ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರ ರಾಜಕೀಯ ಪ್ರವೇಶದ ಕುರಿತು ತಮಿಳುನಾಡಿನಲ್ಲಿ ಭಾರಿ ಚರ್ಚೆ ಶುರುವಾಗಿದೆ. ತಮಿಳುನಾಡು ಮುಖ್ಯಮಂತ್ರಿ, ನಟ ‘ದಳಪತಿ’ ವಿಜಯ್ ಅವರೊಂದಿಗೆ ತ್ರಿಷಾ ಕೂಡ ಸಕ್ರಿಯ ರಾಜಕಾರಣಕ್ಕೆ ಧುಮುಕಲಿದ್ದಾರೆ ಎಂಬ ಬಲವಾದ ಸುಳಿವನ್ನು ಅವರ ಅಭಿಮಾನಿಗಳು ನೀಡಿದ್ದಾರೆ.
ಈ ನಿಟ್ಟಿನಲ್ಲಿ ತ್ರಿಷಾ ಅಭಿಮಾನಿಗಳ ಗುಂಪೊಂದು 'ಇಳಯ ಪುರಚ್ಚಿ ತಲೈವಿ ತ್ರಿಷಾ' ಎಂಬ ಹೊಸ ವೇದಿಕೆಯನ್ನು ಅಧಿಕೃತವಾಗಿ ಆರಂಭಿಸಿದ್ದು, ಜನಕಲ್ಯಾಣ ಕಾರ್ಯಗಳ ಮೂಲಕ ನಟಿಯನ್ನು ರಾಜಕೀಯ ರಂಗಕ್ಕೆ ಕರೆತರಲು ಸಿದ್ಧತೆ ನಡೆಸಿದೆ.
ಜಯಲಲಿತಾಗೆ ಹೋಲಿಸಿದ ಫ್ಯಾನ್ಸ್
ನೂತನ ವೇದಿಕೆಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತ್ರಿಷಾ ಅವರಿಗೆ ‘ಇಳಯ ಪುರಚ್ಚಿ ತಲೈವಿ’ ಎಂಬ ಬಿರುದು ನೀಡುವ ಮೂಲಕ, ಅವರನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಹೋಲಿಸಿದೆ. ತಮಿಳುನಾಡಿನಲ್ಲಿ ಜಯಲಲಿತಾ ಅವರು 'ಪುರಚ್ಚಿ ತಲೈವಿ' ಎಂದೇ ಜನಪ್ರಿಯರಾಗಿದ್ದರು.
ಜಯಲಲಿತಾ ಅವರ ದಿಟ್ಟ ವ್ಯಕ್ತಿತ್ವ ಮತ್ತು ನಾಯಕತ್ವದ ಗುಣಗಳನ್ನೇ ತ್ರಿಷಾ ಕೂಡ ಹೊಂದಿದ್ದು, ಅವರನ್ನು "ಜಯಲಲಿತಾ ಅವರ ನಿಜವಾದ ಉತ್ತರಾಧಿಕಾರಿ" ಎಂದು ವೇದಿಕೆ ಬಣ್ಣಿಸಿದೆ. ಇಬ್ಬರ ನಡುವಿನ ವ್ಯಕ್ತಿತ್ವದ ಸಾಮ್ಯತೆಗಳನ್ನು ಗಮನಿಸಿಯೇ ಈ ಬಿರುದನ್ನು ನೀಡಲಾಗಿದೆ ಎಂದು ಅಭಿಮಾನಿಗಳು ಸ್ಪಷ್ಟಪಡಿಸಿದ್ದಾರೆ.
ಜಯಲಲಿತಾ ಅವರಂತಹ ದಿಟ್ಟ ವ್ಯಕ್ತಿತ್ವದ ಅಗತ್ಯವಿದೆ
ಜಯಲಲಿತಾ ಅವರ ಆಡಳಿತ ವೈಖರಿಯನ್ನು ಸ್ಮರಿಸಿರುವ ಅಭಿಮಾನಿಗಳ ವೇದಿಕೆ, "ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಪ್ರತಿಯೊಂದು ಮಾಹಿತಿಯೂ ಅವರ ಬೆರಳ ತುದಿಯಲ್ಲಿರುತ್ತಿತ್ತು. ಅವರ ಕಟ್ಟುನಿಟ್ಟಿನ ಆಡಳಿತಕ್ಕೆ ಹೆದರಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಕರ್ತವ್ಯ ಲೋಪ ಎಸಗುವ ಅಧಿಕಾರಿಗಳಿಗೆ ಕೆಳಹಂತದ ಹುದ್ದೆ ನೀಡಿ ತಪ್ಪಿನ ಅರಿವಾಗುವಂತೆ ಮಾಡುತ್ತಿದ್ದ ಅಂತಹ ದಿಟ್ಟ ವ್ಯಕ್ತಿತ್ವದ ಅಗತ್ಯ ಇಂದು ತಮಿಳುನಾಡಿಗಿದೆ" ಎಂದು ಅಭಿಪ್ರಾಯಪಟ್ಟಿದೆ.
Vijay Trisha: ಜಗನ್ ಮೋಹನ್ ರೆಡ್ಡಿ ಕುಟುಂಬದ ಮದುವೆಯಲ್ಲಿ ಒಟ್ಟಾಗಿ ಬಂದ ವಿಜಯ್-ತ್ರಿಷಾ!
ವಿಜಯ್ ಜೊತೆ ತ್ರಿಷಾ ಕೈಜೋಡಿಸಲಿ
ಇದೇ ವೇಳೆ ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಕಾರ್ಯವೈಖರಿಯನ್ನು ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವಿಜಯ್ ಸರ್ಕಾರ ಈಗಾಗಲೇ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ತ್ರಿಷಾ ಅವರೂ ಕೈಜೋಡಿಸಿದರೆ ತಮಿಳುನಾಡಿನಲ್ಲಿ ಮತ್ತೊಮ್ಮೆ ಜಯಲಲಿತಾ ಮಾದರಿಯ ದಕ್ಷ ಆಡಳಿತವನ್ನು ನೋಡಬಹುದು ಎಂದು ವೇದಿಕೆ ವಿಶ್ವಾಸ ವ್ಯಕ್ತಪಡಿಸಿದೆ. ತ್ರಿಷಾ ಅವರ ಆಪ್ತವಲಯದಲ್ಲಿ ಇರುವವರಿಗೆ ಅವರೊಳಗಿನ ಈ ನಾಯಕತ್ವದ ಗುಣಗಳ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದೂ ಪ್ರಕಟಣೆಯಲ್ಲಿ ಪ್ರತಿಪಾದಿಸಲಾಗಿದೆ.
ತ್ರಿಷಾ ಅವರತ್ತ ಎಲ್ಲರ ಚಿತ್ತ
ತಮ್ಮ ಈ ರಾಜಕೀಯ ಅಭಿಯಾನದ ಮೊದಲ ಹೆಜ್ಜೆಯಾಗಿ ಅಭಿಮಾನಿಗಳು 'ಇಳಯ ಪುರಚ್ಚಿ ತಲೈವಿ ತ್ರಿಷಾ ಪೇರವೈ' ಮೂಲಕ ಸಮಾಜಮುಖಿ ಮತ್ತು ಜನಕಲ್ಯಾಣ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಈ ಸೇವಾ ಕಾರ್ಯಗಳು ಸಿಎಂ ವಿಜಯ್ ಅವರೊಂದಿಗೆ ತ್ರಿಷಾ ಅವರ ರಾಜಕೀಯ ಪಯಣಕ್ಕೆ ಭದ್ರ ಬುನಾದಿ ಹಾಕಲಿವೆ ಎಂಬುದು ಅಭಿಮಾನಿಗಳ ಆಶಯವಾಗಿದೆ. ಸದ್ಯ ಅಭಿಮಾನಿಗಳ ಈ ನಡೆ ತಮಿಳುನಾಡು ರಾಜಕೀಯ ಮತ್ತು ಚಿತ್ರರಂಗದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಸ್ವತಃ ತ್ರಿಷಾ ಅವರು ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.