ನಟಿ ಕೃಷಿ ತಾಪಂಡ ಅವರು ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದಲ್ಲಾದ ದೊಡ್ಡ ಆಘಾತ ಹಾಗೂ ಅದರ ಬೆನ್ನಲ್ಲೇ ಎದುರಿಸುತ್ತಿರುವ ಸಾಮಾಜಿಕ ಜಾಲತಾಣಗಳ ಟ್ರೋಲ್‌ಗಳ ಕುರಿತು ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ತೀವ್ರ ಬೇಸರ ಮತ್ತು ಆಕ್ರೋಶ ಹೊರಹಾಕಿದ್ದಾರೆ. ಹರಡುತ್ತಿರುವ ನೆಗೆಟಿವ್ ಕಮೆಂಟ್‌ಗಳಿಗೆ ಕಟುವಾದ ಪದಗಳಲ್ಲಿ ಉತ್ತರಿಸಿರುವ ಅವರು, ತಾವಿನ್ನೂ ಬದುಕಿರುವುದಾಗಿ ಮತ್ತು ತಮ್ಮ ಬಿಲ್ಸ್ ಕಟ್ಟಲು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಕಣ್ಣೀರಿಟ್ಟಿದ್ದಾರೆ.
ಪ್ರಶ್ನೆಗಳಿಗೆ ನನ್ನ ಬಳಿ ಉತ್ತರ ಇಲ್ಲ
ತಮ್ಮ ಮನದಾಳದ ನೋವನ್ನು ಹಂಚಿಕೊಂಡಿರುವ ನಟಿ ಕೃಷಿ ತಾಪಂಡ, "ನನ್ನ ಲೈಫ್‌ನಲ್ಲಿ ಏನು ನಡೀತಾ ಇದೆ ಅಂತ ನನಗೆ ಅರ್ಥ ಆಗ್ತಿಲ್ಲ. ಏಟು ಮೇಲೆ ಏಟು ಬೀಳ್ತಾನೆ ಇದ್ದರೂ ಎದ್ದು ನಿಂತು ಮುಂದಕ್ಕೆ ನಡೆಯಲು ಪ್ರಯತ್ನಿಸುತ್ತಿದ್ದೇನೆ, ಬೇರೆ ಆಪ್ಷನ್ ಇಲ್ಲ. ಮೊದಲನೇ ಬಾರಿ ಹೆಣ್ಣಾಗಿ ಹುಟ್ಟಿರೋದು ಶಾಪ ಅಂತ ಅನಿಸುತ್ತಿದೆ. ಯಾರಾದರೂ 'ಹೇಗಿದ್ದೀರಾ?' ಎಂದು ಕೇಳಿದರೆ ನಾನು ಬ್ಲಾಂಕ್ ಆಗ್ತಿದ್ದೀನಿ, ಆ ಒಂದು ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇಲ್ಲ" ಎಂದು ಭಾವುಕರಾಗಿದ್ದಾರೆ.
ಕೃಷಿ ತಾಪಂಡ ಗೆಳೆಯ ವೈಶಾಖ್ ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆಯೇ ಕಾರಣವಾಯ್ತಾ? ಪೊಲೀಸರ ತನಿಖೆಯಲ್ಲಿ ಬಯಲಾಗಿದ್ದೇನು?
ಕೊಳೆತ ಟೊಮ್ಯಾಟೋ ಎಸೆಯುವ ಮುನ್ನಚ್ಚರಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಬರುವ ನೆಗೆಟಿವ್ ಕಮೆಂಟ್‌ಗಳಿಗೆ ತಾವೇಕೆ ರಿಯಾಕ್ಟ್ ಮಾಡುವುದಿಲ್ಲ ಎಂಬುದನ್ನು ಕೃಷಿ ತಾಪಂಡ ಉದಾಹರಣೆಯೊಂದಿಗೆ ವಿವರಿಸಿದ್ದಾರೆ. "ತುಂಬಾ ಚೆನ್ನಾಗಿರೋ ಟೊಮ್ಯಾಟೋಗಳ ಮಧ್ಯದಲ್ಲಿ ಒಂದು ಕೊಳೆತ ಟೊಮ್ಯಾಟೋ ಇದ್ದರೆ, ನಮ್ಮ ಕಣ್ಣು ಮೊದಲು ಅಲ್ಲಿಗೇ ಹೋಗುತ್ತದೆ. ಆ ಒಂದು ಕೊಳೆತ ಟೊಮ್ಯಾಟೋದಿಂದ ಇಡೀ ಬುಟ್ಟಿ ಹಾಳಾಗಬಾರದು ಎಂದು ಅದನ್ನು ಮೊದಲು ಬಿಸಾಡುತ್ತೇವೆ. ನಾನು ಕೂಡ ನೆಗೆಟಿವ್ ಕಮೆಂಟ್ ಮಾಡುವವರನ್ನು ನೋಡಿ ಬ್ಲಾಕ್ ಹಾಗೂ ರಿಮೂವ್ ಮಾಡುತ್ತೇನೆ" ಎಂದಿದ್ದಾರೆ.
ಕೆಟ್ಟದಾಗಿ ಮಾತಾಡೋರು ನನ್ನ ಬಾಡಿಗೆ ಕಟ್ಟಲ್ಲ
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತಾವು ಜಾಹೀರಾತು ಮತ್ತು ಪ್ರಮೋಷನ್ ವಿಡಿಯೋ ಹಂಚಿಕೊಂಡಾಗ ಬಂದ ಕಮೆಂಟ್‌ಗಳಿಗೆ ಕೃಷಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಾನು ತುಂಬಾ ಇಷ್ಟಪಟ್ಟು ಕಟ್ಟಿದ ಮನೆಯಲ್ಲಿ ಈಗ ನಾನಿಲ್ಲ, ಇರಲು ಸಾಧ್ಯವೂ ಇಲ್ಲ. ಆದರೆ ಆ ಮನೆಯ ಬಾಡಿಗೆಯನ್ನು ನಾನು ಇನ್ನೂ ಕಟ್ಟುತ್ತಲೇ ಇದ್ದೀನಿ. ನನ್ನ ಬಿಲ್ಸ್, ನನ್ನ ಇಎಂಐಗಳನ್ನು ನಾನು ತೀರಿಸಲೇಬೇಕು. ಕೆಲಸದ ವಿಡಿಯೋ ಹಾಕಿದ್ದಕ್ಕೆ 'ನಾಚಿಕೆ ಆಗಲ್ವಾ' ಎಂದು ಕೇಳಿದವರಿಗೆ, 'ನೀವೇನಾದರೂ ಬಂದು ನನ್ನ ಬಾಡಿಗೆ ಕಟ್ಟುತ್ತಿದ್ದೀರಾ?' ಎಂದು ಪ್ರಶ್ನಿಸಲು ಬಯಸುತ್ತೇನೆ. ಕೆಟ್ಟದಾಗಿ ಮಾತನಾಡುವವರು ಯಾರೂ ನನ್ನ ಮೆಡಿಕಲ್ ಬಿಲ್‌ಗಳನ್ನು ಕಟ್ಟುವುದಿಲ್ಲ" ಎಂದು ಕೃಷಿ ತಾಪಂಡ ನೇರವಾಗಿ ಹೇಳಿದ್ದಾರೆ.
ʻನಮ್ಮೆಲ್ಲರಿಗೂ ನೆಮ್ಮದಿಯಿಂದ ದುಃಖಿಸಲು ಬಿಡಿʼ; ಸ್ನೇಹಿತ ವೈಶಾಖ್ ಆತ್ಮಹತ್ಯೆ ಬೆನ್ನಲ್ಲೇ ನಟಿ ಕೃಷಿ ತಾಪಂಡ ಅಸಮಾಧಾನ
ಅವಮಾನ, ಅನುಮಾನ, ಚಾರಿತ್ರ್ಯವಧೆ ಎಲ್ಲವನ್ನೂ ನೋಡಿಬಿಟ್ಟೆ
ತಮ್ಮ ಸೌಮ್ಯ ಸ್ವಭಾವವನ್ನೇ ಬಂಡವಾಳ ಮಾಡಿಕೊಳ್ಳುವವರ ವಿರುದ್ಧ ಕಿಡಿಕಾರಿದ ಕೃಷಿ ತಾಪಂಡ ಅವರು, "ಒಬ್ಬರು ಸೈಲೆಂಟ್ ಆಗಿದ್ದಾರೆ ಅಂತ ಅವರನ್ನೇ ಚುಚ್ಚಿ ಚುಚ್ಚಿ ಮಾತನಾಡುತ್ತಾ, ಅವರೇ ಎಲ್ಲದಕ್ಕೂ ಕಾರಣ ಎನ್ನುವಂತೆ ಬಿಂಬಿಸಿ ಕುಗ್ಗಿಸುವುದು ತುಂಬಾನೇ ಕಷ್ಟ ಕೊಡುತ್ತದೆ. ನಿಮ್ಮೆಲ್ಲರಿಗೂ ಅದು ಕೇವಲ ಒಂದು ಘಟನೆ ಇರಬಹುದು, ಆದರೆ ನನಗೆ ಅದು ತುಂಬಿಬಾರದ ನಷ್ಟ. ಕಷ್ಟ ತಾಳಲಾರದೆ ಸತ್ತರೆ ಹೇಡಿಗಳು ಅಂತೀರಾ, ಎದುರಿಸಿ ಬದುಕಲು ಪ್ರಯತ್ನಿಸಿದರೆ ನೆಗೆಟಿವ್ ಕಮೆಂಟ್ಸ್ ಹಾಕ್ತೀರಾ. ನಕ್ಕರೆ 'ಇಷ್ಟು ಬೇಗ ಮೂವ್ ಆನ್ ಆಗ್ಬಿಟ್ರಾ' ಅಂತೀರಾ. ನನ್ನ ಹೃದಯ ಒಡೆದುಹೋಗಿದ್ದರೂ ನಾನು ಕ್ಯಾಮರಾ ಮುಂದೆ ಬಂದಿದ್ದೇನೆ. ನನ್ನ ಜೀವನದಲ್ಲಿ ಅವಮಾನ, ಅನುಮಾನ ಮತ್ತು ಚಾರಿತ್ರ್ಯವಧೆ ಎಲ್ಲವನ್ನೂ ನೋಡಿ ಮುಗಿಸಿದ್ದೇನೆ" ಎಂದು ತಮ್ಮ ನೋವನ್ನು ವ್ಲಾಗ್ ಮೂಲಕ ಹಂಚಿಕೊಂಡಿದ್ದಾರೆ.