ಸ್ಯಾಂಡಲ್‌ವುಡ್ ನಟ ದಿಗಂತ್ ಅಭಿನಯದ ʻರುದ್ರ ಕಾಲʼ ಸಿನಿಮಾದ ಶೀರ್ಷಿಕೆಯನ್ನು ಬಹುಭಾಷಾ ನಟಿ ಸಮಂತಾ ಬಿಡುಗಡೆ ಮಾಡಿ, ಈ ಸಿನಿಮಾವು ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ರಮೇಶ್ ನಾಯ್ಕ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಗೋಪಿ ಅವರು ನಿರ್ದೇಶಿಸುತ್ತಿದ್ದಾರೆ. ಟೈಟಲ್‌ನಿಂದಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಮುಹೂರ್ತವು ಏಪ್ರಿಲ್ 22ರಂದು ನಡೆಯಲಿದೆ.
ಸಮಂತಾಗೆ ಧನ್ಯವಾದ ಹೇಳಿದ ದಿಗಂತ್
"ನಿರ್ದೇಶಕ ಗೋಪಿ ಕಥೆ ಹೇಳುತ್ತಿದ್ದಾಗಲೇ ನಾನು ಈ ಚಿತ್ರದಲ್ಲಿ ನಟಿಸಬೇಕು ಎಂದು ನಿರ್ಧಾರ ಮಾಡಿದೆ. ಹಾಗೆಯೇ, ನಮ್ಮ ʻರುದ್ರ ಕಾಲʼ ಚಿತ್ರದ ಟೈಟಲ್ ಸಮಂತಾ ಅವರಿಂದ ರಿಲೀಸ್ ಆಗಿರುವುದು ತುಂಬಾ ಸಂತೋಷವಾಗಿದೆ. ಅವರಿಗೆ ಧನ್ಯವಾದಗಳು. ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ. ನಿರ್ದೇಶಕ ಗೋಪಿ, ನಿರ್ಮಾಪಕ ರಮೇಶ್ ನಾಯ್ಕ್ ಮತ್ತು ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ" ಎಂದು ನಟ ದಿಗಂತ್ ಹಾರೈಸಿದ್ದಾರೆ.
ಒಂದೇ ಹಂತದಲ್ಲಿ ಶೂಟಿಂಗ್
"ನಮ್ಮ ಸಿನಿಮಾದ ಟೈಟಲ್ ರಿಲೀಸ್ ಮಾಡಿದ ಸಮಂತಾ ಅವರಿಗೆ ಧನ್ಯವಾದಗಳು ಇದನ್ನು ನಮ್ಮ ಚಿತ್ರದ ಶುಭಾರಂಭ ಎಂದು ಭಾವಿಸುತ್ತೇನೆ. ʻರುದ್ರ ಕಾಲʼ ಚಿತ್ರದ ಚಿತ್ರೀಕರಣ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ. ಒಂದೇ ಹಂತದ ಚಿತ್ರೀಕರಣ ನಡೆಸಿ, ಅದಷ್ಟು ಬೇಗ ತೆರೆಗೆ ತರುವ ಆಲೋಚನೆ ಇದೆ. ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಕಥೆ ಕೇಳಿ ಮೆಚ್ಚಿಕೊಂಡು ನಟಿಸಲು ಒಪ್ಪಿದ ನಟ ದಿಗಂತ್ ಹಾಗೂ ನಿರ್ಮಾಣ ಮಾಡುತ್ತಿರುವ ರಮೇಶ್ ನಾಯ್ಕ್ ಅವರಿಗೆ ಧನ್ಯವಾದಗಳು" ಎನ್ನುತ್ತಾರೆ ನಿರ್ದೇಶಕ ಗೋಪಿ.
Maa Inti Bangaram: ಸಮಂತಾ- ದೂದ್ ಪೇಡಾ ದಿಗಂತ್ ನಟನೆಯ 'ಮಾ ಇಂಟಿ ಬಂಗಾರಂ' ; ರಿಲೀಸ್ ಡೇಟ್ ಅನೌನ್ಸ್
"ಡೈರೆಕ್ಟರ್ ಗೋಪಿ ಹೇಳಿದ ಕಥೆ ನನಗೆ ತುಂಬಾ ಫ್ರೆಶ್ ಎಂದು ಅನಿಸಿತು. ನಮ್ಮ ಪ್ರೊಡಕ್ಷನ್‌ನಲ್ಲಿ ಇಂಥ ಚಿತ್ರ ಬರುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಟೈಟಲ್ ರಿಲೀಸ್ ಮಾಡಿದ ನಟಿ ಸಮಂತಾ ಹಾಗೂ ನಟ ದಿಗಂತ್ ಅವರಿಗೆ ಧನ್ಯವಾದಗಳು" ಎನ್ನುತ್ತಾರೆ ನಿರ್ಮಾಪಕ ರಮೇಶ್ ನಾಯ್ಕ್. ಈ ಚಿತ್ರಕ್ಕೆ ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಲೈನ್ ಪ್ರೊಡ್ಯೂಸರ್ ಆಗಿ ನವೀನ್ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಶಿವರಾಜ್ ಕಾರ್ಯ ನಿರ್ವಹಿಸುತ್ತಿದ್ದಾರೆ. ರಮೇಶ್ ಕೆ ಪೂಜಾರಿ ಈ ಚಿತ್ರದ ಸಹ ನಿರ್ದೇಶಕರು.