ʻನ್ಯಾಷನಲ್ ಕ್ರಶ್ʼ ರಶ್ಮಿಕಾ ಮಂದಣ್ಣ ಅವರು ಮದುವೆ ಬಳಿಕ ಪುನಃ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ತಮ್ಮ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ 'ಮೈಸಾ' (Mysaa) ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದಕ್ಕಾಗಿ ಅವರು ಬ್ಯಾಂಕಾಕ್‌ಗೆ ಹೋಗಿದ್ದು. ಅಲ್ಲಿ ಅತ್ಯಂತ ಕಠಿಣವಾದ ಸಮರ ಕಲೆ (Martial Arts) ಮತ್ತು ಸ್ಟಂಟ್ ತರಬೇತಿಯಲ್ಲಿ ನಿರತರಾಗಿದ್ದಾರೆ.
ಪ್ರತಿದಿನ 8 ಗಂಟೆ ತಯಾರಿ
ವಿಶ್ವವಿಖ್ಯಾತ ಜೈಕಾ ಸ್ಟಂಟ್ ತಂಡದೊಂದಿಗೆ (Jaika Stunt Team) ಕೆಲಸ ಮಾಡುತ್ತಿರುವ ಅವರು, ಪ್ರತಿದಿನ ಬರೋಬ್ಬರಿ 8 ಗಂಟೆಗಳ ಹ್ಯಾಂಡ್-ಟು-ಹ್ಯಾಂಡ್ ಕಂಬಾಟ್ ತರಬೇತಿ ಪಡೆಯುತ್ತಿದ್ದಾರೆ. ಮೈಸಾ ಚಿತ್ರದ ಮುಂದಿನ ಆಕ್ಷನ್-ಪ್ಯಾಕ್ಡ್ ಶೂಟಿಂಗ್ ಶೀಘ್ರದಲ್ಲೇ ಕೇರಳದಲ್ಲಿ ಪ್ರಾರಂಭವಾಗಲಿದೆ. 16 ದಿನಗಳ ಒಂದೇ ಶೆಡ್ಯೂಲ್ ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಪ್ರಸ್ತುತ ಬ್ಯಾಂಕಾಕ್‌ನಲ್ಲಿ ರಶ್ಮಿಕಾ ಕಠಿಣ ತರಬೇತಿ ಪಡೆಯುತ್ತಿದ್ದಾರೆ.
Rashmika Mandanna: ಹನಿಮೂನ್ ಮೂಡ್ನಲ್ಲಿ ರಶ್ಮಿಕಾ-ವಿಜಯ್; ಕ್ಯೂಟ್ ಫೋಟೊ ವೈರಲ್
ಅವಳೇ ಒಂದು ಆಯುಧ ಎಂದ ನಿರ್ದೇಶಕ
'ಮೈಸಾ' ಚಿತ್ರದಲ್ಲಿ ರಶ್ಮಿಕಾ ಅವರು 'ಗೋಂಡ್' (Gond) ಸಮುದಾಯದ ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರವೀಂದ್ರ ಪುಲ್ಲೆ ನಿರ್ದೇಶನದ ಮತ್ತು ಅಜಯ್ ಹಾಗೂ ಅನಿಲ್ ಸಯ್ಯಪುರೆಡ್ಡಿ ನಿರ್ಮಾಣದ ಈ ಸಿನಿಮಾ ರಶ್ಮಿಕಾ ಅವರ ವೃತ್ತಿಜೀವನದಲ್ಲಿ ಒಂದು ದೊಡ್ಡ ತಿರುವು ನೀಡುವ ನಿರೀಕ್ಷೆಯಿದೆ. ರಶ್ಮಿಕಾ ಅವರ ಮಾರ್ಷಲ್ ಆರ್ಟ್ಸ್ ತರಬೇತಿಯ ಫೋಟೋಗಳನ್ನು ಹಂಚಿಕೊಂಡಿರುವ ನಿರ್ದೇಶಕರು, "ಗಾಯಗಳಿಂದ ಬರೆಯಲ್ಪಟ್ಟ ಯುದ್ಧವಿದು... ಅವಳೇ ಒಂದು ಆಯುಧ" ಎಂದು ಅವರ ಪಾತ್ರದ ತೀವ್ರತೆಯನ್ನು ವರ್ಣಿಸಿದ್ದಾರೆ.
ತೆರೆಯ ಮೇಲೆ ತಮ್ಮ ಫೈಟಿಂಗ್ ಸನ್ನಿವೇಶಗಳು ಮತ್ತು ಪಂಚ್‌ಗಳು ಅತ್ಯಂತ ನೈಜವಾಗಿ ಕಾಣುವಂತೆ ಮಾಡಲು ರಶ್ಮಿಕಾ ಈ ದೈಹಿಕ ಶ್ರಮ ಹಾಕುತ್ತಿದ್ದಾರೆ. ಅವರ ಈ ಬದ್ಧತೆ ಕಂಡು ಇಡೀ ಚಿತ್ರತಂಡ ಅಚ್ಚರಿಪಟ್ಟಿದೆಯಂತೆ. ಇಂತಹದ್ದೊಂದು ಭಿನ್ನ ಅವತಾರದಲ್ಲಿ ರಶ್ಮಿಕಾ ಅವರನ್ನು ನೋಡುವುದಕ್ಕೆ ಫ್ಯಾನ್ಸ್ ಕೂಡ ಕಾತರದಿಂದ ಕಾಯುತ್ತಿದ್ದಾರೆ.
ಮೈಸಾ ಜೊತೆಗೆ ಪತಿ ವಿಜಯ್ ದೇವರಕೊಂಡ ಜೊತೆಗೆ ʻರಣಬಾಲಿʼ ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ಶಾಹಿದ್ ಕಪೂರ್, ಕೃತಿ ಸನೋನ್ ಜೊತೆ ರಶ್ಮಿಕಾ ಮಂದಣ್ಣ ನಟಿಸಿರುವ ಕಾಕ್‌ಟೇಲ್ 2 ಸಿನಿಮಾವು ಜೂನ್ 19ರಂದು ತೆರೆಗೆ ಬರಲಿದೆ.