ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻರಾಮಾಯಣʼ ಸಿನಿಮಾ ನೋಡಿ ಅಳುತ್ತಿದ್ದ ಯಶ್‌ ಮಗ ಯಥರ್ವ್‌; ಅಚ್ಚರಿ ವಿಚಾರ ಬಿಚ್ಚಿಟ್ರು ನಟಿ ಸಾಯಿ ಪಲ್ಲವಿ

Ramayana Movie: ʻರಾಮಾಯಣʼ ಚಿತ್ರದಲ್ಲಿ ರಾವಣನಾಗಿ ಯಶ್‌ ಅಬ್ಬರಿಸಿರುವುದನ್ನು ಕಂಡು ಅವರ ಮಗ ಯಥರ್ವ್ ಭಾವುಕನಾಗಿ ಕಣ್ಣೀರಿಟ್ಟಿದ್ದಾನೆ. ಲಂಕೇಶನಾಗಿ ಜಟಾಯು ಹಕ್ಕಿಯ ರೆಕ್ಕೆ ಕತ್ತರಿಸುವ ದೃಶ್ಯವನ್ನು ನೈಜವೆಂದು ನಂಬಿದ ಯಥರ್ವ್‌, ಅಪ್ಪನಿಗೆ ಮುಗ್ಧವಾಗಿ ಬುದ್ಧಿವಾದ ಹೇಳಿದ ಸಂಗತಿಯನ್ನು ನಟಿ ಸಾಯಿ ಪಲ್ಲವಿ ಬಹಿರಂಗಪಡಿಸಿದ್ದಾರೆ.

ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ನಟ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಆದರೆ, ತೆರೆಮೇಲೆ ಅಪ್ಪನ ನೆಗೆಟಿವ್ ಶೇಡ್ ಪಾತ್ರವನ್ನು ನೋಡಿದ ಯಶ್ ಅವರ ಪುಟ್ಟ ಮಗ ಯಥರ್ವ್, ತಂದೆಯ ನಟನೆಯನ್ನು ಕಂಡು ಕಣ್ಣೀರಿಟ್ಟ ಘಟನೆಯೊಂದು ಇದೀಗ ಬಯಲಾಗಿದೆ. ಸಂದರ್ಶನವೊಂದರಲ್ಲಿ ಸ್ವತಃ ಯಶ್ ಹಾಗೂ ಚಿತ್ರದಲ್ಲಿ ಸೀತೆಯಾಗಿ ನಟಿಸಿರುವ ಸಾಯಿ ಪಲ್ಲವಿ ಈ ಕ್ಯೂಟ್ ಪ್ರಸಂಗವನ್ನು ಹಂಚಿಕೊಂಡಿದ್ದಾರೆ.

ನಾನು ಹೀರೋನೇ ಆಗಿರಬೇಕು

ಸುಮಾ ಕನಕಾಲ ಅವರೊಂದಿಗಿನ ಸಂದರ್ಶನದಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ ಯಶ್, "ಸಾಮಾನ್ಯವಾಗಿ ಮಕ್ಕಳಿಗೆ ಅಜ್ಜ-ಅಜ್ಜಿಯರು ರಾಮಾಯಣದ ಕಥೆಗಳನ್ನು ಹೇಳುತ್ತಾರೆ. ನನ್ನ ಮಗನ ದೃಷ್ಟಿಯಲ್ಲಿ ನಾನೆಂದಿಗೂ ಹೀರೋ. ಆದರೆ ಅವನಿಗೆ ಈಗ ರಾಮಾಯಣದ ಕಥೆ ತಿಳಿದಿದೆ. ಹೀಗಾಗಿ ಅವನು ನನ್ನ ಬಳಿ ಬಂದು, 'ಡ್ಯಾಡಿ, ನೀನು ರಾವಣನಾ? ರಾಮ ಅಲ್ವಾ?' ಎಂದು ಪ್ರಶ್ನೆ ಮಾಡುತ್ತಾನೆ. ಅವನ ಈ ಮುಗ್ಧ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ನಾನು ಗಲಿಬಿಲಿಗೊಂಡಿದ್ದೆ" ಎಂದು ತಮಗಾದ ಅನುಭವವನ್ನು ನಗುತ್ತಲೇ ವಿವರಿಸಿದರು.

ಮಧ್ಯೆ ಪ್ರವೇಶಿಸಿದ ಸಾಯಿ ಪಲ್ಲವಿ

ಲಾಸ್ ಏಂಜಲೀಸ್‌ನಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಮೊದಲ ಬಾರಿಗೆ ಸಿನಿಮಾ ವೀಕ್ಷಿಸಿದ ಕ್ಷಣವನ್ನು ನೆನೆಪಿಸಿಕೊಂಡ ಯಶ್, "ಅವರ ಬದುಕಿನಲ್ಲಿ ಇದು ಮೊದಲ ಸಿನಿಮಾ ಅನುಭವವಾಗಿತ್ತು. ಸರಿ-ತಪ್ಪು, ಪರಸ್ಪರ ಗೌರವಿಸುವುದು ಹೇಗೆ ಎಂದು ಕಲಿಯುತ್ತಿರುವ ಈ ವಯಸ್ಸಿನಲ್ಲಿ, ಪರದೆಯ ಮೇಲಿನ ದೃಶ್ಯಗಳನ್ನು ಕಂಡು ಮಗ ಸಿಕ್ಕಾಪಟ್ಟೆ ಆಶ್ಚರ್ಯಚಕಿತನಾಗಿದ್ದ. ಅವನಲ್ಲಿ ಅಸಂಖ್ಯಾತ ಪ್ರಶ್ನೆಗಳು ಮೂಡಿದ್ದವು" ಎಂದು ಯಶ್ ಹೇಳುತ್ತಿದ್ದಂತೆಯೇ, ನಟಿ ಸಾಯಿ ಪಲ್ಲವಿ ಮಧ್ಯಪ್ರವೇಶಿಸಿ ಆ ಭಾವುಕ ಕ್ಷಣವನ್ನು ಸಂಪೂರ್ಣವಾಗಿ ಬಿಚ್ಚಿಟ್ಟರು.

Yash-Radhika Pandit: ರಾಕಿ ಭಾಯ್‌‌ಗೆ ಮದುವೆ ಆನಿವರ್ಸರಿ ಸಂಭ್ರಮ; ಯಶ್-ರಾಧಿಕಾ ಜೋಡಿ ದಾಂಪತ್ಯ ಜೀವನಕ್ಕೆ ಈಗ ಎಂಟರ ನಂಟು!

ಹಕ್ಕಿಯ ರೆಕ್ಕೆಯನ್ನು ಕತ್ತರಿಸಬಾರದಿತ್ತು ಡಾಡಾ

"ನಾವು ಥಿಯೇಟರ್‌ನಿಂದ ಹೊರಬಂದಾಗ ಯಥರ್ವ್ ಜೋರಾಗಿ ಅಳುತ್ತಿರುವುದನ್ನು ನಾನು ನೋಡಿದೆ. ಅವನು ಅಳುತ್ತಲೇ ಯಶ್ ಬಳಿ ಬಂದು, 'ಅಪ್ಪಾ, ನೀವು ಹಕ್ಕಿಯನ್ನು ಕೊಂದಿದ್ದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ನೀವು ಕೇವಲ ನಟನೆ ಮಾಡುತ್ತಿರಬಹುದು, ಆದರೂ ಹಕ್ಕಿಯನ್ನು ಸಾಯಿಸಿದ್ದು ತಪ್ಪು. ನೀವು ಆ ರೀತಿ ಮಾಡಬಾರದಿತ್ತು ಡಾಡಾ' ಎಂದು ಮುಗ್ಧವಾಗಿ ಅಪ್ಪನಿಗೆ ಬುದ್ಧಿವಾದ ಹೇಳುತ್ತಿದ್ದ" ಎಂದು ಸಾಯಿ ಪಲ್ಲವಿ ಆ ಕ್ಷಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.

ರಾಮಾಯಣದಲ್ಲಿ ರಾವಣ ಜಟಾಯು ಪಕ್ಷಿಯ ರೆಕ್ಕೆ ಕತ್ತರಿಸುವ ದೃಶ್ಯವನ್ನು ನೋಡಿ, ಅಪ್ಪ ನಿಜವಾಗಿಯೂ ಆ ಕೆಲಸ ಮಾಡಿದ್ದಾರೆ ಎಂದು ಬೇಸರಗೊಂಡ ಯಥರ್ವ್‌ನ ಈ ಮುಗ್ಧ ಪ್ರತಿಕ್ರಿಯೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಮನಗೆದ್ದಿದೆ.