ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೂ. ಎನ್‌ಟಿಆರ್‌ ಬಾಮೈದನಿಗೆ ನಾಯಕಿಯಾದ ಮೇಘಾ ಶೆಟ್ಟಿ; ಕೆವಿಎನ್‌ ಪ್ರೊಡಕ್ಷನ್ಸ್ ಮೂಲಕ ಟಾಲಿವುಡ್‌ಗೆ ಹಾರಿದ ʻಕನ್ನಡತಿʼ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ ಈಗ ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್‌ನ ಹೊಸ ತೆಲುಗು ಚಿತ್ರದ (#NN5) ಮೂಲಕ ಟಾಲಿವುಡ್‌ಗೆ ಅದ್ಧೂರಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ನಾರ್ನೆ ನಿತಿನ್ ನಾಯಕನಾಗಿ ನಟಿಸುತ್ತಿದ್ದಾರೆ.

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ, ನಂತರ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡ ನಟಿ ಮೇಘಾ ಶೆಟ್ಟಿ ಈಗ ತೆಲುಗು ಚಿತ್ರರಂಗಕ್ಕೆ ಲಗ್ಗೆ ಇಡಲು ಸಜ್ಜಾಗಿದ್ದಾರೆ. ‘ಮಾಯಾಬಜಾರ್‌’ ಹಾಗೂ ‘ಜೂನಿಯರ್’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಲಿರುವ ಹೊಸ ಚಿತ್ರದ ಮೂಲಕ ಅವರು ಟಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರಕ್ಕೆ ತಾತ್ಕಾಲಿಕವಾಗಿ '#NN5' ಎಂದು ಹೆಸರಿಡಲಾಗಿದೆ.

ಎನ್‌ಟಿಆರ್‌ ಬಾಮೈದನಿಗೆ ನಾಯಕಿ

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಈ ಚಿತ್ರವನ್ನು ಹೆಮ್ಮೆಯಿಂದ ನಿರ್ಮಿಸುತ್ತಿದೆ. ಈ ಸಿನಿಮಾದಲ್ಲಿ ತೆಲುಗಿನ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಅವರ ಪತ್ನಿಯ ಸಹೋದರ (ಬಾಮೈದ) ನಾರ್ನೆ ನಿತಿನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ಯಶಸ್ಸು ಕಾಣುತ್ತಾ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ನಾರ್ನೆ ನಿತಿನ್, ಈಗ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ರಾಧಾಕೃಷ್ಣ ರೆಡ್ಡಿ ಕಾಂಬಿನೇಷನ್‌ನಲ್ಲಿ ನಟಿಸುತ್ತಿರುವುದು ವಿಶೇಷ. ಇನ್ನು, ಪ್ರಮುಖ ಪಾತ್ರವೊಂದರಲ್ಲಿ ನಟಿ ಅನಿಕಾ ಸುರೇಂದ್ರನ್ ಚಿತ್ರದ ಮತ್ತೋರ್ವ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ʻಬಿಗ್‌ ಬಾಸ್‌ʼ ಶೋನಿಂದ ಆಫರ್‌ ಬಂದರೂ ಮೇಘಾ ಶೆಟ್ಟಿ ಹೋಗುತ್ತಿಲ್ಲವೇಕೆ? ಇಲ್ಲಿದೆ ನೋಡಿ ಉತ್ತರ

ಅದ್ದೂರಿಯಾಗಿ ನಡೆಯಿತು ಮುಹೂರ್ತ

ಈ ಹೊಸ ಚಿತ್ರದ ಮುಹೂರ್ತ ಸಮಾರಂಭವು ಭಾನುವಾರ ಅತ್ಯಂತ ಅದ್ದೂರಿಯಾಗಿ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ಅವರು ಕ್ಲಾಪ್ ಮಾಡಿದರೆ, 'ಬಾಹುಬಲಿ' ಖ್ಯಾತಿಯ ಹೆಸರಾಂತ ಛಾಯಾಗ್ರಾಹಕ ಕೆ. ಸೆಂಥಿಲ್ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕ ಕಲ್ಯಾಣ್ ಶಂಕರ್ ಮೊದಲ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ನೀಡಿದರು.

OLC Movie: 'ಆಪರೇಷನ್ ಲಂಡನ್ ಕೆಫೆ' ಸಿನಿಮಾದಲ್ಲಿ ಬಜಾರಿ ಹುಡುಗಿಯಾದ ʻಜೊತೆ ಜೊತೆಯಲಿʼ ಖ್ಯಾತಿಯ ಮೇಘಾ ಶೆಟ್ಟಿ; ರಿಲೀಸ್‌ ಅಪ್‌ಡೇಟ್‌ ಇಲ್ಲಿದೆ

ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಮೇಘಾ ನಾಯಕಿ

ಇತ್ತೀಚೆಗಷ್ಟೇ ದೇವನೂರು ಚಂದ್ರು ನಿರ್ದೇಶನದ, ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಚಿತ್ರದಲ್ಲಿ ಮೇಘಾ ಶೆಟ್ಟಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಅವರಿಗೆ ಈ ಬಿಗ್ ತೆಲುಗು ಪ್ರಾಜೆಕ್ಟ್ ಕೈಸೇರಿದೆ. ಇದರ ಜೊತೆಗೆ, ಪ್ರಸ್ತುತ ಚಿತ್ರೀಕರಣದ ಹಂತದಲ್ಲಿರುವ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ 'ಚೀತಾ'ದಲ್ಲಿ ಪ್ರಜ್ವಲ್ ದೇವರಾಜ್‌ಗೆ ಜೋಡಿಯಾಗಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ.

'#NN5' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ಮೇಘಾ ಶೆಟ್ಟಿ ಅವರು, ತೆಲುಗಿನಲ್ಲಿ ಸ್ಟಾರ್ ನಟಿಯರಾಗಿ ಮಿಂಚುತ್ತಿರುವ ಶ್ರೀಲೀಲಾ, ರಶ್ಮಿಕಾ ಮಂದಣ್ಣ ಹಾಗೂ ರುಕ್ಮಿಣಿ ವಸಂತ್ ಅವರ ಹಾದಿಯಲ್ಲೇ ಸಾಗಿ ದೊಡ್ಡ ಯಶಸ್ಸು ಕಾಣಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.