ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಅಯೋಗ್ಯ 2’ ಚಿತ್ರದ ಮತ್ತೊಂದು ಹೊಸ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ 'ಮುದ್ದು ಮುದ್ದು ಪುಟ್ಟಲಕ್ಷ್ಮಿ', 'ಅಣ್ಣಾ ಬಂದ್ರೆ ಜೋಶ್ ಬತ್ತದೆ' ಮತ್ತು 'ಹುಡ್ಗೀರ್ ಡೇಂಜರಸ್' ಹಾಡುಗಳ ಯಶಸ್ಸಿನ ಬಳಿಕ, ಇದೀಗ 'ಮಿಲ್ಕಿ ಬ್ಯೂಟಿ' ಎಂಬ ಸಾಂಗ್ ಅನಾವರಣಗೊಂಡಿದೆ. ವಿಶೇಷವೆಂದರೆ, ಈ ಹಾಡಿನ ಮೂಲಕ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿ ಪ್ರಜ್ಞಾ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ.
ಸ್ಯಾಂಡಲ್‌ವುಡ್‌ಗೆ ನಟಿ ಪ್ರಜ್ಞಾ ಮರುಪ್ರವೇಶ
‘ಬಾಬಾ’, ‘ಕೆಂಚ’, ‘ದೇವ್ರು’ ಮತ್ತು ‘ಗಣೇಶ್ ಮತ್ತೆ ಬಂದ’ ಮುಂತಾದ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನಸೆಳೆದಿದ್ದ ನಟಿ ಪ್ರಜ್ಞಾ, ಕಳೆದ ಕೆಲವು ವರ್ಷಗಳಿಂದ ಬೆಳ್ಳಿಪರದೆಯಿಂದ ದೂರವೇ ಉಳಿದಿದ್ದರು. ಇದೀಗ 'ಅಯೋಗ್ಯ 2' ಚಿತ್ರದ ‘ಮಿಲ್ಕಿ ಬ್ಯೂಟಿ’ ಹಾಡಿನ ವಿಶೇಷ ನೃತ್ಯದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ರೀ-ಎಂಟ್ರಿ ನೀಡಿದ್ದಾರೆ.
'ಹುಡ್ಗೀರು ಡೇಂಜರಸ್' ಅಂತ ಹಾಡಿದ ನಟ ʻನೀನಾಸಂʼ ಸತೀಶ್; ‘ಅಯೋಗ್ಯ 2’ ಚಿತ್ರದ ಮತ್ತೊಂದು ಕ್ಯಾಚಿ ಸಾಂಗ್ ರಿಲೀಸ್
ಕಮ್‌ಬ್ಯಾಕ್ ಮಾಡಿದ್ದಕ್ಕೆ ಪ್ರಜ್ಞಾ ಫುಲ್ ಖುಷ್
ತಮ್ಮ ಕಮ್‌ಬ್ಯಾಕ್ ಕುರಿತು ಮಾತನಾಡಿದ ನಟಿ ಪ್ರಜ್ಞಾ, "ಬಹು ದಿನಗಳ ಬಳಿಕ ಕನ್ನಡ ಸಿನಿಮಾಗೆ ಮರಳಿದ್ದೇನೆ. 'ಅಯೋಗ್ಯ 2' ಚಿತ್ರದಲ್ಲಿ 'ಮಿಲ್ಕಿ ಬ್ಯೂಟಿ' ಅನ್ನೋ ಹಾಡಿಗೆ ಡ್ಯಾನ್ಸ್ ಮಾಡಿದ್ದೇನೆ. ಶೂಟಿಂಗ್ ಮಾಡುವಾಗ ಕೆಲಸ ಮಾಡುತ್ತಿದ್ದೇನೆ ಅನ್ನಿಸಲೇ ಇಲ್ಲ, ಅಷ್ಟೊಂದು ಸಂತೋಷ ಮತ್ತು ಎಂಜಾಯ್‌ಮೆಂಟ್ ಸೆಟ್‌ನಲ್ಲಿತ್ತು. ನಟಿ ರಚಿತಾ ರಾಮ್ ಅವರ ಸಿನಿಮಾದಲ್ಲಿ ಅಭಿನಯಿಸಿದ್ದು ತುಂಬಾ ಖುಷಿಯಾಗಿದೆ. ಈ ಅವಕಾಶ ನೀಡಿದ ಇಡೀ ತಂಡಕ್ಕೆ ಧನ್ಯವಾದಗಳು" ಎಂದರು.
ರಾಜ್ಯದ ಪ್ರತಿ ಹಳ್ಳಿಗೂ ತಲುಪುವ ಕಥೆ
ಚಿತ್ರದ ಕುರಿತು ಮಾತನಾಡಿದ ನಾಯಕ ನಟ ಸತೀಶ್ ನೀನಾಸಂ, "ಮೊದಲ ಭಾಗ 'ಅಯೋಗ್ಯ' ಸಿನಿಮಾವನ್ನು ಬ್ಲಾಕ್ ಬಸ್ಟರ್ ಹೌಸ್‌ಫುಲ್ ಮಾಡಿ ಗೆಲ್ಲಿಸಿದ್ದಕ್ಕೆ ಕನ್ನಡ ಪ್ರೇಕ್ಷಕರಿಗೆ ನಾವು ಎಂದಿಗೂ ಚಿರಋಣಿ. ನಿರ್ದೇಶಕ ಮಹೇಶ್ ಕುಮಾರ್ ಈ ಹಿಂದೆ ಮಂಡ್ಯದ ಹಳ್ಳಿಯ ಕಥೆ ಹೇಳಿದ್ದರು. ಆದರೆ 'ಅಯೋಗ್ಯ 2' ಸಿನಿಮಾದ ಕಂಟೆಂಟ್ ಕೇವಲ ಒಂದು ಹಳ್ಳಿಗೆ ಸೀಮಿತವಾಗದೆ, ರಾಜ್ಯದ ಪ್ರತಿಯೊಂದು ಹಳ್ಳಿಗೂ ತಲುಪುವಂತಹ ವಿಶೇಷ ಸಬ್ಜೆಕ್ಟ್ ಹೊಂದಿದೆ" ಎಂದು ಭರವಸೆ ವ್ಯಕ್ತಪಡಿಸಿದರು.
Ayogya-2 Movie: ಅದ್ಧೂರಿಯಾಗಿ ಸೆಟ್ಟೇರಿತು 'ಅಯೋಗ್ಯ-2'; ಮತ್ತೆ ಒಂದಾದ ಸತೀಶ್ ನೀನಾಸಂ, ರಚಿತಾ ರಾಮ್
ದಯವಿಟ್ಟು ಬಂದು ನೋಡಿ
ನಾಯಕಿ ರಚಿತಾ ರಾಮ್ ಮಾತನಾಡಿ, "ಅಯೋಗ್ಯ ಹಾಗೂ ಅಯೋಗ್ಯ 2 ಎರಡೂ ಸಿನಿಮಾಗಳನ್ನು ನಾನು ತುಂಬಾ ಇಷ್ಟಪಟ್ಟು ಅಭಿನಯಿಸಿದ್ದೇನೆ. ಈ ಚಿತ್ರವನ್ನು ನಮ್ಮ 'ವಿಐಪಿ'ಗಳಾದ ಪ್ರೇಕ್ಷಕರೊಂದಿಗೆ ಚಿತ್ರಮಂದಿರದಲ್ಲೇ ನೋಡಲು ಕಾಯುತ್ತಿದ್ದೇನೆ. ಪ್ರಸ್ತುತ ಕನ್ನಡ ಸಿನಿಮಾಗಳಿಗೆ 'ದಯವಿಟ್ಟು ಬಂದು ನೋಡಿ' ಎಂದು ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ. ಆದರೆ ಈ ಸಿನಿಮಾ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಎಂಬ ಪೂರ್ಣ ನಂಬಿಕೆ ನನಗಿದೆ" ಎಂದರು.
ಆಗಸ್ಟ್ 7ಕ್ಕೆ ರಾಜ್ಯಾದ್ಯಂತ ಬಿಡುಗಡೆ
‘ಅಯೋಗ್ಯ 2’ ಚಿತ್ರವನ್ನು ಎಸ್.ವಿ.ಸಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಂ. ಮುನೇಗೌಡ ನಿರ್ಮಿಸಿದ್ದು, ಮಹೇಶ್ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರವು ಆಗಸ್ಟ್ 7 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, 'ಬಹದ್ದೂರ್' ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಇನ್ನು, ಇಂದು ನಾಗರಾಜ್ ಮತ್ತು ನಿಶಾನ್ ರೈ 'ಮಿಲ್ಕಿ ಬ್ಯೂಟಿ' ಹಾಡಿಗೆ ಕಂಠದಾನ ಮಾಡಿದ್ದು, ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ. ಮಾಸ್ತಿ ಉಪ್ಪಾರಹಳ್ಳಿ ಸಂಭಾಷಣೆ, 'ಶಾಖಾಹಾರಿ' ಫೇಮ್ ವಿಶ್ವಜಿತ್ ರಾವ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಅರ್ಜುನ್ ರಾಜ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಸತೀಶ್ ನೀನಾಸಂ, ರಚಿತಾ ಜೊತೆಗೆ ರವಿಶಂಕರ್, ಸಾಧು ಕೋಕಿಲ, ತಬಲ ನಾಣಿ, ಸುಂದರ್ ರಾಜ್, ಶಿವರಾಜ್ ಕೆ .ಆರ್. ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಮತ್ತು ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.