ನಿತೇಶ್ ತಿವಾರಿ ನಿರ್ದೇಶನದ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸಿದ್ದಾರೆ. ಆದರೆ, ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಅವರ ಆಯ್ಕೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಹಾಗೂ ಟ್ರೋಲ್ಗಳು ಕೇಳಿಬಂದಿದ್ದವು.
ಇತ್ತೀಚೆಗೆ ನಡೆದ ‘ವಿ ದಿ ವುಮೆನ್’ ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತೆ ಬರ್ಖಾ ದತ್ ಅವರೊಂದಿಗೆ ಮಾತನಾಡಿದ ಸಾಯಿ ಪಲ್ಲವಿ, ಈ ಎಲ್ಲಾ ಟೀಕೆಗಳಿಗೆ ತಕ್ಕ ಉತ್ತರ ನೀಡುವುದರ ಜೊತೆಗೆ ತಮ್ಮ ಸಿನಿಮಾ ಪಯಣ, ಸಿದ್ಧಾಂತ ಮತ್ತು ‘ನೋ ಮೇಕಪ್’ ನಿಲುವಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಅಭಿಪ್ರಾಯಗಳು ಕೇವಲ ಅಭಿಪ್ರಾಯಗಳಷ್ಟೇ
ಸೀತೆಯ ಪಾತ್ರಕ್ಕೆ ತಮ್ಮ ಆಯ್ಕೆ ಹಾಗೂ ರೂಪದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಕಾಮೆಂಟ್ಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಸಾಮಾಜಿಕ ಜಾಲತಾಣಗಳಲ್ಲಿ ‘ಸೀತಾಮಾತೆ ಇನ್ನೂ ಎಷ್ಟು ಸುಂದರವಾಗಿ ಕಾಣಬೇಕು’ ಎಂಬಂತಹ ಮಾತುಗಳು ಕೇಳಿಬರುತ್ತಿರುವುದು ನನಗೆ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ಅಂತಹ ಮಾತುಗಳು ನಿಮ್ಮ ಆತ್ಮಸ್ಥೈರ್ಯವನ್ನು ಅಲುಗಾಡಿಸಿದರೆ, ದೋಷ ಇರುವುದು ನಿಮ್ಮಲ್ಲೇ ಎಂದರ್ಥ. ಆಗ ನೀವು ಇನ್ನಷ್ಟು ಗಟ್ಟಿಯಾಗಬೇಕಾಗುತ್ತದೆ. ಒಬ್ಬ ಮನುಷ್ಯ ಎಷ್ಟು ಸುರಕ್ಷಿತ ಭಾವ ಹೊಂದಿರಲು ಸಾಧ್ಯವೋ ನಾನು ಅಷ್ಟರಮಟ್ಟಿಗೆ ದೃಢವಾಗಿದ್ದೇನೆ. ಅಭಿಪ್ರಾಯಗಳು ಕೇವಲ ಅಭಿಪ್ರಾಯಗಳಷ್ಟೇ, ಬೆಳೆಯುವ ಹಂತದಲ್ಲಿ ನಿಮಗೆ ಯಾವುದಾದರೂ ಅಭದ್ರತೆ ಕಾಡಿದರೆ, ಆಂತರಿಕವಾಗಿ ಬಲಶಾಲಿಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು. ಆಗ ಇಡೀ ಜಗತ್ತನ್ನೇ ಎದುರಿಸಬಹುದು ಅಥವಾ ಅನಗತ್ಯ ಮಾತುಗಳಿಗೆ ಕಿವಿಗೊಡದೆ ಸುಮ್ಮನಿರಬಹುದು” ಎಂದು ಉತ್ತರ ನೀಡಿದ್ದಾರೆ.
‘ರಾಮಾಯಣ’ ಸಿನಿಮಾವನ್ನು ಕೊಂಡಾಡಿದ ಕೇಂದ್ರ ಸಚಿವ ಅಮಿತ್ ಶಾ; ಚಿತ್ರತಂಡವನ್ನು ಭೇಟಿಯಾಗಿ ಅಭಿನಂದನೆ
ನನ್ನಲ್ಲೂ ಕೆಲವು ಬದಲಾವಣೆಗಳಾಗಿವೆ
ಇದೇ ವೇಳೆ ಸೀತೆಯ ಪಾತ್ರವು ತಮ್ಮ ವೈಯಕ್ತಿಕ ಜೀವನದ ಮೇಲೆ ಬೀರಿದ ಪ್ರಭಾವದ ಬಗ್ಗೆಯೂ ಮಾತನಾಡಿದ ಪಲ್ಲವಿ, “ನನ್ನ ಜೀವನವು ಯಾವಾಗಲೂ ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಕ್ಕೆ ಸಾಗುವುದರಲ್ಲೇ ಇರುತ್ತದೆ. ಪ್ರತಿಯೊಂದು ಪಾತ್ರವೂ ನಮ್ಮಲ್ಲಿ ಒಂದಿಷ್ಟು ಬದಲಾವಣೆ ತರುತ್ತದೆ, ಏಕೆಂದರೆ ಆ ಪಾತ್ರದ ಒಂದು ಭಾಗವನ್ನು ನಾವು ನಮ್ಮ ಹೃದಯದಲ್ಲಿ ಹೊತ್ತು ಸಾಗುತ್ತೇವೆ. ನನ್ನಲ್ಲೂ ಕೆಲವು ಬದಲಾವಣೆಗಳಾಗಿವೆ, ಆದರೆ ಅವೆಲ್ಲವೂ ತೀರಾ ವೈಯಕ್ತಿಕವಾದವು. ಅದು ಜಗತ್ತಿಗೆ ಅರ್ಥವಾಗುವ ಅಥವಾ ತಿಳಿಯಲೇಬೇಕಾದ ವಿಷಯವಲ್ಲ” ಎಂದು ತಿಳಿಸಿದರು.
ಸಾಯಿ ಪಲ್ಲವಿಗೆ ಮ್ಯಾನೇಜರ್ ಇಲ್ಲ!
ಚಿತ್ರರಂಗದಲ್ಲಿ ಮ್ಯಾನೇಜರ್ ಅಥವಾ ಸಹಾಯಕರ ತಂಡವಿಲ್ಲದೆ ಕೆಲಸ ಮಾಡುವ ತಮ್ಮ ವಿಶಿಷ್ಟ ನಿರ್ಧಾರದ ಕುರಿತು ವಿವರಿಸಿದ ಸಾಯಿ ಪಲ್ಲವಿ, “ಸಿನಿಮಾ ವಿಷಯಕ್ಕೆ ಬಂದಾಗ ಎಲ್ಲವೂ ಸರಳವಾಗಿರಬೇಕು. ನಿರ್ದೇಶಕರು ಮತ್ತು ಸಹನಟರಿಗೆ ನಾವು ಸುಲಭವಾಗಿ ಸಂಪರ್ಕಕ್ಕೆ ಸಿಗುವಂತಿರಬೇಕು. ಕಥೆಗಳನ್ನು ತಲುಪಿಸುವ ಪ್ರಕ್ರಿಯೆಯನ್ನು ಕಠಿಣ ಅಥವಾ ಭಯ ಹುಟ್ಟಿಸುವಂತಾಗಿಸಬಾರದು. ನನ್ನ ಎಲ್ಲಾ ಕೆಲಸಗಳನ್ನು ನಾನೇ ಮಾಡಿಕೊಳ್ಳಲು ಇಷ್ಟಪಡುವ ವ್ಯಕ್ತಿ ನಾನು, ಹಾಗಾಗಿ ಮಧ್ಯವರ್ತಿಗಳಿಲ್ಲದೆ ಕೆಲಸ ಮಾಡುವ ಈ ವಿಧಾನ ನನಗೆ ಸರಿಹೊಂದುತ್ತದೆ” ಎಂದು ಹೇಳಿದರು.
ಸಾಯಿ ಪಲ್ಲವಿ ನೋ ಮೇಕಪ್ ರೂಲ್ಸ್
ಇನ್ನು ತಮ್ಮ ‘ನೋ ಮೇಕಪ್’ ಲುಕ್ ಹಾಗೂ ಚಿತ್ರರಂಗದಲ್ಲಿನ ಸೌಂದರ್ಯದ ಮಾನದಂಡಗಳ ಬಗ್ಗೆ ಮಾತನಾಡುತ್ತಾ, “ಪುರುಷ ನಟರು ಸಾಮಾನ್ಯವಾಗಿ ವಿಭಿನ್ನ ದೇಹಗಾತ್ರ, ವಯಸ್ಸಿನಲ್ಲೂ ಕಾಣಿಸಿಕೊಂಡು ಚಿತ್ರರಂಗದಲ್ಲಿ ಉಳಿದುಕೊಳ್ಳುತ್ತಾರೆ. ಆದರೆ ಮಹಿಳೆಯರನ್ನು ನೋಡಿದಾಗ, ಅವರು ಯಾವಾಗಲೂ ಪರಿಪೂರ್ಣವಾಗಿಯೇ ಕಾಣಬೇಕು ಎಂಬ ಅಲಿಖಿತ ನಿಯಮವಿದೆ. ಹಿಂದೆ ಕೆಲವು ನಟಿಯರು ತಾವು ಇದ್ದಂತೆಯೇ ತೆರೆಯ ಮೇಲೆ ಕಾಣಿಸಿಕೊಳ್ಳುವುದನ್ನು ನಾನು ನೋಡಿದ್ದರೆ, ಬಹುಶಃ ನನಗೆ ನನ್ನ ರೂಪದ ಬಗ್ಗೆ ಅಷ್ಟೊಂದು ಹಿಂಜರಿಕೆ ಇರುತ್ತಿರಲಿಲ್ಲ. ಆದ್ದರಿಂದ, ನನ್ನ ಸರದಿ ಬಂದಾಗ ಮತ್ತು ನಾನು ಒಂದು ಸ್ಥಾನಕ್ಕೆ ತಲುಪಿದಾಗ, ಯಾವುದು ಮೊದಲೇ ಇರಬೇಕಿತ್ತು ಎಂದು ನಾನು ಭಾವಿಸಿದ್ದೆನೋ ಅದಕ್ಕಾಗಿ ನಾನು ನಿಲ್ಲಬೇಕು ಎಂದು ನಿರ್ಧರಿಸಿದೆ” ಎಂದು ಸಾಯಿ ಪಲ್ಲವಿ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ.