ಕನ್ನಡ ಚಿತ್ರರಂಗದಲ್ಲಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾಗಳಿಗೆ ಯಾವತ್ತೂ ಬೇಡಿಕೆಯಿದೆ. ಆದರಲ್ಲೂ ಸೈಬರ್ ಕ್ರೈಂ ಕುರಿತ ಸಿನಿಮಾಗಳಿಗೆ ದೊಡ್ಡ ವೀಕ್ಷಕ ವರ್ಗವೇ ಇದೆ. ಆದರೆ ಆ ಕುರಿತ ಕಥಾಹಂದರವುಳ್ಳ ಚಿತ್ರಗಳು ಬಹಳ ವಿರಳ. ಆ ಕೊರತೆಯನ್ನು ನೀಗಿಸಲು, ಸೈಬರ್ ಜಗತ್ತಿನ ಕರಾಳ ಮುಖವನ್ನು ತೆರೆದಿಡಲು ಸಜ್ಜಾಗಿದೆ ಯುವ ನಿರ್ದೇಶಕ ಹರಿಪ್ರಕಾಶ್ ಅವರ ‘ಗೀಕ್’ (GEEK) ಸಿನಿಮಾ. ಟೈಟಲ್‌ನಿಂದಲೇ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರದ ಟೀಸರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ಸಾಥ್ ನೀಡಿದ 50ಕ್ಕೂ ಅಧಿಕ ಸೆಲೆಬ್ರಿಟಿಗಳು
ಗೀಕ್ ಸಿನಿಮಾದ ಗುಣಮಟ್ಟ ಮತ್ತು ವಿಭಿನ್ನ ಕಂಟೆಂಟ್ ಮೆಚ್ಚಿದ ಸ್ಯಾಂಡಲ್‌ವುಡ್‌ನ 50ಕ್ಕೂ ಹೆಚ್ಚು ಜನಪ್ರಿಯ ಸೆಲೆಬ್ರಿಟಿಗಳು ಈ ಚಿತ್ರದ ಟೀಸರ್ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳ ಮೂಲಕ ಡಿಜಿಟಲ್ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಡಿ ಬೀಟ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಟೀಸರ್, ಸೈಬರ್ ಕ್ರೈಂನ ಆಳ ಮತ್ತು ‘ಗೀಕ್’ ಪದದ ಅರ್ಥದ ಸುತ್ತ ಸಾಗುವ ಕುತೂಹಲಕಾರಿ ತುಣುಕುಗಳನ್ನು ಒಳಗೊಂಡಿದೆ.
ಗೀಕ್ ಸಿನಿಮಾದ ಕಂಟೆಂಟ್ ಏನು?
ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ನಿರ್ದೇಶಕ ಹರಿಪ್ರಕಾಶ್ ತಮ್ಮ ಅನುಭವಗಳನ್ನೇ ಇಲ್ಲಿ ಕಥೆಯಾಗಿಸಿದ್ದಾರೆ. "ಇಂದಿನ ದಿನಗಳಲ್ಲಿ ಮೊಬೈಲ್ ಆಪ್‌ಗಳು ಮತ್ತು ಜನರ ವೈಯಕ್ತಿಕ ಡೇಟಾ ದುರುಪಯೋಗವಾಗುತ್ತಿರುವುದು ದೊಡ್ಡ ಪಿಡುಗು. ಇದರ ಸುತ್ತ ಸಸ್ಪೆನ್ಸ್-ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಿದ್ದೇವೆ. ತಾಂತ್ರಿಕವಾಗಿ ಸಿನಿಮಾ ಶಕ್ತಿಯುತವಾಗಿರಬೇಕು ಎಂಬ ಉದ್ದೇಶದಿಂದ ನುರಿತ ತಂತ್ರಜ್ಞರೊಂದಿಗೆ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ" ಎಂದು ಅವರು ಮಾಹಿತಿ ನೀಡಿದ್ದಾರೆ. ಹಿಂದೆ ಹರಿಪ್ರಕಾಶ್ ನಿರ್ದೇಶಿಸಿದ್ದ ಕಿರುಚಿತ್ರಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ಸಂದಿವೆ.
ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸಿದ್ದಾರೆ?
ʻಗೀಕ್ʼ ಸಿನಿಮಾದಲ್ಲಿ ಪ್ರವೀಣ್ ತೇಜ್, ಚೈತ್ರಾ ಆಚಾರ್, ಕಿರಣ್ ಶ್ರೀನಿವಾಸ್ ಮತ್ತು ವಿರಾನಿಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್‌ವಿಎಂ ಪ್ರೊಡಕ್ಷನ್ಸ್ ಮತ್ತು ಹರಿಪ್ರಕಾಶ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂದೀಪ್ ನಾಗರಾಜ್ ಮತ್ತು ಪ್ರಿಯಾಂಕಾ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯೋಗೀಶ್ ರಾಜ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಈ ಚಿತ್ರಕ್ಕೆ ಜೋ ಕೋಸ್ಟಾ ಅವರ ಸಂಗೀತ ನೀಡಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ. ಒಟ್ಟಾರೆಯಾಗಿ, ಆಧುನಿಕ ಕಾಲದ ಡಿಜಿಟಲ್ ಅಪಾಯಗಳ ಬಗ್ಗೆ ಎಚ್ಚರಿಸುವ ಮತ್ತು ಮನರಂಜನೆ ನೀಡುವ ‘ಗೀಕ್’ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲೇ ತೆರೆಕಾಣಲು ಸಜ್ಜಾಗಿದೆ.