ಕನ್ನಡ ಚಿತ್ರರಂಗದ ‘ಸುಪ್ರೀಂ ಹೀರೋ’ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ ʻರಾಶಿʼ ಚಿತ್ರದ ಮೊದಲ ಹಾಡು ʻಮೊದಲ ಪ್ರೀತಿ..ʼ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಂಗೀತ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ. ನಿರ್ಮಿಸಿರುವ ಈ ಚಿತ್ರವನ್ನು ವಿಜಯ್ ಪಾಳೇಗಾರ್ ನಿರ್ದೇಶಿಸಿದ್ದಾರೆ.
ಹಾಡಿಗೆ ಅರ್ಮಾನ್ ಮಲಿಕ್ ಧ್ವನಿ
ವಿಶೇಷವೆಂದರೆ, ನಿರ್ದೇಶಕ ವಿಜಯ್ ಪಾಳೇಗಾರ್ ಅವರೇ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರುವ ಈ ಮೆಲೋಡಿ ಗೀತೆಗೆ ಬಾಲಿವುಡ್‌ನ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ತಂದೆಯಂತೆಯೇ ನೃತ್ಯದಲ್ಲಿ ಪಳಗಿರುವ ಆದಿತ್ಯ ಶಶಿಕುಮಾರ್ ಅವರು ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಈ ಹಾಡಿಗೆ ಆಕರ್ಷಕವಾಗಿ ಹೆಜ್ಜೆ ಹಾಕಿದ್ದಾರೆ. 'ಡಿ ಬೀಟ್ಸ್' ಆಡಿಯೋ ಸಂಸ್ಥೆಯ ಮೂಲಕ ಹೊರಬಂದಿರುವ ಈ ಹಾಡು ಯೂಟ್ಯೂಬ್‌ನಲ್ಲಿ ನಿರೀಕ್ಷೆಗೂ ಮೀರಿ ವೀಕ್ಷಣೆ ಪಡೆದು ಟ್ರೆಂಡಿಂಗ್‌ನಲ್ಲಿದೆ.
ಹಾಡುಗಳಿಗೆ ಧ್ವನಿಯಾದ ಖ್ಯಾತ ಗಾಯಕರು
ಕಾಮಿಡಿ, ಪ್ರೇಮ ಹಾಗೂ ಕೌಟುಂಬಿಕ ಕಥಾಹಂದರವನ್ನು ಹೊಂದಿರುವ ʻರಾಶಿʼ ಚಿತ್ರಕ್ಕೆ ನಿರ್ಮಾಪಕ ಅಖಿಲೇಶ್ ಕಥೆ ಒದಗಿಸಿದ್ದು, ನಿರ್ದೇಶಕರೇ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಗೀತೆಗಳಿದ್ದು, ಐದು ಹಾಡುಗಳು ಕಥೆಯ ಭಾಗವಾಗಿದ್ದರೆ ಮತ್ತೊಂದು ವಿಶೇಷ ಪ್ರಚಾರ ಗೀತೆಯಾಗಿ ಮೂಡಿಬರಲಿದೆ. ಈ ಹಾಡುಗಳಿಗೆ ಅರ್ಮಾನ್ ಮಲಿಕ್ ಜೊತೆಗೆ ಕುನಾಲ್ ಗಾಂಜಾವಾಲ, ವಿಜಯ್ ಯೇಸುದಾಸ್, ಅನುರಾಧಾ ಭಟ್, ಶರಣ್, ಮಳವಳ್ಳಿ ಮಹದೇವಸ್ವಾಮಿ ಹಾಗೂ ʻಸಿಟಿ ಲೈಟ್ಸ್ʼ ಖ್ಯಾತಿಯ ಅಂಕಿತ್ ಸೇರಿದಂತೆ ಹಲವು ಮುಂಚೂಣಿ ಗಾಯಕರು ಧ್ವನಿ ನೀಡಿದ್ದಾರೆ.
ಶೀಘ್ರದಲ್ಲೇ ತೆರೆಗೆ ಬರಲಿದೆ
ಈಗಾಗಲೇ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಬಿಡುಗಡೆಗೆ ಸಜ್ಜಾಗುತ್ತಿರುವ ಈ ಚಿತ್ರಕ್ಕೆ ನವೀನ್ ಸೂರ್ಯ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ ಹಾಗೂ ಮಹೇಶ್ ಸಾತನೂರು ಅವರ ಕಲಾ ನಿರ್ದೇಶನವಿದೆ. ಆದಿತ್ಯ ಶಶಿಕುಮಾರ್ ಅವರಿಗೆ ನಾಯಕಿಯಾಗಿ ಸಮೀಕ್ಷಾ ಜೋಡಿಯಾಗಿದ್ದಾರೆ. ಉಳಿದಂತೆ ರಮೇಶ್ ಇಂದಿರಾ, ತಬಲಾ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಕರಿ ಸುಬ್ಬು, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ವರ್ಧನ್ ತೀರ್ಥಹಳ್ಳಿ, ಉಗ್ರಂ ರವಿ ಮತ್ತು ಭಜರಂಗಿ ಪ್ರಸನ್ನ ಮುಂತಾದ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಈ ಸಿನಿಮಾವು ಶೀಘ್ರದಲ್ಲೇ ತೆರೆಗೆ ಬರಲಿದೆ.