ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿದ ನಿರ್ದೇಶಕ ಪಿ. ಸಿ. ಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಮಹಾನ್’ ಚಿತ್ರತಂಡ, ಇದೀಗ ಚಿತ್ರದ ಪ್ರಮುಖ ಪಾತ್ರಧಾರಿಗಳಾದ 'ರಂಗಿತರಂಗ' ಖ್ಯಾತಿಯ ರಾಧಿಕಾ ನಾರಾಯಣ್ ಹಾಗೂ ನಟ ಮಿತ್ರ ಅವರ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದೆ. 'ಆಕಾಶ ಪಿಕ್ಚರ್ಸ್' ಲಾಂಛನದಲ್ಲಿ ಪ್ರಕಾಶ್ ಬೂದೂರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದ್ದು, ನಾಯಕನಾಗಿ ವಿಜಯ ರಾಘವೇಂದ್ರ ಅಭಿನಯಿಸುತ್ತಿದ್ದಾರೆ.
ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ರಾಧಿಕಾ ನಾರಾಯಣ್
ಚಿತ್ರದ ಕುರಿತು ಮಾತನಾಡಿದ ನಟಿ ರಾಧಿಕಾ ನಾರಾಯಣ್, "ನಾನು ನಗರ ಪ್ರದೇಶದಲ್ಲಿ ಬೆಳೆದವಳಾದರೂ ಮೊದಲ ಬಾರಿಗೆ ಈ ಚಿತ್ರದಲ್ಲಿ ಪಕ್ಕಾ ಗ್ರಾಮೀಣ ಭಾಗದ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾಯಕನಿಗೆ ಬೆನ್ನೆಲುಬಾಗಿ ನಿಲ್ಲುವ ಮುಖ್ಯ ಪಾತ್ರವಿದು. ನಿರ್ದೇಶಕ ಪಿ. ಸಿ. ಶೇಖರ್ ಅವರ ಜೊತೆ ಕೆಲಸ ಮಾಡಬೇಕೆಂಬ ನನ್ನ ಬಹುದಿನಗಳ ಆಸೆ ಈ ಮೂಲಕ ಈಡೇರಿದೆ. ಶಿವರಾಜ್‌ಕುಮಾರ್ ಅವರ ವಿಶೇಷ ಪಾತ್ರ ಈ ಚಿತ್ರದ ತೂಕವನ್ನು ಹೆಚ್ಚಿಸಿದೆ. ವಿಜಯ ರಾಘವೇಂದ್ರ, ವರ್ಷ ಬೊಳ್ಳಮ್ಮ ಹಾಗೂ ಮಿತ್ರ ಅವರಂತಹ ಅತ್ಯುತ್ತಮ ಕಲಾವಿದರ ಜೊತೆ ನಟಿಸಿದ ಅನುಭವ ಖುಷಿಕೊಟ್ಟಿದೆ" ಎಂದರು.
ನಾಯಕನಿಗೆ ಬೆಂಗಾವಲಾಗುವ ಮಿತ್ರ
ಈಚೆಗಷ್ಟೇ ʻಕರಾವಳಿʼ ಚಿತ್ರದಲ್ಲಿ ಮಿಂಚಿದ್ದ ನಟ ಮಿತ್ರ ʻಮಹಾನ್ʼ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. "ರಾಗ ಚಿತ್ರದ ನಂತರ ಮತ್ತೆ ನಿರ್ದೇಶಕ ಪಿ. ಸಿ. ಶೇಖರ್ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. 'ಮಹಾನ್' ಚಿತ್ರದಲ್ಲಿ ನಾಯಕ ವಿಜಯ ರಾಘವೇಂದ್ರ ಅವರ ಸೋದರಮಾವನಾಗಿ ನಟಿಸಿದ್ದು, ಸದಾ ನಾಯಕನ ಜೊತೆಗೇ ಇರುತ್ತೇನೆ. ನಾಯಕನದ್ದು ಸೌಮ್ಯ ಸ್ವಭಾವವಾದರೆ, ನನ್ನದು ಮುಂಗೋಪದ ಪಾತ್ರ. ಇದೊಂದು ರೈತರ ಕುರಿತಾದ ಸಾಮಾಜಿಕ ಕಳಕಳಿಯ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ" ಎಂಬ ಭರವಸೆ ವ್ಯಕ್ತಪಡಿಸಿದರು.
ರೈತನಾಗಿ ವಿಜಯ ರಾಘವೇಂದ್ರ
ಚಿತ್ರದ ಪಾತ್ರಗಳ ಬಗ್ಗೆ ವಿವರಿಸಿದ ನಿರ್ದೇಶಕ ಪಿ. ಸಿ. ಶೇಖರ್, "ವಿಜಯ್ ರಾಘವೇಂದ್ರ ಅವರು ಈ ಹಿಂದೆಂದೂ ಮಾಡಿರದ ಸಾಮಾಜಿಕ ಕಾಳಜಿಯಿರುವ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಬೆನ್ನಿಗೆ ನಿಲ್ಲುವ ನರ್ಸ್ ಪಾತ್ರದಲ್ಲಿ ರಾಧಿಕಾ ನಾರಾಯಣ್ ಅಭಿನಯಿಸಿದ್ದಾರೆ. ‘ರಾಗ’ ಚಿತ್ರದ ನಂತರ ಮಿತ್ರ ಅವರು ಮತ್ತೆ ನನ್ನ ನಿರ್ದೇಶನದಲ್ಲಿ ನಟಿಸುತ್ತಿದ್ದು, ವಯಸ್ಸಿನ ಅಂತರವಿದ್ದರೂ ನಾಯಕನ ಜೊತೆಗೆ ಸ್ನೇಹಿತನಂತೆ ಸದಾ ಬೆಂಗಾವಲಾಗಿರುವ ಅತ್ಯಂತ ಪ್ರಾಮುಖ್ಯತೆಯುಳ್ಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ" ಎಂದರು.
'ಆಕಾಶ ಪಿಕ್ಚರ್ಸ್' ಮೊದಲ ಹೆಜ್ಜೆ
ನಿರ್ಮಾಪಕ ಪ್ರಕಾಶ್ ಬೂದೂರು ಮಾತನಾಡಿ, " ಮಹಾನ್, ನಮ್ಮ ‘ಆಕಾಶ ಪಿಕ್ಚರ್ಸ್’ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರ. ಪ್ರೇಕ್ಷಕರಿಗೆ ಸದಭಿರುಚಿಯ ಹಾಗೂ ಗುಣಮಟ್ಟದ ಸಿನಿಮಾಗಳನ್ನು ನೀಡುವ ಉದ್ದೇಶದಿಂದ ಈ ಚಿತ್ರವನ್ನು ಯಾವುದೇ ಕೊರತೆಯಾಗದಂತೆ ಅದ್ದೂರಿಯಾಗಿ ನಿರ್ಮಿಸುತ್ತಿದ್ದೇವೆ" ಎಂದು ತಿಳಿಸಿದರು. ಈ ಚಿತ್ರದಲ್ಲಿ ʻಹ್ಯಾಟ್ರಿಕ್ ಹೀರೋʼ ಶಿವರಾಜಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.