ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ..ʼ; ವಿಚ್ಛೇದನ ತೀರ್ಪು ಬಂದ ಮೇಲೆ ʻದುನಿಯಾʼ ವಿಜಯ್‌ ಮೊದಲ ಪ್ರತಿಕ್ರಿಯೆ

ʻದುನಿಯಾʼ ವಿಜಯ್‌ ಅವರ ವಿಚ್ಛೇದನ ಪ್ರಕರಣ ಕೊನೆಗೂ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇತ್ಯರ್ಥಗೊಂಡಿದ್ದು, ದಂಪತಿಗೆ ವಿಚ್ಛೇದನ ಮಂಜೂರಾಗಿದೆ. ಪತ್ನಿ ನಾಗರತ್ನ ಅವರಿಗೆ 2 ಕೋಟಿ ರೂ. ಖಾಯಂ ಜೀವನಾಂಶ ಪಾವತಿಸಲು ನ್ಯಾಯಾಲಯ ಸೂಚಿಸಿದೆ. ತೀರ್ಪಿಗೆ ತಲೆಬಾಗಿ ಗೌರವ ವ್ಯಕ್ತಪಡಿಸಿರುವ ನಟ ವಿಜಯ್, ತಮ್ಮ ಮೇಲಾದ ಮಾನಸಿಕ ಕ್ರೌರ್ಯವನ್ನು ಕೋರ್ಟ್ ಪರಿಗಣಿಸಿದೆ ಎಂದಿದ್ದಾರೆ.

ನಟ ‘ದುನಿಯಾ’ ವಿಜಯ್‌ ಮತ್ತು ನಾಗರತ್ನ ಅವರ ದಾಂಪತ್ಯ ಬದುಕಿಗೆ ತೆರೆಬಿದ್ದಿದೆ. ಸುಮಾರು 13 ವರ್ಷಗಳ ವಿಚ್ಛೇದನ ಪ್ರಕರಣ ಕೊನೆಗೂ ಇತ್ಯರ್ಥಗೊಂಡಿದೆ. ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿಭೂಷಣ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಇಬ್ಬರಿಗೂ ವಿಚ್ಛೇದನ ಮಂಜೂರು ಮಾಡಿದೆ. ತೀರ್ಪು ಪ್ರಕಟವಾದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ‘ದುನಿಯಾ’ ವಿಜಯ್‌, "ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ.." ಎಂದಿದ್ದಾರೆ.

ಕಾನೂನಿನ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ

"ಸಮಸ್ತ ಅಭಿಮಾನಿಗಳಲ್ಲಿ ಹಾಗೂ ನನ್ನ ಬದುಕಿನುದ್ದಕ್ಕೂ ಜೊತೆಯಾಗಿ ನಿಂತ ಮಾಧ್ಯಮ ಮಿತ್ರರಲ್ಲಿ ಕಳಕಳಿಯ ಮನವಿ... ನ್ಯಾಯಾಲಯದ ಆದೇಶಕ್ಕೆ ಶಿರಸಾಷ್ಟಾಂಗ ಪ್ರಣಾಮಗಳೊಂದಿಗೆ ಶರಣಾಗಿದ್ದೇನೆ. ಕಾನೂನಿನ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ನನ್ನ ಮೇಲಿನ ಮಾನಸಿಕ ಕ್ರೌರ್ಯವನ್ನು ಪರಿಗಣಿಸಿ, ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಡಿ.ಕೆ. ಸಿಂಗ್ ಹಾಗೂ ಶ್ರೀ ಶಾಂತಿಭೂಷಣ್ ಅವರು ನೀಡಿರುವ ಆದೇಶಕ್ಕೆ ತಲೆಬಾಗಿದ್ದೇನೆ. ಈ ಆದೇಶಕ್ಕೆ ನನ್ನ ಗೌರವಪೂರ್ವಕ ಧನ್ಯವಾದಗಳು" ಎಂದು ‘ದುನಿಯಾ’ ವಿಜಯ್ ಹೇಳಿದ್ದಾರೆ.

ನಟ ‘ದುನಿಯಾ’ ವಿಜಯ್ - ನಾಗರತ್ನ ದಾಂಪತ್ಯ ಬದುಕಿಗೆ ಅಂತ್ಯ: ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್‌, 2 ಕೋಟಿ ಜೀವನಾಂಶಕ್ಕೆ ಆದೇಶ!

ನನ್ನ ಹೆಣ್ಣುಮಕ್ಕಳಿಗೆ ಮುಜುಗರವಾಗಬಾರದು!

"ಹಾಗೆಯೇ ನನ್ನ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಶ್ರೀವತ್ಸ ಹಾಗೂ ಯುಕ್ತ ಅನಿಲ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾಧ್ಯಮಗಳಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ಹೆಚ್ಚೇನೂ ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ಹೆಣ್ಣುಮಕ್ಕಳು ವಯಸ್ಕರಾಗಿದ್ದು, ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನ ಗಳಿಸಿದ್ದಾರೆ; ಅವರಿಗೆ ಯಾವುದೇ ರೀತಿಯ ಮುಜುಗರವಾಗಬಾರದು. ಮಕ್ಕಳ ಭವಿಷ್ಯ ಹಾಗೂ ಹಿತದೃಷ್ಟಿಯಿಂದ, ನನ್ನ ವೈಯಕ್ತಿಕ ಸಾಂಸಾರಿಕ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ಆದೇಶವನ್ನು ಆತ್ಮಸಾಕ್ಷಿಯಿಂದ ಸ್ವೀಕರಿಸಿದ್ದೇನೆ. ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ; ನಿಮ್ಮ ಆಶೀರ್ವಾದ ಮತ್ತು ಹಾರೈಕೆ ಸದಾ ಹೀಗೆಯೇ ಇರಲಿ" ಎಂದು ವಿನಂತಿಸಿದ್ದಾರೆ.

2 ಕೋಟಿ ರೂ. ಜೀವನಾಂಶ ನೀಡಲು ಆದೇಶ

ವಿಜಯ್ ಹಾಗೂ ನಾಗರತ್ನ ದಂಪತಿಗೆ ಮೋನಿಷಾ, ರಿತನ್ಯಾ ಹಾಗೂ ಸಾಮ್ರಾಟ್‌ ಎಂಬ ಮೂವರು ಮಕ್ಕಳಿದ್ದಾರೆ. ಪತ್ನಿ ಹಾಗೂ ಮೂವರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮತ್ತು ಮಕ್ಕಳೆಲ್ಲರೂ ಇನ್ನೂ ಅವಿವಾಹಿತರಾಗಿರುವುದರಿಂದ, ದುನಿಯಾ ವಿಜಯ್ ಅವರ ಸಾಮಾಜಿಕ ಸ್ಥಾನಮಾನ ಹಾಗೂ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ನಾಗರತ್ನ ಅವರಿಗೆ 2 ಕೋಟಿ ರೂಪಾಯಿ ಖಾಯಂ ಜೀವನಾಂಶ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.

ಮೂರು ತಿಂಗಳ ಒಳಗಾಗಿ ಈ ಮೊತ್ತವನ್ನು ನಾಗರತ್ನ ಅವರಿಗೆ ಪಾವತಿಸುವಂತೆ ವಿಜಯ್‌ಗೆ ಸೂಚಿಸಲಾಗಿದೆ. 1999ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಿಜಯ್‌ ಮತ್ತು ನಾಗರತ್ನ ಅವರ 27 ವರ್ಷಗಳ ದಾಂಪತ್ಯ ಸಂಬಂಧ ಇದೀಗ ಅಧಿಕೃತವಾಗಿ ಅಂತ್ಯಗೊಂಡಿದೆ.