ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶಿವಣ್ಣನ ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರತಂಡಕ್ಕೆ ಎಂಟ್ರಿ ಕೊಟ್ಟ ವಸಿಷ್ಠ ಸಿಂಹ; ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್!

Original Monster Movie: ಶಿವಣ್ಣನ ‘ಒರಿಜಿನಲ್ ಮಾನ್‌ಸ್ಟರ್’ ತಂಡಕ್ಕೆ ನಟ ವಸಿಷ್ಠ ಸಿಂಹ ಅಧಿಕೃತವಾಗಿ ಸೇರ್ಪಡೆಗೊಂಡಿದ್ದು, ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ಮಾಹಿತಿ ಹೊರಬಿದ್ದಿದೆ. ಆರ್. ಚಂದ್ರು ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಪ್ಯಾನ್-ಇಂಡಿಯಾ ಚಿತ್ರದಲ್ಲಿ ಶಿವಣ್ಣ ಮತ್ತು ವಸಿಷ್ಠ ಮತ್ತೆ ಎದುರಾಗಲಿದ್ದಾರೆ. ಅಕ್ಟೋಬರ್ 25ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ.

‘ಮಫ್ತಿ’, ‘ಟಗರು’ ಹಾಗೂ ‘ಕವಚ’ ಚಿತ್ರಗಳಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರೊಂದಿಗೆ ತೆರೆಹಂಚಿಕೊಂಡು ಪ್ರೇಕ್ಷಕರ ಮನಗೆದ್ದಿದ್ದ ನಟ ವಸಿಷ್ಠ ಸಿಂಹ, ಇದೀಗ ಮತ್ತೊಮ್ಮೆ ಶಿವಣ್ಣನ ಜತೆ ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ನಿರ್ದೇಶಕ ಆರ್. ಚಂದ್ರು ಆ್ಯಕ್ಷನ್ ಕಟ್ ಹೇಳುತ್ತಿರುವ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಭರ್ಜರಿಯಾಗಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ‘ಒರಿಜಿನಲ್ ಮಾನ್‌ಸ್ಟರ್’ (OM) ಸಿನಿಮಾದಲ್ಲಿ ವಸಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹುಟ್ಟುಹಬ್ಬದ ಉಡುಗೊರೆಯಾಗಿ ಪೋಸ್ಟರ್‌ ರಿಲೀಸ್

ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ (ಅ.19) ಸಂಭ್ರಮದ ಸಂದರ್ಭದಲ್ಲೇ ಚಿತ್ರತಂಡ ಈ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ವಸಿಷ್ಠ ಸಿಂಹ ಅವರ ವಿಶೇಷ ಪೋಸ್ಟರ್‌ವೊಂದನ್ನು ರಿಲೀಸ್ ಮಾಡುವ ಮೂಲಕ ಅವರಿಗೆ ಹುಟ್ಟುಹಬ್ಬದ ಆತ್ಮೀಯ ಶುಭಾಶಯಗಳನ್ನು ‘ಆರ್ ಸಿ ಸ್ಟುಡಿಯೋಸ್’ ತಿಳಿಸಿದೆ. ತಮ್ಮ ಗಂಭೀರ ಅಭಿನಯ ಹಾಗೂ ಕಂಚಿನ ಕಂಠದ ಮೂಲಕವೇ ಅಭಿಮಾನಿ ಬಳಗ ಹೊಂದಿರುವ ವಸಿಷ್ಠ ಸಿಂಹ ಅವರ ಪಾತ್ರ ಈ ಚಿತ್ರದಲ್ಲಿ ಹೇಗಿರಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಈಗಲೇ ಗರಿಗೆದರಿದೆ.

Shivarajkumar: ‘ಜೈಲರ್ 2’ ಟ್ರೇಲರ್ ನೋಡಿ ರಜನಿಕಾಂತ್‌ ಫ್ಯಾನ್ಸ್‌ ದಿಲ್‌ಖುಷ್‌; ಮತ್ತೆ ಅಖಾಡಕ್ಕಿಳಿದ ಟೈಗರ್ ಮುತ್ತುವೇಲ್ ಪಾಂಡಿಯನ್!

ಅ.25ರಿಂದ ಎಡರನೇ ಹಂತದ ಶೂಟಿಂಗ್‌

ಈ ಚಿತ್ರದ ಚಿತ್ರೀಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, ‘ಒರಿಜಿನಲ್ ಮಾನ್‌ಸ್ಟರ್’ ಸಿನಿಮಾದ ಮೊದಲ ಹಂತದ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದೆ. ಇದೇ ಅಕ್ಟೋಬರ್ 25ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದ್ದು, ಶಿವರಾಜಕುಮಾರ್, ತೆಲುಗಿನ ಖ್ಯಾತ ನಟ ಸುನೀಲ್ ಹಾಗೂ ವಸಿಷ್ಠ ಸಿಂಹ ಈ ಶೆಡ್ಯೂಲ್‌ನಲ್ಲಿ ಭಾಗವಹಿಸಲಿದ್ದಾರೆ.

ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದು ಭರ್ಜರಿ ಆ್ಯಕ್ಷನ್ ಹಾಗೂ ರೋಮಾಂಚನಕಾರಿ ಕಥಾಹಂದರವನ್ನು ಹೊಂದಿರಲಿದ್ದು, ಚಿತ್ರೀಕರಣದ ಹಂತದಲ್ಲೇ ಈ ಸಿನಿಮಾ ಭಾರಿ ಸದ್ದು ಮಾಡುತ್ತಿದೆ.

ವಸಿಷ್ಠ ಸಿಂಹ ಏನಂದ್ರು?

ಈ ಮಹತ್ವದ ಪ್ರಾಜೆಕ್ಟ್ ಕುರಿತು ಸಂತಸ ಹಂಚಿಕೊಂಡಿರುವ ನಟ ವಸಿಷ್ಠ ಸಿಂಹ, "ಆರ್. ಚಂದ್ರು ಅವರ ನಿರ್ದೇಶನದಲ್ಲಿ ಅಭಿನಯಿಸಬೇಕೆಂದು ಬಹಳ ದಿನಗಳಿಂದ ಆಸೆಯಿತ್ತು, ಈಗ ಅದು ಈಡೇರಿದೆ. ಅವರೊಂದಿಗೆ ಕೆಲಸ ಮಾಡುತ್ತಿರುವುದು ಹಾಗೂ ಪ್ರೀತಿಯ ಶಿವಣ್ಣ ಅವರ ಜೊತೆಗೆ ಮತ್ತೊಮ್ಮೆ ನಟಿಸುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ" ಎಂದು ತಿಳಿಸಿದ್ದಾರೆ.

ಅಜನೀಶ್ ಸಂಗೀತ ಸಂಯೋಜನೆ

ಆನಂದ್ ಪಂಡಿತ್ ಅರ್ಪಿಸುತ್ತಿರುವ ಈ ಸಿನಿಮಾವನ್ನು ಆರ್ ಸಿ ಸ್ಟುಡಿಯೋಸ್ ಬ್ಯಾನರ್‌ ಅಡಿಯಲ್ಲಿ ಯಮುನಾ ಚಂದ್ರು ಅವರು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ‘ಒರಿಜಿನಲ್ ಮಾನ್‌ಸ್ಟರ್’ (OM) ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿರಲಿದೆ.

ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳ ಘಟಾನುಘಟಿ ತಾರಾಗಣವಿರಲಿದ್ದು, ಉಳಿದ ಕಲಾವಿದರ ವಿವರಗಳನ್ನು ಹಂತ-ಹಂತವಾಗಿ ರಿವೀಲ್ ಮಾಡುವುದಾಗಿ ನಿರ್ದೇಶಕ ಆರ್. ಚಂದ್ರು ತಿಳಿಸಿದ್ದಾರೆ.