ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ; ನಟ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲು!

Prakash Raj Controversy: ರಾಮಾಯಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ನಟ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಕಾರ್ಯಕ್ರಮವೊಂದರಲ್ಲಿ ರಾಮನನ್ನು 'ಉತ್ತರ ಭಾರತೀಯ' ಎಂದು ಕರೆದಿದ್ದಲ್ಲದೆ, ರಾಮಾಯಣದ ಘಟನೆಗಳನ್ನು ಜಿಎಸ್‌ಟಿ ಮತ್ತು ಡಿಸ್ಕೌಂಟ್‌ಗೆ ಹೋಲಿಸಿ ಪ್ರಕಾಶ್‌ ರಾಜ್‌ ವ್ಯಂಗ್ಯವಾಡಿದ್ದರು.

ನಟ ಪ್ರಕಾಶ್ ರಾಜ್ ಅವರು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು, ಈಚೆಗೆ ರಾಮಾಯಣದ ಬಗ್ಗೆ ನೀಡಿದ ಹೇಳಿಕೆಗಾಗಿ ಪ್ರಕಾಶ್‌ ರಾಜ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪ್ರಕಾಶ್, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಕ್ರಿಮಿನಲ್ ಮೊಕದ್ದಮೆಯ ಬಗ್ಗೆ ಹೆಚ್ಚಿನ ವಿವರಗಳು ಅಧಿಕೃತವಾಗಿ ಇನ್ನೂ ಬಹಿರಂಗಗೊಂಡಿಲ್ಲ.

ಪ್ರಕಾಶ್‌ ರಾಜ್‌ ಹೇಳಿದ್ದೇನು?

ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರಕಾಶ್ ರಾಜ್‌ ಕಾರ್ಯಕ್ರಮವೊಂದರಲ್ಲಿ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕಂಡುಬಂದಿದೆ. ರಾಮನನ್ನು 'ಉತ್ತರ ಭಾರತೀಯ' ಎಂದು ಕರೆದಿದ್ದಾರೆ ಮತ್ತು ರಾಮನು ತನ್ನ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನೊಂದಿಗೆ ರಾವಣನ ಪ್ರದೇಶವಾಗಿದ್ದ ದಕ್ಷಿಣಕ್ಕೆ ಪ್ರಯಾಣ ಬೆಳೆಸಿದರು ಎಂದು ಹೇಳುವ ಮೂಲಕ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎನ್ನಲಾಗಿದೆ.

Prakash Raj: ರಾಮ ವಲಸೆ ಕಾರ್ಮಿಕ, ರಾವಣನ ತೋಟದ ಹಣ್ಣು ಕಿತ್ತು ತಿಂದ: ಪ್ರಕಾಶ್‌ ರಾಜ್‌ ಹೊಸ ರಾಮಾಯಣ

"ಹಸಿದಿದ್ದ ರಾಮ ಮತ್ತು ಲಕ್ಷ್ಮಣ ಕಾಡಿನಲ್ಲಿ ಹಣ್ಣುಗಳನ್ನು ಕಂಡು ಅವುಗಳನ್ನು ಸವಿದರು. ರಾವಣನ ತಂಗಿ ಶೂರ್ಪನಖಿ ಅವರು ತಮ್ಮ ಭೂಮಿಯ ಹಣ್ಣುಗಳನ್ನು ತಿನ್ನುವುದನ್ನು ಗಮನಿಸಿ ತನ್ನ ಅಣ್ಣನಿಗೆ ವಿಷಯ ತಿಳಿಸಿದಳು. ರಾವಣನು ಅವರಿಗೆ ಹಣ್ಣುಗಳನ್ನು ತಿನ್ನಲು ಬಿಡುವಷ್ಟು ದಯಾಳುವಾಗಿದ್ದನು. ನಂತರ, ಶೂರ್ಪನಖಿ ಅವರಿಂದ ಹಣವನ್ನು ಕೇಳಿದಾಗ, ತಾವು 14 ವರ್ಷಗಳ ವನವಾಸದಲ್ಲಿರುವುದರಿಂದ ನೀಡಲು ಏನೂ ಇಲ್ಲ ಅಂತ ಲಕ್ಷ್ಮಣ ಹೇಳಿದನು" ಎಂದು ನಟ ಪ್ರಕಾಶ್ ರಾಜ್ ಅವರು ವ್ಯಂಗ್ಯವಾಗಿ ಹೇಳಿದ್ದರು. ಅಲ್ಲದೆ, "ಆ ಹಣ್ಣುಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿತ್ತು" ಅಂತಲೂ ಹೇಳಿದ್ದರು.

ತಾಯಿ ಅಂತ್ಯಕ್ರಿಯೆ ವೇಳೆ ನಾಸ್ತಿಕರಾದ ಪ್ರಕಾಶ್‌ ರಾಜ್‌‌ ಚರ್ಚ್‌ನಲ್ಲಿ ಪ್ರಾರ್ಥಿಸಿದ್ದೇಕೆ? ಎಲ್ಲಾ ಪ್ರಶ್ನೆಗೂ ಒಂದೇ ಮಾತಿನಲ್ಲಿ ಫುಲ್‌ಸ್ಟಾಪ್!

"ರಾಮ ಲಕ್ಷ್ಮಣರ ಮನವಿಯನ್ನು ಪರಿಗಣಿಸಿದ ರಾವಣನು 'ಡಿಸ್ಕೌಂಟ್' ನೀಡುವಂತೆ ತನ್ನ ತಂಗಿಗೆ ಹೇಳಿದನು. ಆದರೆ ಹಣವೇ ಇಲ್ಲ ಎಂದಮೇಲೆ ಡಿಸ್ಕೌಂಟ್ ಕೊಟ್ಟು ಏನು ಪ್ರಯೋಜನ" ಎಂದು ಪ್ರಕಾಶ್‌ ರಾಜ್ ಹೇಳಿದ್ದರು. ಆಗ ಸಭೆಯಲ್ಲಿದ್ದ ಒಂದು ವರ್ಗದ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರೆ, ಕೆಲವರು ತಟಸ್ಥರಾಗಿದ್ದರು. ಇದೇ ವೇಳೆ, ಕೇರಳಕ್ಕೆ ಭೇಟಿ ನೀಡುವ ಜನರು ಮಲಯಾಳಂ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು ಎಂದು ಪ್ರಕಾಶ್‌ ರಾಜ್ ಹೇಳಿದ್ದರು.

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ಕೇಳಿಬಂದಿದೆ. 'ದೇಶದ್ರೋಹಿ' ಎಂದು ಕರೆದಿರುವ ಕೆಲ ನೆಟ್ಟಿಗರು, ಉತ್ತರ ಮತ್ತು ದಕ್ಷಿಣದ ನಡುವೆ ಬಿರುಕು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಈ ಹೇಳಿಕೆಯಿಂದಾಗಿ ಪ್ರಕಾಶ ರಾಜ್‌ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿದೆ ಎಂಬ ಮಾಹಿತಿಯು ಕೇಳಿಬಂದಿದೆ. ಈ ಕುರಿತ ಹೆಚ್ಚಿನ ಅಪ್ಡೇಟ್‌ ಇನ್ನಷ್ಟೇ ಸಿಗಬೇಕಿದೆ.