಕಡೆಗಳಲ್ಲಿ ನೈಜವಾಗಿ ಶೂಟ್ ಮಾಡಲಾಗಿದೆ. 'ಜೋಡೆತ್ತು' ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, 1990-95ರ ಕಾಲಘಟ್ಟದಲ್ಲಿ ಈ ಕಥೆ ಸಾಗಲಿದೆ. ಚಿತ್ರದಲ್ಲಿ ಎಮೋಷನ್, ಕಾಮಿಡಿ, ಲವ್, ಸೆಂಟಿಮೆಂಟ್ ಜೊತೆಗೆ ಗ್ರಾಮೀಣ ಸೊಗಡಿನ ಅದ್ಭುತ ಕಥೆಯಿದೆ" ಎಂದರು.
ತೆಲುಗು ನಟ ಸುನಿಲ್ ಮಾತನಾಡಿ, "ಗ್ರಾಮೀಣ ಸೊಗಡಿನ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡುತ್ತಿದ್ದೇನೆ. ಸೀರಿಯಸ್ ಜೊತೆಗೆ ಕಾಮಿಡಿಯಾಗಿ ಸಾಗುವ ಪಾತ್ರವಿದು. ಇದೊಂದು ಸಂಪೂರ್ಣ ಫ್ಯಾಮಿಲಿ ಆಲ್-ರೌಂಡ್ ಎಂಟರ್‌ಟೈನರ್" ಎಂದು ಹೇಳಿದರು. ನಾಯಕನ ತಾಯಿಯ ಪಾತ್ರ ಮಾಡುತ್ತಿರುವ ನಟಿ ಕಲ್ಯಾಣಿ ಮಾತನಾಡಿ, "ಕಥೆಯಲ್ಲಿ ನನ್ನದು ಮುಖ್ಯವಾದ ಪಾತ್ರ. ಸುಧಾಕರ್ ಅವರ ಜೊತೆ ಈ ಮೊದಲು 'ಕಾಟೇರ' ಚಿತ್ರದಲ್ಲಿ ಕೆಲಸ ಮಾಡಿದ್ದೆ. ನನಗೆ ಮಂಡ್ಯ ಭಾಷೆ ಅಷ್ಟಾಗಿ ಬರುತ್ತಿರಲಿಲ್ಲ, ಚಿಕ್ಕಣ್ಣ ನನಗೆ ಹೇಳಿಕೊಟ್ಟರು" ಎಂದು ತಮ್ಮ ಶೂಟಿಂಗ್ ಅನುಭವವನ್ನು ಹಂಚಿಕೊಂಡರು.
ಚಿಕ್ಕಣ್ಣ ಕಥೆಯನ್ನು ತುಂಬಾ ಇಷ್ಟಪಟ್ಟರು
ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ ಮಾತನಾಡಿ, "ನಾನು ಈ ಕಥೆಯನ್ನು ಹಲವು ನಟರಿಗೆ ಹೇಳಿದಾಗ, ಎಲ್ಲರೂ 'ಕಥೆ ಚೆನ್ನಾಗಿದೆ' ಎಂದರು, ಆದರೆ ಯಾರೂ ಅಭಿನಯಿಸಲು ಸಿದ್ಧರಿರಲಿಲ್ಲ. ಕೊನೆಗೆ ಚಿಕ್ಕಣ್ಣ ಕಥೆಯನ್ನು ತುಂಬಾ ಇಷ್ಟಪಟ್ಟು ನಟಿಸಲು ಒಪ್ಪಿಕೊಂಡರು. ನಂತರ ಸುನಿಲ್ ನಮ್ಮ ತಂಡವನ್ನು ಸೇರಿಕೊಂಡರು" ಎಂದು ಹೇಳಿದರು.
ಈ ಚಿತ್ರದಲ್ಲಿ ಚಿಕ್ಕಣ್ಣ ರೈತನಾಗಿ ಅಭಿನಯಿಸಿದ್ದಾರೆ. ಅರ್ಜುನ್ ರಾಜ್ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. "ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಎತ್ತಿನಗಾಡಿ ಚೇಸ್ ದೃಶ್ಯವನ್ನು ಯಾರೂ ಮಾಡಿಲ್ಲ. ಆ ದೃಷ್ಟಿಯಿಂದ ನಾವೇ ಮೊದಲಿಗರು" ಎಂದರು. ಇದೇ ವೇಳೆ ಸುನಿಲ್ ಅವರ ಪತ್ನಿಯ ಪಾತ್ರ ಮಾಡುತ್ತಿರುವ ಜಯಶ್ರೀ, ಕಲಾವಿದರಾದ ಉಗ್ರಂ ಮಂಜು, ಕುರಿ ಪ್ರತಾಪ್, ಶಿವರಾಜ್ ಕೆ.ಆರ್. ಪೇಟೆ, ಹುಲಿ ಕಾರ್ತಿಕ್ ಮುಂತಾದವರೆಲ್ಲರೂ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಿದೆ.