ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಿರಿಯ ನಟ ಶಶಿಕುಮಾರ್ ಪುತ್ರ ಆದಿತ್ಯ ಅಭಿನಯದ ‘ರಾಶಿ’ ಚಿತ್ರದ ಟ್ರೇಲರ್‌ ಬಿಡುಗಡೆ; ನವೆಂಬರ್ 13ಕ್ಕೆ ತೆರೆಗೆ

Rashi Kannada Movie: ಶಶಿಕುಮಾರ್‌ ಪುತ್ರ ಆದಿತ್ಯ ನಟನೆಯ ʻರಾಶಿʼ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ತಾಯಿ-ಮಗನ ಅವಿನಾಭಾವ ಪ್ರೀತಿ ಮತ್ತು ಹಳ್ಳಿ ಸೊಗಡಿನ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ವಿಜಯ್ ಪಾಳೇಗಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರವು ನವೆಂಬರ್ 13ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.

ಹಿರಿಯ ನಟ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ ‘ರಾಶಿ’ ಚಿತ್ರದ ಟ್ರೇಲರ್ ರಿಲೀಸ್‌ ಆಗಿದೆ. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ನಟ ಶಶಿಕುಮಾರ್ ಹಾಗೂ ಖ್ಯಾತ ಹಿರಿಯ ನಟಿ ತಾರಾ ಅನುರಾಧಾ ಅವರು ಚಿತ್ರದ ಟ್ರೇಲರ್ ಅನಾವರಣಗೊಳಿಸಿ, ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಡಿ ಬೀಟ್ಸ್ ಸಂಸ್ಥೆಯ ಮುಖ್ಯಸ್ಥೆ ಶೈಲಜಾ ನಾಗ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಚಿತ್ರವು ದೊಡ್ಡ ಮಟ್ಟದ ಯಶಸ್ಸು ಕಾಣಲೆಂದು ಆಶಿಸಿದರು.

ತಾಯಿ ಮತ್ತು ಮಗನ ನಡುವಿನ ಗಾಢವಾದ ಪ್ರೀತಿ

ಅಖಿಲೇಶ್ ನಿರ್ಮಾಣದ ಈ ಚಿತ್ರಕ್ಕೆ ವಿಜಯ್ ಪಾಳೇಗಾರ್ ಕಥೆ, ಚಿತ್ರಕಥೆ ಹೆಣೆದು ನಿರ್ದೇಶನ ಮಾಡುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಡಿ ಬೀಟ್ಸ್ ಸಂಸ್ಥೆಯ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಈಗಾಗಲೇ ಸಂಗೀತ ಪ್ರೇಮಿಗಳ ಗಮನ ಸೆಳೆದು ಜನಪ್ರಿಯತೆ ಗಳಿಸಿವೆ. ತಾಯಿ ಮತ್ತು ಮಗನ ನಡುವಿನ ಗಾಢವಾದ ಪ್ರೀತಿ, ಅವಿನಾಭಾವ ಬಾಂಧವ್ಯ ಹಾಗೂ ಕೌಟುಂಬಿಕ ಸಂಬಂಧಗಳ ಎಳೆಯನ್ನಿಟ್ಟುಕೊಂಡು ಈ ಚಿತ್ರವನ್ನು ಕಟ್ಟಿಕೊಡಲಾಗಿದೆ. ನಾಯಕ ಆದಿತ್ಯ ಶಶಿಕುಮಾರ್ 'ಶಿವು' ಎಂಬ ಮುಗ್ಧ ಹಳ್ಳಿಯ ಹುಡುಗನಾಗಿ ಕಾಣಿಸಿಕೊಂಡಿದ್ದರೆ, ನಾಯಕಿ ಸಮೀಕ್ಷಾ 'ರಾಧ್ಯಾ' ಎಂಬ ಕಾಲೇಜು ಯುವತಿಯಾಗಿ ಬಣ್ಣಹಚ್ಚಿದ್ದಾರೆ.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ಅಖಿಲೇಶ್, ಸಿನಿಮಾ ಮೇಲಿನ ಅಪಾರ ಪ್ರೀತಿಯಿಂದ ಈ ಯೋಜನೆ ಕೈಗೆತ್ತಿಕೊಂಡಿದ್ದು, ಇಡೀ ತಂಡ ಶ್ರದ್ಧೆಯಿಂದ ಶ್ರಮಿಸಿದೆ ಎಂದರು. ಆರಂಭದಿಂದಲೂ ನಟ ಶಶಿಕುಮಾರ್ ಅವರು ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿದ್ದನ್ನು ಸ್ಮರಿಸಿದ ಅವರು, ಶೈಲಜಾ ನಾಗ್ ಅವರ ಸಲಹೆ-ಸಹಕಾರ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ತಾರಾ ಅನುರಾಧಾ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಬಳಿಕ ಮಾತನಾಡಿದ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ವಿಜಯ್ ಪಾಳೇಗಾರ್, ಕಾಲೇಜು ದಿನಗಳ ಕನಸನ್ನು ಈ ಚಿತ್ರದ ಮೂಲಕ ಸಾಕಾರಗೊಳಿಸಿಕೊಂಡಿದ್ದು, ತಾಯಿ-ಮಗನ ಎಮೋಷನಲ್ ಕಥೆಯನ್ನು ಇಲ್ಲಿ ಹೇಳಲಾಗಿದೆ, ಟ್ರೇಲರ್‌ನಲ್ಲಿ ಕೇವಲ ಝಲಕ್ ಮಾತ್ರ ತೋರಿಸಲಾಗಿದ್ದು, ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಶಿಕುಮಾರ್‌ ಪುತ್ರ ಆದಿತ್ಯ ಅಭಿನಯದ ‘ರಾಶಿ’ ಚಿತ್ರದ ಹಾಡಿಗೆ ಬಾಲಿವುಡ್‌ ಗಾಯಕ ಅರ್ಮಾನ್‌ ಮಲಿಕ್‌ ಧ್ವನಿ; ‘ಮೊದಲ ಪ್ರೀತಿ’ ಸಾಂಗ್‌ಗೆ ಉತ್ತಮ ರೆಸ್ಪಾನ್ಸ್‌

ಆದಿತ್ಯಗೆ ಹಳ್ಳಿ ಹುಡುಗನ ಪಾತ್ರ

ತಮ್ಮ ಪಾತ್ರದ ಕುರಿತು ಮಾತನಾಡಿದ ನಾಯಕ ನಟ ಆದಿತ್ಯ ಶಶಿಕುಮಾರ್, "ತಂದೆಯ ಸಾಧನೆಯೇ ತಮಗೆ ಸದಾ ಸ್ಫೂರ್ತಿಯಾಗಿದ್ದು, ಅವರಂತೆಯೇ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಹಂಬಲವಿದೆ. ಚಿತ್ರದಲ್ಲಿನ ಮುಗ್ಧ ಹಳ್ಳಿ ಹುಡುಗನ ಪಾತ್ರ, ತಾಯಿಯ ಮಮತೆ ಮತ್ತು ಪ್ರೇಯಸಿಯ ಪ್ರೀತಿಯ ನಡುವೆ ಸಾಗುವ ಭಾವನಾತ್ಮಕ ತಿಕ್ಕಾಟ ಪ್ರೇಕ್ಷಕರನ್ನು ಕಟ್ಟಿಹಾಕಲಿದೆ" ಎಂದು ಹಂಚಿಕೊಂಡರು.

ವೀಣಾ ಸುಂದರ್‌ಗೆ ಧನ್ಯವಾದ ಹೇಳಿದ್ದೇಕೆ?

ನಾಯಕಿ ಸಮೀಕ್ಷಾ ಮಾತನಾಡಿ, "ಕಿರುತೆರೆಯಿಂದ ಬೆಳ್ಳಿತೆರೆಗೆ ಪ್ರವೇಶಿಸಿರುವುದು ಸಂತಸ ತಂದಿದೆ, ಹದಿಹರೆಯದಲ್ಲಿ ಕೈಗೊಳ್ಳುವ ತೀರ್ಮಾನಗಳು ಬದುಕಿನ ಮೇಲೆ ಬೀರುವ ಪರಿಣಾಮಗಳ ಸುತ್ತ ತಮ್ಮ ಪಾತ್ರ ಸಾಗುತ್ತದೆ ಎಂದು ತಿಳಿಸಿ, ತಮಗೆ ಮಾರ್ಗದರ್ಶನ ನೀಡಿದ ನಟಿ ವೀಣಾ ಸುಂದರ್ ಅವರಿಗೆ ಧನ್ಯವಾದ" ಎಂದರು.

ನಟ ಶಶಿಕುಮಾರ್‌ ಹೇಳಿದ್ದೇನು?

ಮುಖ್ಯ ಅತಿಥಿಯಾಗಿ ಮಾತನಾಡಿದ ಹಿರಿಯ ನಟ ಶಶಿಕುಮಾರ್, "ಚಿತ್ರದ ಟ್ರೇಲರ್‌ನಲ್ಲಿ ಹಳ್ಳಿಯ ಸಹಜ ಸೊಗಡು, ಆಕರ್ಷಕ ವೇಷಭೂಷಣ, ಲವಲವಿಕೆಯ ಹಾಸ್ಯ ಹಾಗೂ ಕುಟುಂಬ ಸಮೇತ ನೋಡಬಹುದಾದ ಸನ್ನಿವೇಶಗಳು ಎದ್ದು ಕಾಣುತ್ತಿವೆ. ದ್ವಿತೀಯಾರ್ಧದ ಭಾವನಾತ್ಮಕ ಸನ್ನಿವೇಶಗಳು ಮತ್ತು ಕ್ಲೈಮ್ಯಾಕ್ಸ್ ಪ್ರೇಕ್ಷಕರ ಹೃದಯ ಮುಟ್ಟಲಿದ್ದು, ಹೊಸ ಪ್ರಯತ್ನದೊಂದಿಗೆ ಬಂದಿರುವ ಪುತ್ರ ಆದಿತ್ಯನಿಗೆ ಹಾಗೂ ಕನ್ನಡ ಚಿತ್ರಕ್ಕೆ ಪ್ರೇಕ್ಷಕರು ಬೆಂಬಲ ನೀಡಬೇಕು" ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ನಟಿ ವೀಣಾ ಸುಂದರ್, ನಟರಾದ ತಬಲಾ ನಾಣಿ, ಮಂಜು ಪಾವಗಡ, ಹುಲಿ ಕಾರ್ತಿಕ್, ವಿನೋದ್ ಗೊಬ್ಬರಗಾಲ, ಉಗ್ರಂ ರವಿ, ಭಜರಂಗಿ ಪ್ರಸನ್ನ ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೌಟುಂಬಿಕ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿರುವ ‘ರಾಶಿ’ ಚಿತ್ರವು ನವೆಂಬರ್ 13ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.