ತಮಿಳು ನಟ ಸೂರ್ಯ ಅಭಿನಯದ ಹೊಸ ಸಿನಿಮಾ 'ವಿಶ್ವನಾಥ್ ಅಂಡ್ ಸನ್ಸ್' ಈ ಶುಕ್ರವಾರ (ಆ.14) ಬಿಡುಗಡೆಯಾಗುತ್ತಿದ್ದು, ಸದ್ಯ ಚಿತ್ರದ ಪ್ರಚಾರದಲ್ಲಿ ಸೂರ್ಯ ನಿರತರಾಗಿದ್ದಾರೆ. 'ಕರುಪ್ಪು' ಚಿತ್ರದ ಯಶಸ್ಸಿನ ನಂತರ ಬರುತ್ತಿರುವ 'ವಿಶ್ವನಾಥ್ ಅಂಡ್ ಸನ್ಸ್' ಸಿನಿಮಾವು ಫ್ಯಾಮಿಲಿ ಡ್ರಾಮಾ ಕಥಾಹಂದರವನ್ನು ಹೊಂದಿದ್ದು, ವೆಂಕಿ ಅಟ್ಲೂರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸೂರ್ಯ ಅವರೊಂದಿಗೆ ಮಮಿತಾ ಬೈಜು, ರವೀನಾ ಟಂಡನ್ ಮತ್ತು ರಾಧಿಕಾ ಶರತ್‌ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪ್ರಚಾರದ ವೇಳೆ ಒಂದಷ್ಟು ಆಸಕ್ತಿಕರ ವಿಚಾರಗಳನ್ನು ಸೂರ್ಯ ಹಂಚಿಕೊಂಡಿದ್ದಾರೆ.
ಸೂರ್ಯಗೆ ನಾಚಿಕೆ ಸ್ವಭಾವವಿತ್ತು
'ವಿಶ್ವನಾಥ್ ಅಂಡ್ ಸನ್ಸ್' ಸಿನಿಮಾದಲ್ಲಿ ನಟಿಸಿರುವ ರಾಧಿಕಾ ಶರತ್‌ಕುಮಾರ್ ಅವರು, "ದಶಕಗಳ ಹಿಂದೆ ಮೊದಲ ಬಾರಿಗೆ ಸೂರ್ಯ ಅವರನ್ನು ಭೇಟಿಯಾದಾಗ, ಸೆಟ್‌ನಲ್ಲಿ ಅವರು ತುಂಬಾ ನಾಚಿಕೆ ಸ್ವಭಾವದವರಾಗಿದ್ದರು. ಆದರೆ, ಕೆಲವು ವರ್ಷಗಳ ನಂತರ 'ಕಾಖ ಕಾಖ' ಸಿನಿಮಾದಲ್ಲಿ ಅವರ ರೂಪಾಂತರವನ್ನು ಕಂಡು ನಾನು ದಿಗ್ಭ್ರಮೆಗೊಂಡಿದ್ದೆ. ಆ ಸಿನಿಮಾದ ನಂತರ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ" ಎಂದು ಹೊಗಳಿದರು.
ರಾಧಿಕಾ ಮಾತಿಗೆ ಪ್ರತಿಕ್ರಿಯಿಸಿದ ಸೂರ್ಯ, "ನಾನು ಎಂದಿಗೂ ನಟನಾಗುತ್ತೇನೆ ಎಂದುಕೊಂಡಿರಲಿಲ್ಲ. ನನ್ನ ಸಹೋದರ ಕಾರ್ತಿಗೆ ಯಾವಾಗಲೂ ಸಿನಿಮಾರಂಗಕ್ಕೆ ಬರಬೇಕು ಎಂಬ ಆಸೆಯಿತ್ತು. ಆದರೆ, ನಾನು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೇನೆ ಎಂಬುದು ನನಗೆ ಗೊತ್ತಾಗಿದ್ದೇ ನಟಿಸುವ ಐದು ದಿನಗಳ ಮುಂಚೆ! ನನಗೆ ನಟನೆಯ ಯಾವುದೇ ತರಬೇತಿ ಇರಲಿಲ್ಲ. ಪ್ರತಿಯೊಂದನ್ನೂ ಕ್ಯಾಮೆರಾ ಮುಂಭಾಗದಲ್ಲೇ ಕಲಿತೆ. ಕೊನೆಗೆ ಅದೇ ನನ್ನ ಜವಾಬ್ದಾರಿಯಾಯಿತು. ಆ ಸಮಯದಲ್ಲಿ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳಿದ್ದವು. ಹಾಗಾಗಿ ದುಡ್ಡಿಗಾಗಿ ನಾನು ಸಿನಿಮಾಗಳಲ್ಲಿ ನಟಿಸಲೇಬೇಕಾದ ಅನಿವಾರ್ಯತೆ ಇತ್ತು" ಎಂದು ಹೇಳಿದರು.
ಜನರು ನನಗೆ ನಿರಂತರವಾಗಿ ಪ್ರೀತಿ ನೀಡಿದರು
"ಆ ಸಮಯದಲ್ಲಿ ಹಣ ಸಂಪಾದಿಸಿ ಅದನ್ನು ಅಮ್ಮನಿಗೆ ನೀಡಬೇಕು ಎಂಬುದಷ್ಟೇ ನನ್ನ ಗುರಿಯಾಗಿತ್ತು. ಆದರೆ, ಪರದೆಯ ಮೇಲೆ ನಾನು ಎಡವಿದಾಗ ಮತ್ತು ತಪ್ಪುಗಳನ್ನು ಮಾಡಿದಾಗಲೂ ಜನರು ನನಗೆ ನಿರಂತರವಾಗಿ ಪ್ರೀತಿ ನೀಡಿದರು. ಅದೇ ನನಗೆ ನಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡಿತು" ಎಂದರು.
ನನ್ನ ಮಗಳಿಗೆ ಹೆಚ್ಚಿನ ಸಮಯ ನೀಡಲು ಆಗಲಿಲ್ಲ
'ವಿಶ್ವನಾಥ್ ಅಂಡ್ ಸನ್ಸ್' ಸಿನಿಮಾದಲ್ಲಿ ಸೂರ್ಯ ಮಗುವಿನೊಂದಿಗೆ ಕಾಣಿಸಿಕೊಂಡಿದ್ದಾರೆ. ನಿಜಜೀವನದಲ್ಲಿ ತಮ್ಮ ಮಕ್ಕಳೊಂದಿಗೆ ತಂದೆಯಾಗಿ ಕಳೆದ ಕ್ಷಣಗಳ ಬಗ್ಗೆ ಮಾತನಾಡಿದ ಅವರು, "ವಿಶೇಷವಾಗಿ ಮಗಳು ದಿಯಾ ಚಿಕ್ಕವಳಿದ್ದಾಗ, ಕೆಲಸ ಮತ್ತು ಪ್ರಯಾಣದ ಒತ್ತಡದಿಂದಾಗಿ ಮೊದಲ ಕೆಲವು ವರ್ಷಗಳ ಕಾಲ ಆಕೆಯ ಬಾಲ್ಯವನ್ನು ನಾನು ತುಂಬಾ ಮಿಸ್ ಮಾಡಿಕೊಂಡೆ. ಮಗ ದೇವ್ ಹುಟ್ಟಿದಾಗ ನನ್ನ ತಪ್ಪಿನ ಅರಿವಾಗಿ, ಅವನ ಬಾಲ್ಯದ ಭಾಗವಾಗಲು ಪ್ರಯತ್ನಿಸಿದೆ" ಎಂದು ನೆನಪಿಸಿಕೊಂಡರು.
Actor Suriya: ಸೂರ್ಯ-ತ್ರಿಶಾ ಕೃಷ್ಣನ್ 'ಕರುಪ್ಪು' ಸಿನಿಮಾ ಬಗ್ಗೆ ಬಂದೇ ಬಿಡ್ತು ಬಿಗ್ ಅಪ್‌ಡೇಟ್!
"ಸಾಮಾನ್ಯವಾಗಿ ಹೆಣ್ಣುಮಗು ಹುಟ್ಟಿದರೆ ಮನೆಗೆ 'ಲಕ್ಷ್ಮಿ ಬಂದಳು' ಎಂದು ಹೇಳುತ್ತೇವೆ. ದಿಯಾ ಹುಟ್ಟಿದಾಗ ನಾವು ನಮ್ಮ ಮೊದಲ ಮನೆಯನ್ನು ಖರೀದಿಸಿದೆವು. ನಾವೆಲ್ಲರೂ ತುಂಬಾ ಸಂತೋಷಪಟ್ಟೆವು. ಹೊಸ ಮನೆಗೆ ಕಾಲಿಡುವ ಮುನ್ನ, ಮೊದಲು ದಿಯಾಳ ಪಾದಗಳನ್ನು ಮನೆಯೊಳಗೆ ಇರಿಸಿದೆವು. 'ವಿಶ್ವನಾಥ್ ಅಂಡ್ ಸನ್ಸ್' ಸಿನಿಮಾದಲ್ಲಿ ಚಾರ್ವಿಕ್ ಎಂಬ ಮಗು ಮನೆಗೆ ಹೆಜ್ಜೆ ಇಡುವಾಗಲೂ ಅದೇ ಸನ್ನಿವೇಶವನ್ನು ಏಕೆ ಬಳಸಬಾರದು ಎಂದು ನನಗೆ ಅನಿಸಿತು. ಹಾಗಾಗಿ ಆ ದೃಶ್ಯವನ್ನು ನಾವು ಮತ್ತೆ ಮರುಸೃಷ್ಟಿ ಮಾಡಿದ್ದೇವೆ" ಎಂದು ಸೂರ್ಯ ಹೇಳಿದರು.