ನಟ, ರಾಜ್ಯ ಸಭಾ ಸದಸ್ಯ ಜಗ್ಗೇಶ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಭರ್ತಿ 45 ವರ್ಷ ಆಗಿದೆ. ಅವರು ನಟಿಸಿದ್ದ ಮೊದಲ ಸಿನಿಮಾ ಸೆಟ್ಟೇರಿದ್ದು 1980ರಲ್ಲಿ. ಆ ಚಿತ್ರದ ಹೆಸರು "ಕನ್ನಡತಿ ಮಾನವತಿ" ಅಂತ. ಆದರೆ ಆ ಚಿತ್ರಕ್ಕಾಗಿ ಜಗ್ಗೇಶ್ ಅವರಿಗೆ ಮೊದಲ ಬಾರಿಗೆ ಮೇಕಪ್ ಹಚ್ಚಲಾಗಿತ್ತು. ಆದರೆ, ಅದ್ಯಾಕೋ ಆ ಸಿನಿಮಾ ತೆರೆಗೆ ಬರಲೇ ಇಲ್ಲ! ಇದೀಗ ಆ ಬಗ್ಗೆ ಜಗ್ಗೇಶ್ ಬರೆದುಕೊಂಡಿದ್ದಾರೆ. ತಮ್ಮ ವೃತ್ತಿ ಬದುಕಿಗೆ 45 ವರ್ಷ ತುಂಬಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಮೊದಲು ಬಣ್ಣ ಹಚ್ಚಿದ್ದಾಗ ನನಗೆ 18 ವರ್ಷ
"1980 ನವೆಂಬರ್ 17ನೇ ತಾರೀಖು.. ಆಗ ನನಗೆ 18 ವರ್ಷ ವಯಸ್ಸು ನಾನು ಬಣ್ಣ ಹಚ್ಚಿ ನಟಿಸಿದ ಚಿತ್ರ "ಕನ್ನಡತಿ ಮಾನವತಿ". ಸ್ಥಳ ಗುಬ್ಬಿ ಚನ್ನಬಸವೇಶ್ವರ ಆಲಯ.. ಬಣ್ಣ ಹಚ್ಚಿದವರು ಅಂಬರೀಶ್ ರವರ ಮೇಕಪ್ ಮಾಡುತ್ತಿದ್ದ ರಾಮಕೃಷ್ಣ ಹಾಗೂ ಅವರ ಶಿಷ್ಯ ಕೃಷ್ಣ. ಪಾತ್ರ ಕೊಡಿಸಿದವ ನನ್ನ ಮಿತ್ರ ಶಂಭು.. ನನಗೆ ಮೀಸೆ ಬರೆದವರು ಹಾಸ್ಯನಟ ರತ್ನಾಕರ್, ಚಿತ್ರದ ನಾಯಕ ರಾಮಕೃಷ್ಣ, ನಾಯಕಿ ಪ್ರಮೀಳಾ ಜೋಷಾಯ್.. ನನ್ನ ಜೊತೆ ನಟಿಸಿದ ನಟಿ ಸಿಹಿಕಹಿ ಗೀತ ಅಕ್ಕ, ಚಿತ್ರ ಬಿಡುಗಡೆ ಆಗಲಿಲ್ಲ" ಎಂದು ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ.
ಜಗ್ಗೇಶ್ ಶೇರ್ ಮಾಡಿಕೊಂಡಿರುವ ಪೋಸ್ಟ್ ಇಲ್ಲಿದೆ
ನವರಸ ನಾಯಕ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ
ಕನ್ನಡ ಪ್ರೇಕ್ಷಕರ ಪ್ರೀತಿ ಚಪ್ಪಾಳೆಯಿಂದ ಬೆಳೆದುನಿಂತೆ
"ನನ್ನ ಅದೃಷ್ಟ, ನಿರ್ದೇಶಕ ಸಿದ್ದಲಿಂಗಯ್ಯ ಅವರ ಮಗ ಮುರಳಿ ಅವರ ಚಿತ್ರ ʻಬಿಳಿ ಗುಲಾಬಿʼ ಸಿಗಲು ಕಾರಣವಾದರು ಪುಟ್ಟಣ್ಣ ಕಣಗಾಲ್ ಅವರ ಸಹಾಯಕ ನಿರ್ದೇಶಕ ದಿವಂಗತ ಅರಕಲಗೂಡು ನಂಜುಂಡ. ನಂತರ ಕೆ ವಿ ಜಯರಾಂ ಅವರ ಕೃಪೆಯಿಂದ ʻಇಬ್ಬನಿ ಕರಗಿತುʼ ಚಿತ್ರದಲ್ಲಿ ಮುಂದುವರೆದು, 1984ರಲ್ಲಿ ʻಶ್ವೇತ ಗುಲಾಬಿʼಚಿತ್ರದ ಅವಕಾಶ ಸಿಕ್ಕು, ನಂತರ ಪರಿಮಳ ನಾನು ಮದುವೆಯಾಗಿ ಸ್ಟೇಷನ್, ಸುಪ್ರೀಮ್ ಕೋರ್ಟು ಅವಾಂತರ ಮುಗಿಸಿ ನಂತರ ಹಿಂದೆ ನೋಡದೆ ರಾಯರ ಕೃಪೆಯಿಂದ ಅಂದಿನ ಕನ್ನಡ ಪ್ರೇಕ್ಷಕರ ಪ್ರೀತಿ ಚಪ್ಪಾಳೆಯಿಂದ ವಿವಿಧ ಪಾತ್ರ ಮಾಡುತ್ತ ಬೆಳೆದುನಿಂತೆ" ಎಂದು ಜಗ್ಗೇಶ್ ಅವರು ಬರೆದುಕೊಂಡಿದ್ದಾರೆ.
ಡೆಡ್ಲಿ ಕಿಲ್ಲರ್‌ಗೆ ಜಗ್ಗೇಶ್ ಸಾಥ್
ಕಲಾವಿದರನ್ನು ಬೆಳಸಿ, ಹರಸಿ
"ಇಂದಿಗೆ ನನ್ನ ಸಿನಿಮಾ ಪ್ರಯಾಣಕ್ಕೆ 45ವರ್ಷ ಆಯುಷ್ಯ. ನಡೆದು ಬಂದ ದಾರಿ ನೆನಪಿನ ಬುತ್ತಿ. ಮುಂದೆಯೂ ನಿಮ್ಮ ಪ್ರೀತಿ ನನ್ನ ಮೇಲಿರಲಿ ಹಾಗೂ ನನ್ನಂತೆ ಮುಂದೆ ಚಿತ್ರರಂಗಕ್ಕೆ ಬರುವ ಹೊಸ ಕಲಾವಿದರ ಹರಸಿ ಬೆಳೆಸಿ" ಎಂದು ಮನವಿ ಮಾಡಿಕೊಂಡಿದ್ದಾರೆ ಜಗ್ಗೇಶ್.
ಜಗ್ಗೇಶ್ ಅವರ ವೃತ್ತಿ ಬದುಕಿಗೆ 45 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಪ್ರೀತಿಯಿಂದ ಶುಭ ಹಾರೈಸಿದ್ದಾರೆ.