ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಟ್ವಿಸ್ಟ್ ಸಿಗುತ್ತಿದ್ದು, ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ಆತಂಕದ ಮೇಲೆ ಆತಂಕ ಎದುರಾಗಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ ಸತ್ಯ ಹೊರಹಾಕಿ ‘ಮಾಫಿ ಸಾಕ್ಷಿ’ (Approver) ಆಗಲು ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ಇದೀಗ ಮತ್ತಿಬ್ಬರು ಆರೋಪಿಗಳು ತಮಗೂ ಮಾಫಿ ಸಾಕ್ಷಿಯಾಗಲು ಅವಕಾಶ ನೀಡುವಂತೆ ಕೋರ್ಟ್ ಮೆಟ್ಟಿಲೇರಲು ಸಿದ್ಧರಾಗಿದ್ದಾರೆ.
ಮೂಲಗಳ ಪ್ರಕಾರ, ಪ್ರಕರಣದ 8ನೇ ಆರೋಪಿ (A8) ರವಿಶಂಕರ್ ಮತ್ತು 10ನೇ ಆರೋಪಿ (A10) ವಿನಯ್ ಪರ ವಕೀಲರು ತಮ್ಮ ಕಕ್ಷಿದಾರರನ್ನೂ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.
59ನೇ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ
ಬೆಂಗಳೂರಿನ 59ನೇ ಸೆಷನ್ಸ್ ಕೋರ್ಟ್‌ನಲ್ಲಿ ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ನಡೆಯುತ್ತಿದ್ದ ವೇಳೆ, A8 ರವಿಶಂಕರ್ ಹಾಗೂ A10 ವಿನಯ್ ಪರ ವಕೀಲರು ಹಾಜರಾಗಿ, "ನಮ್ಮ ಕಕ್ಷಿದಾರರೂ ಕೂಡ ಸತ್ಯ ಹೇಳಲು ಬಯಸಿದ್ದು, ಮಾಫಿ ಸಾಕ್ಷಿಯಾಗಲು ಮಧ್ಯಾಹ್ನ ಅರ್ಜಿ ಸಲ್ಲಿಸುತ್ತೇವೆ" ಎಂದು ಕೋರ್ಟ್‌ಗೆ ತಿಳಿಸಿದರು.
ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರದೋಷ್ ಪರ ವಕೀಲ ದಿವಾಕರ್, "ನಮ್ಮ ಕಕ್ಷಿದಾರರ ಅರ್ಜಿಯ ಜೊತೆಗೆ ಇತರ ಆರೋಪಿಗಳ ಮನವಿಯನ್ನು ಸೇರಿಸಬಾರದು. ಮೊದಲು ನಮ್ಮ ಕಕ್ಷಿದಾರ ಪ್ರದೋಷ್ ಅವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಲಿ, ಆ ನಂತರ ಪ್ರಾಸಿಕ್ಯೂಷನ್ ಮುಂದಿನ ನಿರ್ಧಾರ ಕೈಗೊಳ್ಳಲಿ" ಎಂದು ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಕೆಲಕಾಲ ಮುಂದೂಡಿತು.
ಪ್ರದೋಷ್‌ಗೆ ದರ್ಶನ್ ಗ್ಯಾಂಗ್‌ನಿಂದ ಭಯ?
ಇದೇ ವೇಳೆ A14 ಪ್ರದೋಷ್ ಪರ ವಕೀಲರು 59ನೇ ಸಿಸಿಹೆಚ್ ಕೋರ್ಟ್‌ಗೆ ಮತ್ತೊಂದು ಮಹತ್ವದ ಅರ್ಜಿ ಸಲ್ಲಿಸಿದ್ದಾರೆ. ಪ್ರದೋಷ್ ಅವರನ್ನು ಜೈಲಿನಿಂದ ಕೋರ್ಟ್‌ಗೆ ಹಾಜರುಪಡಿಸುವಾಗ ನಟ ದರ್ಶನ್ ಇರುವ ಕೊಠಡಿ ಅಥವಾ ಗ್ಯಾಂಗ್ ಜೊತೆ ತರಬಾರದು, ಬದಲಿಗೆ ಪ್ರತ್ಯೇಕ ಜೈಲು ಕೊಠಡಿಯಿಂದ ಹಾಜರುಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ದರ್ಶನ್ ಮತ್ತು ಅವರ ಗ್ಯಾಂಗ್‌ನಿಂದ ಪ್ರದೋಷ್‌ಗೆ ಅಭದ್ರತೆ ಎದುರಾಗಿರುವ ಮುನ್ಸೂಚನೆ ಇದಾಗಿದ್ದು, ಈ ವಿಷಯದಲ್ಲಿ ಪ್ರಾಸಿಕ್ಯೂಷನ್ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.
ದರ್ಶನ್‌ಗೆ ಎದುರಾಗುತ್ತಾ ಸಂಕಷ್ಟ?
ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳೇ ಒಂದೊಂದಾಗಿ ಸರ್ಕಾರಿ ಸಾಕ್ಷಿ (ಮಾಫಿ ಸಾಕ್ಷಿ) ಆಗಲು ಮುಂದಾಗುತ್ತಿರುವುದು ನಟ ದರ್ಶನ್‌ಗೆ ಕಾನೂನಾತ್ಮಕವಾಗಿ ಅತಿದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಆರೋಪಿಗಳೇ ಘಟನೆಯ ಪೂರ್ಣ ವಿವರ ಹಾಗೂ ದರ್ಶನ್ ಅವರ ಪಾತ್ರದ ಬಗ್ಗೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದರೆ, ಅದು ಪ್ರಕರಣಕ್ಕೆ ಬಲವಾದ ಸಾಕ್ಷಿಯಾಗಲಿದ್ದು ದಾಸನಿಗೆ ಜೈಲು ಶಿಕ್ಷೆಯ ಸಂಕಷ್ಟ ಮತ್ತಷ್ಟು ಬಿಗಿಯಾಗಲಿದೆ.