ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ವಿರುದ್ಧ ನಟ ಧನ್ವೀರ್‌ ತಂದೆಯಿಂದ ದೂರು ದಾಖಲು; ಮನೆಗೆ ಬಂದು ಗಲಾಟೆ, ಕೊಲೆ ಬೆದರಿಕೆ ಹಾಕಿದ ಆರೋಪ!

ನಟ ಧನ್ವೀರ್‌ ಮತ್ತು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಆಂತರಿಕ ಮುಸುಕಿನ ಗುದ್ದಾಟ ಬೀದಿಗೆ ಬಿದ್ದಿದೆ. ಧನ್ವೀರ್ ನಿವಾಸಕ್ಕೆ ಅಕ್ರಮವಾಗಿ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಧನ್ವೀರ್ ತಂದೆ ತಿಮ್ಮೇಗೌಡ ರಾಜಾಜಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಟ ದರ್ಶನ್‌ ಅವರ ಪರಮಾಪ್ತ, ನಟ ಧನ್ವೀರ್‌ ಹಾಗೂ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಜಗಳ ತಾರಕಕ್ಕೇರಿದೆ. ಧನ್ವೀರ್‌ ವಿರುದ್ಧ ವಿಜಯಲಕ್ಷ್ಮಿ ಅವರ ಮ್ಯಾನೇಜರ್‌ ನಾಗರಾಜ್‌ ದೂರು ದಾಖಲಿಸಿದ ಬೆನ್ನಲ್ಲೇ, ಇದೀಗ ಧನ್ವೀರ್‌ ತಂದೆ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ ಮತ್ತು ಅವರ ತಂಡದ ವಿರುದ್ಧ ರಾಜಾಜಿನಗರ ಪೊಲೀಸ್‌ ಠಾಣೆಯಲ್ಲಿ ಗಂಭೀರ ಆರೋಪಗಳೊಂದಿಗೆ ಪ್ರತಿದೂರು ದಾಖಲಿಸಿದ್ದಾರೆ. ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್ ಹಾಗೂ ಕೆಲವರು ಮನೆಗೆ ಅಕ್ರಮವಾಗಿ ನುಗ್ಗಿ ಗಲಾಟೆ ಮಾಡಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಧನ್ವೀರ್‌ ಎಲ್ಲಿ? ಅವರ ಅಪ್ಪ ಎಲ್ಲಿ?

ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ಚಿತ್ರ ನಿರ್ಮಾಪಕರೂ ಆಗಿರುವ ತಿಮ್ಮೇಗೌಡ ಅವರು ನೀಡಿರುವ ದೂರಿನ ಪ್ರಕಾರ, ಅಕ್ಟೋಬರ್‌ 21ರಂದು ನಟ ಧನ್ವೀರ್‌ ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದರು. ಅಂದು ರಾತ್ರಿ ಸುಮಾರು 8.30ರ ಸುಮಾರಿಗೆ ಮನೆಯಲ್ಲಿ ತಿಮ್ಮೇಗೌಡ ಅವರು ಊಟ ಮಾಡುತ್ತಿದ್ದ ವೇಳೆ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್‌ ನಾಗರಾಜ್ ಏಕಾಏಕಿ ಮನೆಗೆ ಬಂದಿದ್ದಾರೆ. ಬಾಗಿಲು ತೆರೆದ ಧನ್ವೀರ್ ತಾಯಿ ಭಾರತಿ ಅವರ ಬಳಿ "ಧನ್ವೀರ್‌ ಎಲ್ಲಿ? ಅವರ ಅಪ್ಪ ಎಲ್ಲಿ? ಕೂಡಲೇ ಧನ್ವೀರ್‌ನನ್ನು ಇಲ್ಲಿಗೆ ಕರೆಸಿ" ಎಂದು ಏರುಧ್ವನಿಯಲ್ಲಿ ಕೂಗಾಡಿದ್ದಾರೆ. ಧನ್ವೀರ್‌ ಊರಲ್ಲಿಲ್ಲ, ಅವರ ತಂದೆ ಊಟ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಂತೆಯೇ, ಅದೇ ಸಮಯಕ್ಕೆ ಸ್ಥಳಕ್ಕೆ ಬಂದ ಧನ್ವೀರ್‌ ಸಂಬಂಧಿ ಅಜಯ್‌ ಗೌಡ ಇದರ ಬಗ್ಗೆ ವಿಚಾರಿಸಲು ಮುಂದಾಗಿದ್ದಾರೆ.

ನಾನು ವಿಜಯಲಕ್ಷ್ಮಿ ಅವರ ತಮ್ಮ

ಆ ವೇಳೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಅಜಯ್‌ ಗೌಡರನ್ನು ರೌಡಿ ಎಂದು ತಪ್ಪಾಗಿ ಭಾವಿಸಿದ ನಾಗರಾಜ್‌, ಧನ್ವೀರ್‌ ತಾಯಿಗೆ, "ನೀವು ನಮಗೆ ರೌಡಿಗಳನ್ನು ತೋರಿಸುತ್ತಿದ್ದೀರಾ? ನಾವೀಗ ರೌಡಿಗಳನ್ನು ಹೇಗೆ ಕರೆಯಿಸುತ್ತೇವೆ ನೋಡಿ" ಎಂದು ಬೆದರಿಕೆ ಹಾಕಿದ್ದಾರೆ. ತಕ್ಷಣವೇ ವಿಜಯಲಕ್ಷ್ಮಿ ಅವರ ಸೂಚನೆಯಂತೆ ಗೌರವ್ ಶೆಟ್ಟಿ ಎಂಬುವವರಿಗೆ ಕರೆ ಮಾಡಿ ಭೋಜ ಹಾಗೂ ಬಾಟಲಿ ಪ್ರಮೋದ್ ಎಂಬುವವರನ್ನು ನಾಗರಾಜ್‌ ಕರೆಸಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಅವರಿಬ್ಬರು, ಧನ್ವೀರ್‌ ಕುಟುಂಬದವರಿಗೆ ಧಮ್ಕಿ ಹಾಕಿದ್ದಾರೆ. ಪ್ರಶ್ನಿಸಿದಾಗ, ಬಾಟಲಿ ಪ್ರಮೋದ್ ತಾನು ವಿಜಯಲಕ್ಷ್ಮಿ ಅವರ ತಮ್ಮನೆಂದು ಹೇಳಿಕೊಂಡು ಮನೆಯವರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ.

ನಟ ಧನ್ವೀರ್‌ ವಿರುದ್ಧ ದೂರು ದಾಖಲಿಸಿದ ವಿಜಯಲಕ್ಷ್ಮೀ ದರ್ಶನ್‌ ಮ್ಯಾನೇಜರ್;‌ ‘ಮುಖವಾಡ ಕಳಚುವ ಕಾಲ ಬಂದಿದೆ’ ಎಂದು ಗುಡುಗಿದ ಶೋಕ್ದಾರ್!

ದೂರಿನಲ್ಲಿ ಮನವಿ ಮಾಡಿದ ತಿಮ್ಮೇಗೌಡ

ಜಗಳ ತೀವ್ರಗೊಳ್ಳುತ್ತಿದ್ದಂತೆಯೇ, "ಧನ್ವೀರ್‌ನನ್ನು ಎಲ್ಲಿಗೆ ಕರೆಸಿ ಏನು ಮಾಡಬೇಕೆಂದು ನಮಗೆ ಚೆನ್ನಾಗಿ ಗೊತ್ತಿದೆ" ಎಂದು ನಾಗರಾಜ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಹಂತದಲ್ಲಿ ತಿಮ್ಮೇಗೌಡ ಅವರು ಪೊಲೀಸರಿಗೆ ಕರೆ ಮಾಡಲು ಮುಂದಾಗುತ್ತಿದ್ದಂತೆ, ವಿಜಯಲಕ್ಷ್ಮಿ, ನಾಗರಾಜ್, ಭೋಜ ಹಾಗೂ ಬಾಟಲಿ ಪ್ರಮೋದ್ ಎಲ್ಲರೂ ಒಂದೇ ಕಾರಿನಲ್ಲಿ ಕೂಗಾಡುತ್ತಾ ಸ್ಥಳದಿಂದ ತೆರಳಿದ್ದಾರೆ. ಹೀಗಾಗಿ ಮನೆಗೆ ಅಕ್ರಮ ಪ್ರವೇಶ ಮಾಡಿ ಕೊಲೆ ಬೆದರಿಕೆ ಹಾಕಿರುವ ನಾಲ್ವರ ವಿರುದ್ಧವೂ ಕಾನೂನು ಕ್ರಮ ಜರುಗಿಸಿ, ತಮ್ಮ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ತಿಮ್ಮೇಗೌಡ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಮೊದಲು ದೂರು ದಾಖಲು ಮಾಡಿದ್ದ ನಾಗರಾಜ್

ಇದಕ್ಕೂ ಮುನ್ನ, ನಟ ಧನ್ವೀರ್‌ ತಮಗೆ ಫೋನ್‌ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್‌ ನಾಗರಾಜ್‌ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಜತೆಗೆ ಸಂಭಾಷಣೆಯ ಆಡಿಯೊ ಕ್ಲಿಪ್‌ಗಳನ್ನು ಸಾಕ್ಷಿಯಾಗಿ ಪೊಲೀಸರಿಗೆ ಒಪ್ಪಿಸಿದ್ದರು. ಸದ್ಯ ತಿಮ್ಮೇಗೌಡರ ದೂರಿನ ಸಂಬಂಧ ಅಸಂಜ್ಞೆಯ ಪ್ರಕರಣ (ಎನ್‌ಸಿಆರ್) ದಾಖಲಿಸಲಾಗಿದೆ ಎಂದು ರಾಜಾಜಿನಗರ ಠಾಣೆ ಪೊಲೀಸರು ಹೇಳಿದ್ದಾರೆ.