ʻಬಿಗ್ ಬಾಸ್ʼ ವಿನ್ನರ್ ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದ್ದು, ಬಿರುಸಿನ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ವಿಶಿಷ್ಟ ಕಥಾಹಂದರದೊಂದಿಗೆ ಪ್ರೇಕ್ಷಕರ ಎದುರು ಬರಲು ಸಜ್ಜಾಗುತ್ತಿರುವ ಈ ಚಿತ್ರತಂಡಕ್ಕೀಗ ಮತ್ತೊಂದು ದೊಡ್ಡ ಬಲ ಸಿಕ್ಕಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾ ಮೂಲಕ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಖ್ಯಾತ ಬಹುಭಾಷಾ ನಟಿ ಅದಾ ಶರ್ಮಾ ಈ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಚಂದನವನಕ್ಕೆ ಭರ್ಜರಿಯಾಗಿ ರೀ-ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ನಟನೆಯ ʻರಣವಿಕ್ರಮʼ ಸಿನಿಮಾದಲ್ಲಿ ಅದಾ ನಟಿಸಿದ್ದರು.
"ಇಡೀ ಸೃಷ್ಟಿಯೇ ಪರಾಶಕ್ತಿಯ ಲೀಲೆ. ಹಾಲುಣಿಸುವವಳೂ ತಾಯಿ, ಮಣ್ಣು ಮುಕ್ಕಿಸುವವಳೂ ತಾಯಿ. ಆದರೆ ಹಾಲು ಯಾವುದು, ಮಣ್ಣು ಯಾವುದು ಅನ್ನುವುದರ ಅರಿವು ಪಡೆಯುವುದೇ ಇಡೀ ಬದುಕಿನ ಮಾಯೆ. ದಶ ಮಹಾವಿದ್ಯೆಯ ಸಾರವನ್ನು ಪರಿಚಯಿಸಲು ತಾಯಿ ರಾಮರಸದಲ್ಲಿ ಯಾವ ರೂಪ ತಾಳಿ ಬರಲಿದ್ದಾಳೆ? ಅದನ್ನು ಪರದೆಯ ಮೇಲೆಯೇ ನೋಡಿ ಸವಿಯಬೇಕು" ಎಂದು ಚಿತ್ರತಂಡ ಹೇಳಿಕೊಂಡಿದ್ದು, ಈ ಸಾಲುಗಳು ಚಿತ್ರದಲ್ಲಿನ ದೈವಿಕ ಹಾಗೂ ಶಕ್ತಿಶಾಲಿ ಕಥಾಹಂದರದ ಬಗ್ಗೆ ತೀವ್ರ ಕುತೂಹಲ ಕೆರಳಿಸಿವೆ.
ದೊಡ್ಡ ತಾರಾಗಣ ಇರುವ ರಾಮರಸ ಸಿನಿಮಾ
ಈ ಚಿತ್ರದಲ್ಲಿ ಕನ್ನಡದ ದೊಡ್ಡ ತಾರಾಬಳಗವೇ ಇದೆ. ‘ಬಿಗ್ ಬಾಸ್ ಕನ್ನಡ 10’ ವಿಜೇತ ಕಾರ್ತಿಕ್ ಮಹೇಶ್, ಪ್ರಜ್ವಲ್ ದೇವರಾಜ್, ಶರಣ್ ಹಾಗೂ ನಟಿ ಹೆಬ್ಬಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಇದು ಕೇವಲ ಆರಂಭವಷ್ಟೇ ಆಗಿದ್ದು, ಚಿತ್ರದಲ್ಲಿ ಇನ್ನೂ ಹಲವು ಅನಿರೀಕ್ಷಿತ ಸ್ಟಾರ್ ನಟ-ನಟಿಯರ ಪಾತ್ರಗಳಿದ್ದು, ಆ ವಿವರಗಳನ್ನು ಸದ್ಯಕ್ಕೆ ಚಿತ್ರತಂಡ ಸಸ್ಪೆನ್ಸ್ ಆಗಿ ಇರಿಸಿದೆ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಆ ಸರ್ಪ್ರೈಸ್‌ಗಳನ್ನು ರಿವೀಲ್ ಮಾಡುವುದಾಗಿ ತಂಡ ತಿಳಿಸಿದೆ.
‘ಜಿ ಸಿನಿಮಾಸ್ ಪ್ರೊಡಕ್ಷನ್’ ಹಾಗೂ ‘ಸೆವೆನ್ ಸ್ಟಾರ್ ಮೂವೀಸ್’ ಅಸೋಸಿಯೇಷನ್ ಸಹಯೋಗದಲ್ಲಿ ಖ್ಯಾತ ನಿರ್ದೇಶಕ-ನಿರ್ಮಾಪಕ ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಗುರು ದೇಶಪಾಂಡೆ ಅವರೇ ಈ ಪ್ರಾಜೆಕ್ಟ್‌ಗೆ ಕ್ರಿಯೇಟಿವ್ ಹೆಡ್ ಆಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ತಾಂತ್ರಿಕವಾಗಿಯೂ ಚಿತ್ರ ಅತ್ಯಂತ ಶ್ರೀಮಂತವಾಗಿದ್ದು, ಕೃಷ್ಣ ಕುಮಾರ್ (ಕೆ.ಕೆ.) ಅವರ ಛಾಯಾಗ್ರಹಣ, ಬಿ.ಜೆ. ಭರತ್ ಅವರ ಸಂಗೀತ ಸಂಯೋಜನೆ ಹಾಗೂ ಅರ್ಜುನ್ ಕಿಟ್ಟು ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್, ನಾಗಾರ್ಜುನ್ ಶರ್ಮಾ ಮತ್ತು ಪುನೀತ್ ರಂಗಸ್ವಾಮಿ ಸಾಹಿತ್ಯ ಬರೆದಿದ್ದಾರೆ.
ಸದ್ಯ ಗ್ರಾಫಿಕ್ಸ್ , ಎಡಿಟಿಂಗ್ ಹಾಗೂ ಸೌಂಡ್ ಡಿಸೈನಿಂಗ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಅತ್ಯುತ್ತಮ ತಾಂತ್ರಿಕ ಗುಣಮಟ್ಟದ ಸಿನಿಮಾವನ್ನು ಕನ್ನಡಿಗರಿಗೆ ಉಣಬಡಿಸಲು ಸಿದ್ಧತೆಗಳು ನಡೆಯುತ್ತಿವೆ. ಶೀಘ್ರದಲ್ಲೇ ‘ರಾಮರಸ’ ಚಿತ್ರದ ಅಧಿಕೃತ ಟೀಸರ್ ಹಾಗೂ ಪಾತ್ರಗಳ ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಚಿತ್ರತಂಡ ಅಧಿಕೃತವಾಗಿ ಹಂಚಿಕೊಳ್ಳಲಿದೆ.