ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ: ಪಾರ್ಟ್ 1’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 5ರಂದು ವಿಶ್ವಾದ್ಯಂತ ಈ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದ್ದು, ಆಗಲೇ ಮುಂಗಡ ಬುಕಿಂಗ್ ಕೂಡ ಶುರುವಾಗಿದೆ. ಈ ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ಸದ್ಯ ಹೈದರಾಬಾದ್ನಲ್ಲಿ ನಡೆದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಈ ಚಿತ್ರದಲ್ಲಿ ರಾವಣ ಪಾತ್ರ ಮಾಡಿರುವ ಹಾಗೂ ಸಹ ನಿರ್ಮಾಪಕರಾಗಿರುವ ಯಶ್ ಪ್ರೇಕ್ಷಕರಲ್ಲಿ ಮಾಡಿರುವ ವಿಶೇಷ ಮನವಿಯೊಂದನ್ನು ಸದ್ದು ಮಾಡುತ್ತಿದೆ.
ಟಾಕ್ಸಿಕ್ ಮೆಚ್ಚಿದವರಿಗೂ, ಮೆಚ್ಚದವರಿಗೂ ನನ್ನ ಧನ್ಯವಾದಗಳು
"ವಿಎಫ್ಎಕ್ಸ್ನಂತಹ ಸಣ್ಣಪುಟ್ಟ ತಾಂತ್ರಿಕ ಲೋಪದೋಷಗಳನ್ನು ಪಕ್ಕಕ್ಕಿಟ್ಟು, ಸಿನಿಮಾ ಕಟ್ಟಿಕೊಡಲು ಪಟ್ಟಿರುವ ಶ್ರಮವನ್ನು ಗುರುತಿಸಿ ಓಪನ್ ಮೈಂಡ್ನಿಂದ ವೀಕ್ಷಿಸಿ" ಎಂದು ಯಶ್ ಮನವಿ ಮಾಡಿಕೊಂಡಿದ್ದಾರೆ. "ಕೇವಲ ಎರಡು ತಿಂಗಳ ಹಿಂದಷ್ಟೇ ‘ಟಾಕ್ಸಿಕ್’ ಸಿನಿಮಾದ ಸಂದರ್ಭದಲ್ಲಿ ನಿಮ್ಮನ್ನು ಭೇಟಿಯಾಗಿದ್ದೆ, ಈಗ ಅಷ್ಟು ಬೇಗ ಮತ್ತೊಮ್ಮೆ ನಿಮ್ಮ ಮುಂದೆ ಬರುತ್ತೇನೆ ಎಂದು ಭಾವಿಸಿರಲಿಲ್ಲ. ನಾನು ಮಾಡಿದ ಕೆಲಸಕ್ಕೆ ನಿಮ್ಮ ಪ್ರೀತಿ ಕೋರಿದ್ದೆ. ಅನೇಕರು ಚಿತ್ರವನ್ನು ಇಷ್ಟಪಟ್ಟರೆ, ಇನ್ನು ಕೆಲವರಿಗೆ ನಿರಾಸೆಯಾಯಿತು. ಮೆಚ್ಚಿದವರಿಗೂ ಹಾಗೂ ಮೆಚ್ಚದವರಿಗೂ ನನ್ನ ಧನ್ಯವಾದಗಳು. ನೀವು ತೋರಿದ ಅಭಿಮಾನವೇ ನಮಗೆ ಮುಖ್ಯ ಮತ್ತು ಅದೇ ನಮ್ಮನ್ನು ಮುನ್ನಡೆಸುವ ದೊಡ್ಡ ಶಕ್ತಿ. ನಿಮ್ಮನ್ನು ರಂಜಿಸುವುದಕ್ಕಾಗಿಯೇ ನಾವೆಲ್ಲರೂ ನಿರಂತರವಾಗಿ ಎಫರ್ಟ್ ಹಾಕುತ್ತಿದ್ದೇವೆ" ಎಂದು ಯಶ್ ಹೇಳಿದ್ದಾರೆ.
ರಾಜಮೌಳಿಗೆ ಯಶ್ ಹೊಗಳಿಕೆ
ದಕ್ಷಿಣ ಹಾಗೂ ಉತ್ತರ ಭಾರತೀಯ ಚಿತ್ರರಂಗದ ಬಾಂಧವ್ಯದ ಕುರಿತು ಮಾತನಾಡಿದ ಯಶ್, "ರಾಜಮೌಳಿ, ಪ್ರಭಾಸ್, ರಾಮ್ ಚರಣ್ ಹಾಗೂ ಜ್ಯೂ. ಎನ್ಟಿಆರ್ ಅವರಂತಹ ದಿಗ್ಗಜರು ತೆಲುಗು ಸಿನಿರಂಗದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಇದೇ ವೇಳೆ ಹಿಂದಿ ಚಿತ್ರರಂಗ ಕೂಡ ದಕ್ಷಿಣದಿಂದ ಅದೇ ಪ್ರೀತಿ ಹಾಗೂ ಗೌರವವನ್ನು ಬಯಸುತ್ತಿದ್ದು, ಪರಸ್ಪರ ಗೌರವ ಹಂಚಿಕೊಳ್ಳುವುದೇ ಮುಖ್ಯ. ಒಳ್ಳೆಯ ಸಿನಿಮಾ ಮಾಡಬೇಕೆಂದರೆ ಅಪಾರ ಪ್ಯಾಶನ್ ಬೇಕು. ತೆಲುಗು ಪ್ರೇಕ್ಷಕರಿಗೆ ತಕ್ಕಂತೆ ಸಂಭಾಷಣೆಗಳನ್ನು ರೂಪಿಸುವಲ್ಲಿ ನಮ್ಮ ವಿತರಕ ದಿಲ್ ರಾಜು ಅವರು ಹತ್ತಿರ ನಿಂತು ಮುತುವರ್ಜಿ ವಹಿಸಿದ್ದಾರೆ" ಎಂದು ಯಶ್ ಹೇಳಿದ್ದಾರೆ.
Ramayana: ರಾಮಾಯಣ ಮೇಕಿಂಗ್ ವಿಡಿಯೋ ವೈರಲ್ ; ಬಯಲಾಯ್ತು ತೆರೆಮರೆಯ ಸತ್ಯ
ರಣಬೀರ್ ಅಹಂ ಇಲ್ಲದ ಅದ್ಭುತ ವ್ಯಕ್ತಿ
ನಿರ್ದೇಶಕ ನಿತೀಶ್ ತಿವಾರಿ ಅವರ ಕಾರ್ಯವೈಖರಿಯನ್ನು ಹೊಗಳಿದ ಯಶ್, "ನಿತೇಶ್ ಕೆಲಸದ ಮೂಲಕವೇ ಮಾತನಾಡುವ ಅಪ್ರತಿಮ ಟೀಮ್ ಪ್ಲೇಯರ್. ಅವರೊಂದಿಗಿನ ಜರ್ನಿ ಅತ್ಯಂತ ಸುಲಭವಾಗಿತ್ತು. ಶೂರ್ಪನಖಿಯಂತಹ ಸವಾಲಿನ ಪಾತ್ರವನ್ನು ರಕುಲ್ ಪ್ರೀತ್ ಸಿಂಗ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಜೀವ ತುಂಬಿದ್ದಾರೆ. ಇನ್ನು ರಾಮನ ಪಾತ್ರಧಾರಿ ರಣಬೀರ್ ಕಪೂರ್ ಅಹಂ ಇಲ್ಲದ ಅದ್ಭುತ ವ್ಯಕ್ತಿಯಾಗಿದ್ದು, ಅವರ ಅಭಿನಯ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮಿತ್ನ ನಾವು ಕಳೆದುಕೊಳ್ಳಬಾರದು
"ನಿರ್ಮಾಪಕ ನಮಿತ್ ಈ ಪ್ರಾಜೆಕ್ಟ್ ಬಗ್ಗೆ ಹೇಳಿದಾಗಲೇ ನಾನು ರಾವಣನ ಪಾತ್ರ ಮಾಡುವುದರ ಜೊತೆಗೆ ಚಿತ್ರ ನಿರ್ಮಾಣದಲ್ಲೂ ಕೈಜೋಡಿಸಲು ನಿರ್ಧರಿಸಿದೆ. ಸೋನಿ ಸಂಸ್ಥೆಯು ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದೆ ಎಂದರೆ ಅದರ ಹಿಂದೆ ನಮಿತ್ ಅವರ ಅಪಾರ ಪರಿಶ್ರಮವಿದೆ. ಆದ್ದರಿಂದ ದಯವಿಟ್ಟು ವಿಎಫ್ಎಕ್ಸ್ನಂತಹ ಸಣ್ಣಪುಟ್ಟ ತಪ್ಪುಗಳನ್ನು ಹುಡುಕಲು ಹೋಗಬೇಡಿ. ಇಂತಹ ಬೃಹತ್ ಪ್ರಯತ್ನಗಳು ಹಾಗೂ ನಮಿತ್ ಅವರಂತಹ ಆಸಕ್ತಿ ಹೊಂದಿರುವ ನಿರ್ಮಾಪಕರನ್ನು ಕಳೆದುಕೊಂಡರೆ ನಮ್ಮ ಚಿತ್ರರಂಗ ಮತ್ತೆ ಹಲವು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ನಿಮ್ಮ ವಿಮರ್ಶೆಗಳನ್ನು ಸ್ವೀಕರಿಸಿ ಇನ್ನಷ್ಟು ಉತ್ತಮ ಚಿತ್ರ ನೀಡಲು ನಾವು ಸದಾ ಸಿದ್ಧರಿದ್ದೇವೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷಿಕರೆಲ್ಲರೂ ಒಗ್ಗೂಡಿ ಭಾರತೀಯ ಸಿನಿಮಾವನ್ನು ವಿಶ್ವಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯೋಣ" ಎಂದು ಯಶ್ ಕರೆ ಕೊಟ್ಟಿದ್ದಾರೆ.