ʻರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾವನ್ನು ವೀಕ್ಷಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಚಿತ್ರತಂಡದ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸ್ವತಃ ತಾವೇ ಟಿಕೆಟ್ ಬುಕ್ ಮಾಡಿ, ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ವೀಕ್ಷಿಸಿದ ಶಿವಣ್ಣ, ಸಿನಿಮಾ ತುಂಬಾ ರಿಚ್ ಆಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಕ್ಸಿಕ್ ಒಂದು ಅತ್ಯುತ್ತಮ ಪ್ರಯತ್ನ
ಚಿತ್ರ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್, "ಟಾಕ್ಸಿಕ್ ಒಂದು ಅತ್ಯುತ್ತಮ ಪ್ರಯತ್ನ. ಇಡೀ ಸಿನಿಮಾದ ಮೇಕಿಂಗ್‌ನಲ್ಲಿ ಆ ಭವ್ಯತೆ ಮತ್ತು ಶ್ರೀಮಂತಿಕೆ ಎದ್ದು ಕಾಣುತ್ತದೆ. ಸೆಕೆಂಡ್ ಹಾಫ್‌ನಲ್ಲಿ ಬರುವ ಸಸ್ಪೆನ್ಸ್ ಹಾಗೂ ಕೊನೆಯ 20 ನಿಮಿಷಗಳನ್ನು ನಿರ್ದೇಶಕರು ತೆರೆಮೇಲೆ ಅದ್ಭುತವಾಗಿ ತಂದಿದ್ದಾರೆ. ಯಶ್ ಅವರನ್ನು ತೆರೆಮೇಲೆ ನೋಡಿ ಬಹಳ ದಿನಗಳಾಗಿತ್ತು, ಅವರ ಬಾಡಿ ಲ್ಯಾಂಗ್ವೇಜ್ ಮತ್ತು ಸ್ಟೈಲ್ ಎಲ್ಲವೂ ತುಂಬಾ ಮುದ್ದಾಗಿ, ಆಕರ್ಷಕವಾಗಿ ಕಾಣುತ್ತದೆ. ಮುಂಬೈ ಹಾಗೂ ಹೈದರಾಬಾದ್ ಪ್ರವಾಸಗಳಿದ್ದ ಕಾರಣ ಮೊದಲ ದಿನ ನೋಡಲು ಸಾಧ್ಯವಾಗಲಿಲ್ಲ, ಇಲ್ಲದಿದ್ದರೆ ಮೊದಲ ದಿನವೇ ನೋಡುತ್ತಿದ್ದೆ" ಎಂದರು.
ಯಶ್ ನಮ್ಮ ಹುಡುಗ
ಮುಂದುವರಿದು ಯಶ್ ಮೇಲಿನ ತಮ್ಮ ಒಡನಾಟವನ್ನು ಹಂಚಿಕೊಂಡ ಅವರು, "ಯಶ್ ಅಂದ್ರೆ ನಮ್ಮ ಹುಡುಗ. ನಮ್ಮ ಹುಡುಗನ ಸಿನಿಮಾ ಅಂತಲೇ ನಾನು ಬಂದಿದ್ದು. ಯಶ್ ಏನಾದರೂ ದೊಡ್ಡ ಸಾಧನೆ ಮಾಡಿದರೆ ನನ್ನ ಸ್ವಂತ ತಮ್ಮನೇ ಆ ಸಾಧನೆ ಮಾಡಿದಷ್ಟು ನನಗೆ ಹೆಮ್ಮೆಯಾಗುತ್ತದೆ. ಯಶ್ ಕೇವಲ ಫೇಮಸ್ ಆಗಿದ್ದಾನೆ ಎಂಬ ಕಾರಣಕ್ಕಲ್ಲ, ಆತನ ಪ್ರತಿಯೊಂದು ಹೊಸ ಪ್ರಯತ್ನಕ್ಕೂ ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ. ನಾನು ಒಟಿಟಿಯಲ್ಲಿ ಸಿನಿಮಾ ನೋಡಲು ಕಾಯುವವನಲ್ಲ; ನಾನೇ ಟಿಕೆಟ್ ಬುಕ್ ಮಾಡಿ, ಪಾಪ್‌ಕಾರ್ನ್ ತಿನ್ನುತ್ತಾ ಪ್ರೇಕ್ಷಕನಾಗಿ ಸಿನಿಮಾ ನೋಡುವ ಮಜಾವೇ ಬೇರೆ. ನಟನಾಗಿ ಅಲ್ಲದೆ ಸಾಮಾನ್ಯ ಪ್ರೇಕ್ಷಕನಾಗಿ ನೋಡಿದಾಗ ಮಾತ್ರ ಚಿತ್ರದ ನಿಜವಾದ ಭಾವನೆ ಅರ್ಥವಾಗುತ್ತದೆ" ಎಂದು ಶಿವರಾಜ್‌ಕುಮಾರ್ ಹೇಳಿದರು.
ಗೌರವಕ್ಕೆ ನಾವೂ ಅಷ್ಟೇ ಗೌರವ ಕೊಡಬೇಕು
ಇದೇ ವೇಳೆ ಚಿತ್ರರಂಗವನ್ನು ಬಾಧಿಸುತ್ತಿರುವ ಪೈರಸಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಿವಣ್ಣ, "ಪೈರಸಿ ತಡೆಯುವುದು ಹೇಗೆ ಎಂಬುದು ಇನ್ನೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಇಂತಹ ಮಹತ್ವದ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲೇ ನೋಡಬೇಕು" ಎಂದು ಮನವಿ ಮಾಡಿದರು. ಜೊತೆಗೆ, ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ ಅವರು, "ಶಿವಣ್ಣ ಎಲ್ಲ ಕಾರ್ಯಕ್ರಮಗಳಿಗೂ ಬರ್ತಾನೆ ಅಂತ ಕೆಲವರು ಟ್ರೋಲ್ ಮಾಡುತ್ತಾರೆ, ಆದರೆ ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ನಮ್ಮ ಚಿತ್ರರಂಗ ಮತ್ತು ನಮ್ಮವರು ಮುಖ್ಯ. ಯಶ್ ನಮ್ಮ ಮೇಲೆ ಇಟ್ಟಿರುವ ಗೌರವಕ್ಕೆ ನಾವೂ ಅಷ್ಟೇ ಗೌರವ ಕೊಡಬೇಕು, ಅದೇ ನಿಜವಾದ ಮನುಷ್ಯತ್ವ. ಚಿತ್ರರಂಗ ಬೆಳೆಯಬೇಕಷ್ಟೇ, ಅದು ಯಾರಿಂದ ಬೆಳೆಯುತ್ತದೆ ಎಂಬುದು ಮುಖ್ಯವಲ್ಲ" ಎಂದು ಸ್ಪಷ್ಟಪಡಿಸಿದರು.
Yash Toxic: ‘ಲಗಾನ್’ ಸಿನಿಮಾ ಉದಾಹರಣೆ ನೀಡಿ ʼಟಾಕ್ಸಿಕ್ʼ ಬಗ್ಗೆ ಅಜನೀಶ್ ಲೋಕನಾಥ್ ಏನಂದ್ರು?
ಹೊಸಬರ ಸಿನಿಮಾಗಳಿಗೂ ಬೆಂಬಲ ನೀಡಬೇಕು
ಕನ್ನಡ ಚಿತ್ರರಂಗದ ಬೆಳವಣಿಗೆಯ ಕುರಿತು ಮಾತನಾಡಿದ ಶಿವರಾಜ್‌ಕುಮಾರ್, ಪ್ರೇಕ್ಷಕರು ಕೇವಲ ಸ್ಟಾರ್ ನಟರ ಚಿತ್ರಗಳನ್ನಷ್ಟೇ ಅಲ್ಲದೆ, ಹೊಸಬರ ಚಿತ್ರಗಳನ್ನೂ ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು. "ಇತ್ತೀಚೆಗೆ 'ಎ ಡೇಟ್' ಎಂಬ ಸಿನಿಮಾದ ಪೋಸ್ಟರ್ ನೋಡಿದೆ, ತುಂಬಾ ಆಸಕ್ತಿದಾಯಕವಾಗಿ ಕಂಡಿತು. ಪ್ರೇಕ್ಷಕರು ಇಂತಹ ಹೊಸಬರ ಸಿನಿಮಾಗಳಿಗೂ ಮುಕ್ತ ಮನಸ್ಸಿನಿಂದ ಬೆಂಬಲ ನೀಡಿದಾಗ ಮಾತ್ರ ಹೊಸ ನಿರ್ದೇಶಕರು, ನಾಯಕ-ನಾಯಕಿಯರು ಹಾಗೂ ತಂತ್ರಜ್ಞರು ಹುಟ್ಟಿಕೊಳ್ಳಲು ಸಾಧ್ಯ. ಇಂದು ನಾವ್ಯಾರೇ ಸ್ಟಾರ್ ಆಗಿದ್ದರೂ ಅದು ನಮ್ಮ ಅಭಿಮಾನಿ ದೇವರುಗಳಿಂದ ಮಾತ್ರ. ಆ ಅಭಿಮಾನಿಗಳ ಪ್ರೀತಿಯನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕು" ಎಂದು ಕಿವಿಮಾತು ಹೇಳಿದರು.