ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶೂಟಿಂಗ್ ವೇಳೆ ಬಾಲಿವುಡ್ ನಟಿ ನುಶ್ರತ್ ಭರುಚ್ಚಾಗೆ ಗಂಭೀರ ಅಪಘಾತ; ಬೆನ್ನುಮೂಳೆಗೆ ತೀವ್ರ ಪೆಟ್ಟು, ಬಾಲಿಯ ಆಸ್ಪತ್ರೆಗೆ ದಾಖಲು!

Nushrratt Bharuccha Accident: ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಶೂಟಿಂಗ್ ವೇಳೆ ಸಂಭವಿಸಿದ ಅನಿರೀಕ್ಷಿತ ಅವಘಡದಿಂದ ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಬೆನ್ನುಮೂಳೆಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ತುರ್ತು ಶಸ್ತ್ರಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ಮುಂಬೈಗೆ ಶಿಫ್ಟ್ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಬಾಲಿವುಡ್‌ನ ನಟಿ ನುಶ್ರತ್ ಭರುಚ್ಚಾ ಚಿತ್ರೀಕರಣದ ವೇಳೆ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಭೀಕರ ಅಪಘಾತಕ್ಕೀಡಾಗಿದ್ದಾರೆ. ಪ್ರಾಜೆಕ್ಟ್‌ ಒಂದರ ಚಿತ್ರೀಕರಣಕ್ಕಾಗಿ ಬಾಲಿಗೆ ತೆರಳಿದ್ದ ಅವರಿಗೆ ಸೆಟ್‌ನಲ್ಲಿ ಅನಿರೀಕ್ಷಿತವಾಗಿ ಪೆಟ್ಟಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ತೀವ್ರತೆಯಿಂದಾಗಿ ನುಶ್ರತ್ ಅವರ ಬೆನ್ನಿಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ ಎಂದು ವರದಿಯಾಗಿದೆ. ಸದ್ಯ ಬಾಲಿಯ ಸ್ಥಳೀಯ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚಿನ ವೈದ್ಯಕೀಯ ನೆರವು ಮತ್ತು ಅಗತ್ಯ ಶಸ್ತ್ರಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ತಕ್ಷಣವೇ ಮುಂಬೈಗೆ ಕರೆತರಲು ಸಿದ್ಧತೆಗಳು ನಡೆದಿವೆ. ಶೂಟಿಂಗ್ ಸೆಟ್‌ನಲ್ಲಿ ಘಟನೆ ಹೇಗೆ ಸಂಭವಿಸಿತು, ಗಾಯದ ನಿಖರ ವಿವರಗಳ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ. ಆದರೆ ನಟಿ ನುಶ್ರತ್ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.

ದುರ್ಘಟನೆ ಸಂಭವಿಸುವ ಕೆಲವೇ ದಿನಗಳ ಹಿಂದಷ್ಟೇ ನುಶ್ರತ್ ಬಾಲಿಯ ರಮಣೀಯ ತಾಣಗಳ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಬೆನ್ನಲ್ಲೇ ಈ ಅವಘಡ ಸಂಭವಿಸಿರುವುದು ಅವರ ಅಪಾರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಅವರು ಶೀಘ್ರ ಗುಣಮುಖರಾಗಿ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲಿ ಎಂದು ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಅವರ ಮುಂದಿನ ಚಿತ್ರಗಳ ಶೂಟಿಂಗ್ ಶೆಡ್ಯೂಲ್‌ಗಳು ಮುಂದೂಡಲ್ಪಡುವ ಸಾಧ್ಯತೆಯಿದೆ.

‘ಪ್ಯಾರ್ ಕಾ ಪಂಚ್‌ನಾವಾ’ ಸರಣಿ ಹಾಗೂ ‘ಸೋನು ಕೆ ಟಿಟು ಕಿ ಸ್ವೀಟಿ’ ಸಿನಿಮಾಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ನುಶ್ರತ್, ‘ಡ್ರೀಮ್ ಗರ್ಲ್’, ‘ಛೋರಿ’, ‘ಜನ್‌ಹಿತ್ ಮೇ ಜಾರಿ’, ‘ರಾಮ್ ಸೇತು’ ಮತ್ತು ‘ಅಕೇಲಿ’ ಮೊದಲಾದ ಮಹಿಳಾ ಪ್ರಧಾನ ಹಾಗೂ ವಿಭಿನ್ನ ಕಥಾವಸ್ತುಗಳ ಚಿತ್ರಗಳ ಮೂಲಕ ವಿಮರ್ಶಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹಿಂದಿ ಮಾತ್ರವಲ್ಲದೆ ತೆಲುಗಿನ ‘ತಾಜ್ ಮಹಲ್’ ಮತ್ತು ತಮಿಳಿನ ‘ವಾಲಿಬಾ ರಾಜಾ’ ಚಿತ್ರಗಳಲ್ಲೂ ನಟಿಸಿ ದಕ್ಷಿಣ ಭಾರತದ ಪ್ರೇಕ್ಷಕರಿಗೂ ಪರಿಚಿತರಾಗಿದ್ದಾರೆ.

ಇತ್ತೀಚೆಗಷ್ಟೇ ರೆಮೋ ಡಿಸೋಜಾ ನಿರ್ದೇಶನದ, ಟೈಗರ್ ಶ್ರಾಫ್, ಪಶ್ಮೀನಾ ರೋಷನ್ ಹಾಗೂ ಅಭಿಷೇಕ್ ಬ್ಯಾನರ್ಜಿ ಪ್ರಮುಖ ತಾರಾಗಣದಲ್ಲಿರುವ ಬಿಗ್ ಬಜೆಟ್ ಸಿನಿಮಾಗೆ ಆಯ್ಕೆಯಾಗಿದ್ದ ನುಶ್ರತ್‌ಗೆ ಚಿತ್ರೀಕರಣದ ಆರಂಭಿಕ ದಿನಗಳಲ್ಲೇ ಈ ರೀತಿ ಪೆಟ್ಟಾಗಿರುವುದು ಚಿತ್ರರಂಗಕ್ಕೆ ಶಾಕ್ ನೀಡಿದೆ.