ಮುಂಬೈ ಗ್ಲಾಮರ್ ಜಗತ್ತಿನಲ್ಲಿ ಸೆಲೆಬ್ರಿಟಿಗಳ ಹಿಂದೆ ಓಡುವ ಪಾಪರಾಜಿಗಳು ಕೆಲವೊಮ್ಮೆ ಮಿತಿ ಮೀರಿ ವರ್ತಿಸುವ ಮೂಲಕ ವಿವಾದಕ್ಕೆ ಈಡಾಗುತ್ತಿರುತ್ತಾರೆ. ಇತ್ತೀಚೆಗೆ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಬಾಲಿವುಡ್ ನಟಿ ಜರೀನ್ ಖಾನ್‌ಗೆ ಒಂದು ಕಹಿ ಅನುಭವ ಎದುರಾಗಿದೆ. ಅಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಉಡುಪುಗಳನ್ನು ಅವರು ಪರಿಶೀಲಿಸುತ್ತಿದ್ದಾಗ, ಛಾಯಾಗ್ರಾಹಕನೊಬ್ಬ ಅಸಭ್ಯವಾಗಿ ವರ್ತಿಸುತ್ತಾ.. "ಒಮ್ಮೆ ಟ್ರಯಲ್ ಮಾಡಿ ನೋಡಬಹುದಲ್ಲವೇ" ಎಂದು ನಾಲಗೆ ಹರಿಬಿಟ್ಟಿದ್ದಾನೆ
ಗರಂ ಆದ ಜರೀನ್ ಖಾನ್!
ಪಾಪರಾಜಿ ಕ್ಯಾಮೆರಾಮನ್ ಮಾಡಿದ ಕಾಮೆಂಟ್‌ಗೆ ಶಾಕ್ ಆದ ಜರೀನ್ ಖಾನ್, ತಕ್ಷಣವೇ ಆತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಏನು? ನಿಮ್ಮ ಮುಂದೆಯೇ ಟ್ರಯಲ್ ಮಾಡಬೇಕಾ? ನನ್ನ ಬಳಿ ಇಂತಹ ಫಾಲ್ತು ಮಾತುಗಳನ್ನು ಆಡಬೇಡಿ. ಏಕೆಂದರೆ ನಾನು ಇದನ್ನು ಸಹಿಸುವ ವ್ಯಕ್ತಿಯಲ್ಲ, ಅರ್ಥವಾಯಿತೇ? ನೀವೆಲ್ಲರೂ ನಿಮ್ಮ ಮಿತಿಯಲ್ಲಿರಿ. ಮಹಿಳೆಯರಿಗೆ ಹೇಗೆ ಗೌರವ ನೀಡಬೇಕು ಎಂಬುದನ್ನು ತಿಳಿದುಕೊಳ್ಳಿ" ಎಂದು ಎಲ್ಲರ ಮುಂದೆಯೇ ಗಟ್ಟಿಯಾಗಿ ಆವಾಜ್ ಹಾಕಿದ್ದಾರೆ! ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನೆಟ್ಟಿಗರಿಂದ ಜರೀನ್‌ಗೆ ಭಾರಿ ಬೆಂಬಲ
ಈ ಘಟನೆಯ ಕುರಿತು ನೆಟ್ಟಿಗರು ಜರೀನ್ ಖಾನ್ ಅವರಿಗೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆಯರ ಆತ್ಮಗೌರವಕ್ಕಾಗಿ ಅವರು ತಕ್ಷಣವೇ ಪ್ರತಿಕ್ರಿಯಿಸಿದ ರೀತಿಗೆ ಹಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಎದುರಿಸುತ್ತಿರುವ ತೊಂದರೆಗಳ ಬಗ್ಗೆಯೂ ಇಂಟರ್ನೆಟ್‌ನಲ್ಲಿ ಚರ್ಚೆ ಆರಂಭವಾಗಿದೆ. ಸೆಲೆಬ್ರಿಟಿಗಳ ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಮತ್ತು ಈ ಪಾಪಾರಾಜಿಗಳು ತಮ್ಮ ವೃತ್ತಿಪರ ನೈತಿಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಪರಾಜಿಗಳ ವರ್ತನೆಯ ಬಗ್ಗೆ ವ್ಯಾಪಕ ಕಳವಳ
ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ನೇಹಾ ಧೂಪಿಯಾಗೂ ಇದೇ ರೀತಿ ಸಮಸ್ಯೆ ಎದುರಾಗಿತ್ತು. ಕೆಲ ಪಾಪರಾಜಿಗಳು 'ಬ್ಯಾಕ್ ಶಾಟ್ಸ್' (ಹಿಂದಿನಿಂದ ಫೋಟೋ) ತೆಗೆಯುವುದನ್ನು ಅವರು ತೀವ್ರವಾಗಿ ಖಂಡಿಸಿದ್ದರು. ಇಂತಹ ಫೋಟೋಗಳು ಅಪಮಾನಕಾರಿಯಾಗಿವೆ ಎಂದು ಹೇಳಿದ ಅವರು, ಇದನ್ನು ನಿಲ್ಲಿಸುವಂತೆ ಪದೇಪದೇ ಹೇಳಿ ಬೇಸತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
Govinda: ಭದ್ರತಾ ಸಿಬ್ಬಂದಿ ಮತ್ತು ಪಾಪರಾಜಿ ನಡುವೆ ವಾಗ್ವಾದ; ಕ್ಷಮೆಯಾಚಿಸಿದ ನಟ ಗೋವಿಂದ
ಯಾರು ಈ ಜರೀನ್ ಖಾನ್?
ಮಹಾರಾಷ್ಟ್ರ ಮೂಲದ ಜರೀನ್ ಖಾನ್, ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟರು. 2010ರಲ್ಲಿ ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಜೊತೆ 'ವೀರ್' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು. ನಟಿ ಕತ್ರಿನಾ ಕೈಫ್ ಅವರನ್ನು ಹೋಲುವಂತಿದ್ದ ಇವರು, ತಮ್ಮ ಮೊದಲ ಸಿನಿಮಾದಿಂದಲೇ ಚಿತ್ರರಂಗದ ಗಮನ ಸೆಳೆದರು. ಆ ಸಿನಿಮಾ ನಿರೀಕ್ಷಿತ ಯಶಸ್ಸು ಸಾಧಿಸದಿದ್ದರೂ ಜರೀನ್ ಅವರ ಲುಕ್ಸ್ ಎಲ್ಲರನ್ನೂ ಆಕರ್ಷಿಸಿತು.
ನಟಿ ಜರೀನ್ ಖಾನ್ ಆವಾಜ್!
ಆ ನಂತರ ಸಲ್ಮಾನ್ ಅವರ ಬ್ಲಾಕ್‌ಬಸ್ಟರ್ ಹಿಟ್ 'ರೆಡಿ' ಸಿನಿಮಾದಲ್ಲಿ ಪ್ರಮುಖ ಪಾತ್ರದ ಜೊತೆಗೆ, 'ಹೌಸ್‌ಫುಲ್ 2', 'ಹೇಟ್ ಸ್ಟೋರಿ 3' ನಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದರು. ಹಿಂದಿಯ ಜೊತೆಗೆ ತಮಿಳು, ಪಂಜಾಬಿ ಚಿತ್ರಗಳಲ್ಲಿ ರಂಜಿಸಿದ ಜರೀನ್ ತೆಲುಗು ಪ್ರೇಕ್ಷಕರಿಗೂ ಚಿರಪರಿಚಿತರು. 2019ರಲ್ಲಿ ಗೋಪಿಚಂದ್ ಹೀರೋ ಆಗಿ ನಟಿಸಿದ ಆಕ್ಷನ್ ಥ್ರಿಲ್ಲರ್ 'ಚಾಣಕ್ಯ' ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಇದರಲ್ಲಿ ಅವರು ನಿರ್ವಹಿಸಿದ ಏಜೆಂಟ್ ಜುಬೇದಾ ಪಾತ್ರ ಉತ್ತಮ ಹೆಸರು ತಂದುಕೊಟ್ಟಿತು.