ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರು ಪ್ರಸ್ತುತ ಚೆಕ್ ಬೌನ್ಸ್ ಪ್ರಕರಣದಲ್ಲಿ ಸಿಲುಕಿದ್ದು, ತಿಹಾರ್ ಜೈಲಿನಲ್ಲಿ ದಿನ ದೂಡುತ್ತಿದ್ದಾರೆ. ಆದರೆ ಈ ಮಧ್ಯೆ ಹಳೆಯ ವಿಡಿಯೋವೊಂದು ವೈರಲ್ ಆಗಿ, ರಾಜ್ ಪಾಲ್ ಯಾದವ್ ಜೈಲಿನಿಂದ ರಿಲೀಸ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಸಲ್ಮಾನ್ ಖಾನ್ ಅವರಿಗೆ ರಾಜ್ ಪಾಲ್ ಯಾದವ್ ಧನ್ಯವಾದ ಹೇಳಿದ್ದು, ಸಲ್ಮಾನ್ ಅವರಿಂದಲೇ ರಾಜ್ ಪಾಲ್ ಯಾದವ್ ಜೈಲಿನಿಂದ ರಿಲೀಸ್ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಅಸಲಿ ವಿಚಾರವೇ ಬೇರೆ!
ರಿಲೀಸ್ ಆಗಿಲ್ಲ, ಆ ವಿಡಿಯೋ ಫೇಕ್
ಸದ್ಯ ರಾಜ್‌ಪಾಲ್ ಯಾದವ್ ಜೈಲಿನಿಂದ ರಿಲೀಸ್ ಆಗಿಲ್ಲ. "ಸದ್ಯಕ್ಕೆ ನನ್ನ ಪತಿ ತಿಹಾರ್ ಜೈಲಿನಲ್ಲಿಯೇ ಇದ್ದಾರೆ. ಸೋಮವಾರ (ಫೆಬ್ರವರಿ 16) ಜಾಮೀನು ವಿಚಾರಣೆ ನಿಗದಿಯಾಗಿದೆ. ನನಗೆ ತಿಳಿದ ಮಟ್ಟಿಗೆ ಅವರು ಕ್ಷೇಮವಾಗಿದ್ದಾರೆ. ಈ ಸಮಯದಲ್ಲಿ ನಮ್ಮ ಇಡೀ ಕುಟುಂಬ ಒಟ್ಟಿಗಿದೆ. ಅಭಿಮಾನಿಗಳು ಮತ್ತು ಚಿತ್ರರಂಗದವರಿಂದ ರಾಜ್ ಪಾಲ್ ಯಾದವ್ ಅವರಿಗೆ ಸಿಗುತ್ತಿರುವ ಪ್ರೀತಿ ಮತ್ತು ಬೆಂಬಲಕ್ಕೆ ನಾವು ತುಂಬಾ ಆಭಾರಿಯಾಗಿದ್ದೇವೆ" ಎಂದು ಹೇಳುವ ಮೂಲಕ ರಾಜ್‌ಪಾಲ್ ಯಾದವ್ ಪತ್ನಿ ರಾಧಾ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
"ನಾನು ಈಗ ನಿರ್ದಿಷ್ಟ ಹೆಸರುಗಳನ್ನು ಹೇಳಲು ಸಾಧ್ಯವಿಲ್ಲ, ಆದರೆ ಇಂಡಸ್ಟ್ರಿಯ ಅನೇಕರು ಬೆಂಬಲ ನೀಡಲು ಮುಂದೆ ಬಂದಿದ್ದಾರೆ ಎಂದು ಹೇಳಬಲ್ಲೆ. ಈ ಹಂತದಲ್ಲಿ ವ್ಯಕ್ತಿಗಳ ಹೆಸರು, ಮತ್ತು ಅವರು ಅವರು ನೀಡರುವ ಮೊತ್ತವನ್ನು ಬಹಿರಂಗಪಡಿಸಲು ನನಗೆ ಸಾಧ್ಯವಿಲ್ಲ" ಎಂದು ರಾಧಾ ತಿಳಿಸಿದ್ದಾರೆ.
"ರಾಜ್ ಪಾಲ್ ಯಾದವ್ ಅವರು ಅತಿ ಶೀಘ್ರದಲ್ಲೇ ಹೊರಬರುತ್ತಾರೆ ಎಂಬ ನಂಬಿಕೆ ನಮಗಿದೆ. ಅವರು ಹೊರಬಂದ ನಂತರ, ಅವರೇ ಮಾಧ್ಯಮಗಳೊಂದಿಗೆ ಮಾತನಾಡಿ, ಈ ವಿಷಯದ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡುತ್ತಾರೆ" ಎಂದಿದ್ದಾರೆ ರಾಧಾ. ಅಂದಹಾಗೆ, ಈಗ ವೈರಲ್ ಆಗಿರುವ ವಿಡಿಯೋ 2018ರಲ್ಲಿ ಚಿತ್ರೀಕರಿಸಿದ್ದು. ಆಗಲೂ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದರು ರಾಜ್‌ಪಾಲ್. ಆಗಲೂ ಇದೇ ಚೆಕ್-ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಸುಮಾರು ಮೂರು ತಿಂಗಳುಗಳ ಕಾಲ ಜೈಲಿನಲ್ಲಿದ್ದರು.
ಹರಿದಾಡುತ್ತಿರುವ ಫೇಕ್ ಸುದ್ದಿ ಇದೇ ನೋಡಿ
ಏನಿದು ಪ್ರಕರಣ?
2012ರಲ್ಲಿ ರಾಜ್ ಪಾಲ್ ಮೊದಲ ಬಾರಿಗೆ ನಿರ್ದೇಶಿಸಿದ 'ಅತಾ ಪತಾ ಲಾಫತಾ' ಚಿತ್ರಕ್ಕಾಗಿ ಸುಮಾರು 5 ಕೋಟಿ ರೂ. ಸಾಲವನ್ನು ದೆಹಲಿ ಮೂಲದ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಪಡೆದುಕೊಂಡಿದ್ದರು. ಆದರೆ ಆ ಚಿತ್ರ ಹೀನಾಯವಾಗಿ ಸೋಲನುಭವಿಸಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ರಾಜ್‌ಪಾಲ್ ಸಿಲುಕಿದರು. ಒಟ್ಟು ಅವರು 9 ಕೋಟಿ ರೂ. ಹಣವನ್ನು ವಾಪಸ್ ನೀಡಬೇಕಿದೆ. ಆದರೆ ಹಣವನ್ನು ವಾಪಸ್ ನೀಡಲು ಸಾಧ್ಯವಾಗಲಿಲ್ಲ ಮತ್ತು ಚೆಕ್‌ಬೌನ್ಸ್ ಆಗಿದೆ. ಇದರಿಂದಾಗಿ ಅವರೀಗ ಜೈಲಿನಲ್ಲಿ ಇದ್ದಾರೆ. ಬಾಲಿವುಡ್‌ನ ಹಲವರು ರಾಜ್ ಪಾಲ್ ಅವರ ಸಹಾಯಕ್ಕೆ ಮುಂದಾಗಿದ್ದಾರೆ.