ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಹಿರಿಯ ನಟಿ ಅಂಬಿಕಾ ಹಾಗೂ ಅವರ ಸಹೋದರ ಮಲ್ಲಿಕಾರ್ಜುನ್ ವಿರುದ್ಧ, ಸ್ವಂತ ಸಹೋದರಿ ಹಾಗೂ ಖ್ಯಾತ ನಟಿ ರಾಧಾ ಅವರು ಚೆನ್ನೈ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. ಅಂಬಿಕಾ ಮತ್ತು ಮಲ್ಲಿಕಾರ್ಜುನ್ 46 ಕೋಟಿ ರೂಪಾಯಿ ವಂಚನೆಗೆ ಯತ್ನಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ವ್ಯವಹಾರದ ಅಗತ್ಯಕ್ಕಾಗಿ ಮುಂಚಿತವಾಗಿ ಸಹಿ ಮಾಡಿಟ್ಟಿದ್ದ ಬ್ಯಾಂಕ್ ಚೆಕ್‌ಗಳನ್ನು ಕಳವು ಮಾಡಿ, ಹಣವನ್ನು ತಮ್ಮ ಖಾತೆಗೆ ಜಮೆ ಮಾಡಿಕೊಳ್ಳಲು ಇಬ್ಬರೂ ಯತ್ನಿಸಿದ್ದಾರೆ ಎಂದು ನಟಿ ರಾಧಾ ತಿಳಿಸಿದ್ದಾರೆ.
46 ಕೋಟಿ ರೂ. ವಂಚನೆಗೆ ಯತ್ನ
ದೂರಿನಲ್ಲಿರುವ ವಿವರಗಳ ಪ್ರಕಾರ, ರಾಧಾ ತಮ್ಮ ವ್ಯಾಪಾರ ವಹಿವಾಟುಗಳಿಗಾಗಿ ‘ಎಆರ್‌ಎಸ್ ಗಾರ್ಡನ್ ಸ್ಟುಡಿಯೋ’ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದರು. ವಿದ್ಯುತ್ ಬಿಲ್, ತೆರಿಗೆ ಹಾಗೂ ಇತರ ನಿರ್ವಹಣಾ ವೆಚ್ಚಗಳ ಸುಲಭ ಪಾವತಿಗಾಗಿ ಮುಂಚಿತವಾಗಿಯೇ ಸಹಿ ಮಾಡಿದ ಕೆಲವು ಖಾಲಿ ಚೆಕ್‌ಗಳನ್ನು ತಮ್ಮ ಕೊಠಡಿಯಲ್ಲಿ ಇಟ್ಟಿದ್ದರು. 2025ರ ಜನವರಿಯಲ್ಲಿ ಈ ಸಂಸ್ಥೆಯ ಹೆಸರನ್ನು ‘ಆರ್.ಆರ್. ಗಾರ್ಡನ್ಸ್’ ಎಂದು ಬದಲಾಯಿಸಿದ್ದ ರಾಧಾ, ಹೊಸ ಚೆಕ್‌ಬುಕ್ ಪಡೆದು ಹಳೆಯ ಚೆಕ್‌ಬುಕ್ ಬಳಕೆಯನ್ನು ಸ್ಥಗಿತಗೊಳಿಸಿದ್ದರು. ಆದರೆ, ಸೆಪ್ಟೆಂಬರ್ 17ರಂದು ಅದೇ ಹಳೆಯ ಚೆಕ್‌ಗಳ ಮೂಲಕ ಬರೋಬ್ಬರಿ 46 ಕೋಟಿ ರೂಪಾಯಿಯನ್ನು ಡ್ರಾ ಮಾಡಿಕೊಳ್ಳಲು ಅಂಬಿಕಾ ಯತ್ನಿಸಿದ್ದು, ಬ್ಯಾಂಕ್‌ನಿಂದ ಬಂದ ಸಂದೇಶ ಗಮನಿಸಿದ ರಾಧಾ ತಕ್ಷಣವೇ ಆ ವಹಿವಾಟನ್ನು ರದ್ದುಗೊಳಿಸಿ ವಂಚನೆಯನ್ನು ತಪ್ಪಿಸಿದ್ದಾರೆ.
ಚೆಕ್‌ಗಳನ್ನು ಅಂಬಿಕಾ ಕದ್ದಿದ್ದಾರೆ!
ನನ್ನ ನಿವಾಸದ ನೆಲಮಹಡಿಯಲ್ಲಿ ವಾಸವಾಗಿರುವ ಅಂಬಿಕಾ ಅವರಿಗೆ ತಮ್ಮ ಕೊಠಡಿಗೆ ಸುಲಭ ಪ್ರವೇಶವಿತ್ತು. ಆ ಸಲುಗೆಯನ್ನು ದುರುಪಯೋಗಪಡಿಸಿಕೊಂಡು, ತಮ್ಮ ಅನುಮತಿಯಿಲ್ಲದೆ ಕೊಠಡಿ ಪ್ರವೇಶಿಸಿ ಚೆಕ್‌ಗಳನ್ನು ಕಳವು ಮಾಡಲಾಗಿದೆ ಎಂದು ರಾಧಾ ಆರೋಪಿಸಿದ್ದಾರೆ. ಕಳವು ಮಾಡಿದ ಖಾಲಿ ಚೆಕ್‌ಗಳ ಮೇಲೆ ವಿವರಗಳನ್ನು ಸಹೋದರ ಮಲ್ಲಿಕಾರ್ಜುನ್ ಬರೆದಿದ್ದಾರೆ ಎಂಬ ಸಂಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ವಿದೇಶಿ ವಿನಿಮಯ ನಿಯಮ ಉಲ್ಲಂಘನೆ (ಫೆಮಾ) ಪ್ರಕರಣವೊಂದರಲ್ಲಿ ಮಲ್ಲಿಕಾರ್ಜುನ್ ಭಾರಿ ಮೊತ್ತದ ದಂಡ ಪಾವತಿಸಬೇಕಾಗಿದ್ದು, ಆ ದಂಡ ತೀರಿಸುವ ಉದ್ದೇಶದಿಂದಲೇ ಇಬ್ಬರೂ ಒಟ್ಟಾಗಿ ಈ ಸಂಚು ರೂಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆ ಚೆಕ್‌ಗಳನ್ನು ತಾನು ಅವರಿಗೆ ನೀಡಿರಲಿಲ್ಲ ಹಾಗೂ ಅಷ್ಟು ದೊಡ್ಡ ಮೊತ್ತವನ್ನು ಅವರಿಗೆ ಕೊಡುವಂತಹ ಯಾವುದೇ ಆರ್ಥಿಕ ವ್ಯವಹಾರಗಳನ್ನು ನಾನು ಮಾಡಿಲ್ಲ ಎಂದು ರಾಧಾ ಸ್ಪಷ್ಟಪಡಿಸಿದ್ದಾರೆ.
ನನ್ನ ಅಕ್ಕನನ್ನು ನಾನು ನಂಬಿದ್ದೆ
ದೂರು ನೀಡಿದ ಬಳಿಕ ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ನೋವು ಹಂಚಿಕೊಂಡ ರಾಧಾ, "2006ರಲ್ಲೇ ನಮ್ಮ ಕುಟುಂಬದ ಆಸ್ತಿಯನ್ನು ನನಗೂ ಮತ್ತು ಅಂಬಿಕಾಗೂ ಸಮಾನವಾಗಿ ಹಂಚಲಾಗಿತ್ತು. ಅದರಲ್ಲಿ ಒಂದು ದೊಡ್ಡ ಕಟ್ಟಡವನ್ನು ಅಕ್ಕನಿಗೆ ಹಾಗೂ ಎಆರ್‌ಎಸ್ ಗಾರ್ಡನ್ ಆಸ್ತಿಯನ್ನು ನನಗೆ ನೀಡಲಾಗಿತ್ತು. ಅದೇ ಆಸ್ತಿಯನ್ನು ನಾನು 'ಆರ್.ಆರ್. ಗಾರ್ಡನ್' ಎಂದು ಮರುನಾಮಕರಣ ಮಾಡಿದೆ. ನನ್ನ ಸ್ವಂತ ಅಕ್ಕನನ್ನೇ ನಂಬಿ ಅದರ ನಿರ್ವಹಣೆಯ ಜವಾಬ್ದಾರಿಯನ್ನು ಆಕೆಗೆ ವಹಿಸಿದ್ದೆ. ಆದರೆ ನನ್ನ ಅಕ್ಕ ಅಂಬಿಕಾ ಮತ್ತು ಸಹೋದರ ಮಲ್ಲಿಕಾರ್ಜುನ್ ಇಬ್ಬರೂ ಸೇರಿ ನನ್ನ ಖಾತೆಯ ಸುಮಾರು 5 ಚೆಕ್‌ಗಳನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕುಟುಂಬದ ಮಾನಕ್ಕೆ ಹೆದರಿ ಸುಮ್ಮನಿದ್ದೆ
"ಕಳೆದ ಒಂದು ವರ್ಷದಿಂದ ನನ್ನನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ, ನಾನು ಮಾಡುವ ಫೋನ್ ಕರೆಗಳನ್ನೂ ಸ್ವೀಕರಿಸದೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಕೊಠಡಿಯಲ್ಲಿರುವ ನನ್ನ ಬೆಲೆಬಾಳುವ ಆಭರಣಗಳು ಹಾಗೂ ಆಸ್ತಿ ಪತ್ರಗಳನ್ನು ಪರಿಶೀಲಿಸಲು ಕೂಡ ಬಿಡುತ್ತಿಲ್ಲ. ಸೆಪ್ಟೆಂಬರ್ 17ರಂದು ಬ್ಯಾಂಕ್‌ನಿಂದ ಈ ಕುರಿತ ಮೆಸೇಜ್ ಬಂದಾಗ ಬೆಚ್ಚಿಬಿದ್ದೆ, ತಕ್ಷಣ ಬ್ಯಾಂಕ್ ಸಂಪರ್ಕಿಸಿ ವಹಿವಾಟನ್ನು ತಡೆಹಿಡಿದೆ. ಇಷ್ಟು ದಿನ ಕುಟುಂಬದ ಮಾನಕ್ಕೆ ಹೆದರಿ ಸುಮ್ಮನಿದ್ದೆ, ಆದರೆ ಪರಿಸ್ಥಿತಿ ಮಿತಿಮೀರಿದ ಕಾರಣ ಪೊಲೀಸರ ಮೊರೆ ಹೋಗಿದ್ದೇನೆ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು, ಕಾನೂನಿನ ಮೂಲಕ ನನಗೆ ಖಂಡಿತ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ" ಎಂದು ನಟಿ ರಾಧಾ ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.