ಭಾರತೀಯ ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಅವರ ಜನ್ಮದಿನದ ಅಂಗವಾಗಿ, ಅವರ ಅಧಿಕೃತ ಜೀವನಚರಿತ್ರೆ 'ಎಂಪ್ರೆಸ್: ದಿ ಡೆಫಿನಿಟಿವ್ ಬಯಾಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮುಖಪುಟವನ್ನು ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ಅನಾವರಣಗೊಳಿಸಿದ್ದಾರೆ. ಧೀರಜ್ ಕುಮಾರ್ ರಚಿಸಿರುವ ಈ ಕೃತಿಯನ್ನು ವೆಸ್ಟ್‌ಲ್ಯಾಂಡ್ ಬುಕ್ಸ್ ಪ್ರಕಟಿಸುತ್ತಿದ್ದು, 2026ರ ಅಂತ್ಯದ ವೇಳೆಗೆ ಭಾರತದಾದ್ಯಂತ ಬಿಡುಗಡೆಯಾಗಲಿದೆ.
ಈ ಪುಸ್ತಕದ ಪ್ರಮುಖ ವೈಶಿಷ್ಟ್ಯಗಳೇನು?
ಸ್ಟಾರ್‌ಗಳಿದ್ದಾರೆ, ಸೂಪರ್‌ಸ್ಟಾರ್‌ಗಳೂ ಇದ್ದಾರೆ, ಆದರೆ ಶ್ರೀದೇವಿ ಅವರ ಸ್ಥಾನವೇ ಸಂಪೂರ್ಣ ಭಿನ್ನ! ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ಭಾರತದ ಪ್ರಥಮ ಪ್ಯಾನ್-ಇಂಡಿಯಾ ಲೇಡಿ ಸೂಪರ್‌ಸ್ಟಾರ್ ಆದ ಶ್ರೀದೇವಿ, ಅಪೂರ್ವ ಸೌಂದರ್ಯದ ಜೊತೆಗೆ ಅದ್ಭುತ ನಟನಾ ಸಾಮರ್ಥ್ಯವನ್ನೂ ಮೈಗೂಡಿಸಿಕೊಂಡಿದ್ದರು. ಸರಳ ಹಾಗೂ ಯಾವುದೇ ಪಾತ್ರಕ್ಕೂ ಸೈ ಎನಿಸುವ ವ್ಯಕ್ತಿತ್ವ ಅವರದ್ದಾಗಿತ್ತು. ಇದನ್ನೆಲ್ಲಾ ಪುಸ್ತಕದಲ್ಲಿ ದಾಖಲಿಸಲಾಗಿದೆ.
ಸುಮಾರು 10 ವರ್ಷಗಳ ಸುದೀರ್ಘ ಸಂಶೋಧನೆ, ಅಪರೂಪದ ದಾಖಲೆಗಳು ಹಾಗೂ ಪ್ರತ್ಯಕ್ಷದರ್ಶಿಗಳ ಅನುಭವಗಳನ್ನು ಆಧರಿಸಿ ಈ ಕೃತಿ ಸಿದ್ಧಗೊಂಡಿದೆ. ಭಾರತದ ಅಗ್ರಮಾನ್ಯ ತಾರೆಯರು ಬರೆದಿರುವ 7 ಮುನ್ನುಡಿಗಳು, ಅಮಿತಾಭ್ ಬಚ್ಚನ್ ಮತ್ತು ಜಾವೇದ್ ಅಖ್ತರ್ ಅವರ ವಿಶೇಷ ಬರಹಗಳು ಹಾಗೂ 150ಕ್ಕೂ ಹೆಚ್ಚು ಅಪರೂಪದ ಛಾಯಾಚಿತ್ರಗಳು ಇದರಲ್ಲಿ ಒಳಗೊಂಡಿವೆ. ಐದು ಭಾಷೆಗಳಲ್ಲಿ 300 ಸಿನಿಮಾಗಳನ್ನೊಳಗೊಂಡ ಶ್ರೀದೇವಿ ಅವರ ಐದು ದಶಕಗಳ ವೃತ್ತಿಜೀವನ, ಗಲ್ಲಾಪೆಟ್ಟಿಗೆ ಮೇಲಿನ ಹಿಡಿತ, ಬೆಳ್ಳಿತೆರೆಯ ಹಿಂದಿನ ಮಾನವೀಯ ಮುಖ ಮತ್ತು ಅವರ ಅಕಾಲಿಕ ನಿಧನದವರೆಗಿನ ಸಮಗ್ರ ಪಯಣವನ್ನು ಕೃತಿ ಕಟ್ಟಿಕೊಡುತ್ತದೆ.
ಈ ಪುಸ್ತಕದ ಬಗ್ಗೆ ಗಣ್ಯರ ಮಾತು
ಪುಸ್ತಕದ ಕುರಿತು ಮಾತನಾಡಿದ ಲೇಖಕ ಧೀರಜ್ ಕುಮಾರ್, "ಶ್ರೀದೇವಿ ಅವರ ಅಸಾಧಾರಣ ಪಯಣವನ್ನು ದಾಖಲಿಸಿರುವುದು ಒಂದು ಅಪರೂಪದ ಗೌರವ. ಈ ಕೃತಿಗೆ ಅಗತ್ಯ ಮಾಹಿತಿ ಮತ್ತು ಅಪರೂಪದ ಛಾಯಾಚಿತ್ರಗಳನ್ನು ಒದಗಿಸಿ ಬೆಂಬಲ ನೀಡಿದ ಬೋನಿ ಕಪೂರ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ತಿಳಿಸಿದ್ದಾರೆ. ವೆಸ್ಟ್‌ಲ್ಯಾಂಡ್ ಬುಕ್ಸ್ ಪ್ರಕಾಶಕಿ ಕಾರ್ತಿಕಾ ವಿ. ಕೆ. ಮಾತನಾಡಿ, "ಈ ಪುಸ್ತಕವು ಅತ್ಯಂತ ಸಮಗ್ರ ಹಾಗೂ ವಿಶ್ವಾಸಾರ್ಹ ದಾಖಲೆಯಾಗಿ ಹೊರಹೊಮ್ಮಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Priyanka Chopra: ಮಗಳಿಗೆ 'ಸರ್ವ ಮಂಗಲ ಮಾಂಗಲ್ಯೇʼ ಶ್ಲೋಕ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ; ನೆಟ್ಟಿಗರಿಂದ ಮೆಚ್ಚುಗೆ
ಶ್ರೀದೇವಿ ಅವರ ಅದ್ಭುತ ಪ್ರತಿಭೆಯನ್ನು ಸ್ಮರಿಸಿರುವ ಖ್ಯಾತ ನಟ ಅಮಿತಾಭ್ ಬಚ್ಚನ್, "ಅವರು ಅಸದೃಶ ಪ್ರತಿಭೆಯ ಸಾಕಾರಮೂರ್ತಿ" ಎಂದು ಬಣ್ಣಿಸಿದರೆ, ಶ್ರೀದೇವಿ ಅವರ ಅದ್ಭುತ ಕಾಮಿಡಿ ಟೈಮಿಂಗ್, ನೃತ್ಯ ಹಾಗೂ ಸ್ಟಾರ್ ಪವರ್ ಅನ್ನು ನಟಿ ಶಬಾನಾ ಅಜ್ಮಿ ಶ್ಲಾಘಿಸಿದ್ದಾರೆ. ತೆಲುಗು ನಟ ಬ್ರಹ್ಮಾನಂದಂ ಹಾಗೂ ನಿರ್ದೇಶಕ ಅನೀಸ್ ಬಾಜ್ಮಿ ಸಹ ಶ್ರೀದೇವಿಯ ಕೊಡುಗೆಯನ್ನು ಸ್ಮರಿಸಿದ್ದಾರೆ.