ಸಿನಿದುನಿಯಾದಲ್ಲಿ ಸೆಲೆಬ್ರಿಟಿಗಳ ದಾಂಪತ್ಯ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಮಾತಿದೆ. ಆದರೆ, ಮಾತಿಗೆ ಅಪವಾದ ಎಂಬಂತೆ ಬಾಳುತ್ತಿರುವುದು ಸೂರ್ಯ ಮತ್ತು ಜ್ಯೋತಿಕಾ. ದಕ್ಷಿಣ ಭಾರತ ಸಿನಿರಂಗದಲ್ಲಿ ಆದರ್ಶ ದಂಪತಿಗಳಾಗಿ ಗಮನಸೆಳೆದಿರುವ ಈ ಸ್ಟಾರ್ ಜೋಡಿ ತಮ್ಮ ವೈವಾಹಿಕ ಜೀವನದ 20ನೇ ವರ್ಷದ ವಾರ್ಷಿಕೋತ್ಸವವನ್ನು ಅತ್ಯಂತ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಅಪರೂಪದ ಕ್ಷಣಗಳ ವಿಡಿಯೋ ವೈರಲ್
2006ರ ಸೆಪ್ಟೆಂಬರ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಎರಡು ದಶಕಗಳ ಅನ್ಯೋನ್ಯ ಬಾಂಧವ್ಯದ ನೆನಪಿನಲ್ಲಿ ವಿದೇಶದ ಚರ್ಚ್ ಒಂದರಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಪರಸ್ಪರ ಮದುವೆಯ ಪ್ರತಿಜ್ಞೆಗಳನ್ನು ನವೀಕರಿಸಿಕೊಂಡಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ಅಪರೂಪದ ಕ್ಷಣಗಳ ವಿಡಿಯೋವನ್ನು ಜ್ಯೋತಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ನೆಟ್ಟಿಗರ ಮನಗೆದ್ದು ಭಾರಿ ವೈರಲ್ ಆಗುತ್ತಿದೆ.
ಕುಟುಂಬದ ಆಪ್ತರೊಂದಿಗೆ ಸಂಭ್ರಮಾಚರಣೆ
ಈ ಸಂಭ್ರಮಾಚರಣೆಯಲ್ಲಿ ನಟಿ ಜ್ಯೋತಿಕಾ ಬಿಳಿ ಬಣ್ಣದ ಗೌನ್ ಧರಿಸಿ ದೇವಕನ್ಯೆಯಂತೆ ಕಂಗೊಳಿಸಿದರೆ, ನಟ ಸೂರ್ಯ ಬಿಳಿ ಬಣ್ಣದ ಸೂಟ್ ಹಾಗೂ ಕಪ್ಪು ಟ್ರೌಸರ್‌ನಲ್ಲಿ ಕ್ಲಾಸಿಕ್ ಲುಕ್‌ನಲ್ಲಿ ಮಿಂಚಿದ್ದಾರೆ. ಮಗ ದೇವ್ ಕೈಹಿಡಿದು ಮುಗುಳ್ನಗುತ್ತಾ ನಡೆದುಬರುತ್ತಿದ್ದ ಜ್ಯೋತಿಕಾ ಅವರನ್ನು ಕಂಡು ಸೂರ್ಯ ಭಾವುಕರಾಗಿ ಆನಂದಭಾಷ್ಪ ಸುರಿಸಿದ ಕ್ಷಣ ಪ್ರತಿಯೊಬ್ಬರ ಕಣ್ಮನ ಸೆಳೆದಿದೆ. ಈ ಆತ್ಮೀಯ ಸಂಭ್ರಮದಲ್ಲಿ ದಂಪತಿಯ ಮಕ್ಕಳಾದ ದಿಯಾ ಮತ್ತು ದೇವ್ ಜೊತೆಗೆ ಸೂರ್ಯ ಅವರ ಸಹೋದರ ಕಾರ್ತಿ ಹಾಗೂ ಆಯ್ದ ಕುಟುಂಬಸ್ಥರು ಮಾತ್ರ ಪಾಲ್ಗೊಂಡಿದ್ದರು.
ಸೂರ್ಯ ತನಗೆ ಸಿಕ್ಕ ವರ
ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ‘ದಿ ಸೀಕ್ವೆಲ್ – ನಮ್ಮ 20 ವರ್ಷಗಳ ಪ್ರೀತಿ ಮತ್ತು ಸವಾಲುಗಳ ಸಂಭ್ರಮ’ ಎಂದು ಬರೆದುಕೊಂಡಿರುವ ಜ್ಯೋತಿಕಾ, ಹೃದಯಸ್ಪರ್ಶಿ ಮಾತುಗಳ ಮೂಲಕ ತಮ್ಮ ದಾಂಪತ್ಯದ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಇದು ಕೇವಲ ಪರಿಪೂರ್ಣತೆಯ ಆಚರಣೆಯಲ್ಲ, ಬದಲಿಗೆ ಇಬ್ಬರ ನಡುವಿನ ಅಪರಿಪೂರ್ಣತೆ, ಹೊಂದಾಣಿಕೆ, ತ್ಯಾಗ ಹಾಗೂ ನಿಸ್ವಾರ್ಥ ಪ್ರೀತಿಯ ಹಬ್ಬ ಎಂದು ಹೇಳಿಕೊಂಡಿದ್ದಾರೆ. ಸಕಾರಾತ್ಮಕವಾಗಿರಲು, ಕೊರತೆಗಳನ್ನು ಪ್ರೀತಿಯಿಂದ ತುಂಬಿಕೊಳ್ಳಲು, ಮಕ್ಕಳ ಪಾಲಿಗೆ ಆದರ್ಶ ತಾಯಿಯಾಗಲು ಹಾಗೂ ಸದಾ ಜಗಳವಾಡಿ ಮತ್ತೆ ಒಂದಾಗುವ ‘ಅಪರಿಪೂರ್ಣ’ ಪತ್ನಿಯಾಗಿಯೇ ಉಳಿಯಲು ಪ್ರತಿಜ್ಞೆ ಮಾಡುವುದಾಗಿ ತಿಳಿಸಿದ್ದಾರೆ. ತನ್ನನ್ನು ತಾನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಸಂಗಾತಿಯನ್ನು ಗೌರವಿಸುವ ವ್ಯಕ್ತಿಯ ಜೊತೆ ಬದುಕುವುದು ಒಂದು ವರ ಎಂದಿರುವ ಅವರು, ಸೂರ್ಯ ಅವರ ರೂಪದಲ್ಲಿ ತಮಗೆ ಅತ್ಯುತ್ತಮ ಸ್ನೇಹಿತ, ಆಪ್ತ ರಕ್ಷಕ ಹಾಗೂ ಮಕ್ಕಳ ಉತ್ತಮ ತಂದೆ ಸಿಕ್ಕಿದ್ದಾರೆ ಎಂದು ಕೊಂಡಾಡಿದ್ದಾರೆ.
ಸೂರ್ಯ ಕುಟುಂಬದ ಕ್ಯೂಟ್ ವಿಡಿಯೋ
ಸಖತ್ ಬ್ಯುಸಿ ಇರುವ ಸೂರ್ಯ
ವೈಯಕ್ತಿಕ ಜೀವನದ ಜೊತೆಗೆ ಸೂರ್ಯ ತಮ್ಮ ಸಿನಿ ಜರ್ನಿಯಲ್ಲೂ ಸಖತ್ ಬ್ಯುಸಿ ಇದ್ದಾರೆ. ಇತ್ತೀಚೆಗಷ್ಟೇ ‘ಕರುಪ್ಪು’ ಮತ್ತು ‘ವಿಶ್ವನಾಥ್ ಅಂಡ್ ಸನ್ಸ್’ ಚಿತ್ರಗಳ ಯಶಸ್ಸಿನ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿರುವ ಅವರು, ಹಲವು ದೊಡ್ಡ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡಿದ್ದಾರೆ. ಮಲಯಾಳಂನ ಖ್ಯಾತ ನಿರ್ದೇಶಕ ಜಿತು ಮಾಧವನ್ ನಿರ್ದೇಶನದ ʻಸೀನ್ʼ ಚಿತ್ರದಲ್ಲಿ ನಜ್ರಿಯಾ ಹಾಗೂ ನಸ್ಲೇನ್ ಜೊತೆಗೆ ಸೂರ್ಯ ನಟಿಸುತ್ತಿದ್ದು, ಮತ್ತೊಂದೆಡೆ ‘ಜೈ ಭೀಮ್’ ಖ್ಯಾತಿಯ ಟಿ.ಜೆ. ಜ್ಞಾನವೇಲ್ ನಿರ್ದೇಶನದಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ ‘ಸೂರ್ಯ 48’ ಸಿನಿಮಾಕ್ಕೂ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರ ಮಧ್ಯೆಯು ಕುಟುಂಬಕ್ಕೆ ಆದ್ಯತೆ ನೀಡಿ, 20 ವರ್ಷಗಳ ದಾಂಪತ್ಯವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಿರುವ ಈ ದಂಪತಿಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.