ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌ʻಕೃಷ್ಣʼ ಅಜಯ್‌ ರಾವ್ ನಟನೆಯ ‘ಪಾರ್ಟ್ನರ್’ ಚಿತ್ರದ ಹೊಸ ಸಾಂಗ್‌ ರಿಲೀಸ್;‌ ಸ್ಯಾಂಡಲ್‌ವುಡ್‌ಗೆ ಮರಳಿದ ಗಾಯಕ ಕುನಾಲ್‌ ಗಾಂಜವಾಲಾ

'ಕೃಷ್ಣ' ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ನಟನೆಯ ಶಿವತೇಜಸ್ ನಿರ್ದೇಶನದ 'ಪಾರ್ಟ್ನರ್' ಚಿತ್ರದ 'ಅಮೋರಾ' ಹಾಡು ಬಿಡುಗಡೆಯಾಗಿದೆ. ಬಾಲಿವುಡ್‌ನ ಪ್ರಸಿದ್ಧ ಗಾಯಕ ಕುನಾಲ್ ಗಂಜಾವಾಲಾ ಈ ಗೀತೆಯ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಈ ಹಾಡಿಗೆ ನಕುಲ್ ಅಭಯಂಕರ್ ಸಂಗೀತವಿದೆ.

'ಕೃಷ್ಣ' ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ನಾಯಕ-ನಾಯಕಿಯಾಗಿ ನಟಿಸಿರುವ ‘ಪಾರ್ಟ್ನರ್’ (Partner) ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ವಿಶೇಷವೆಂದರೆ, ಈ ಹಾಡನ್ನು ಬಾಲಿವುಡ್‌ನ ಖ್ಯಾತ ಗಾಯಕ ಕುನಾಲ್‌ ಗಾಂಜವಾಲಾ ಹಾಡಿದ್ದಾರೆ. 2005ರಲ್ಲಿ ಮೂಡಿಬಂದ 'ಆಕಾಶ್' ಚಿತ್ರದ 'ನೀನೇ ನೀನೇ' ಹಾಡಿನ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ಕುನಾಲ್, ಸುಮಾರು ಏಳೆಂಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದರು. ಆನಂತರ ಅವರ ಹಾಡುಗಳ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಅವರು ‘ಪಾರ್ಟ್ನರ್’ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ.

ಜೆನ್‌ಝೀ ಪೀಳಿಗೆಯ ಪ್ರೀತಿ

‘ಮಳೆ’, ‘ಧೈರ್ಯಂ’ ಹಾಗೂ ‘ದಿಲ್ ಪಸಂದ್’ ಚಿತ್ರಗಳ ನಂತರ ನಿರ್ದೇಶಕ ಶಿವತೇಜಸ್ ಆಕ್ಷನ್-ಕಟ್ ಹೇಳಿರುವ ಈ ಚಿತ್ರವು, ತನ್ನ ವಿಶೇಷ ಹಾಡಿನ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇಂದಿನ ಜೆನ್‌ಝೀ (Gen-Z) ಪೀಳಿಗೆಯ ಪ್ರೀತಿ, ಬ್ರೇಕಪ್, ಲಿವಿಂಗ್ ಟುಗೆದರ್‌ನಂತಹ ವಿಷಯಗಳನ್ನು ಇಟ್ಟುಕೊಂಡು, "ಜೀವನ ಎಂದರೆ ಇಷ್ಟೇ ಅಲ್ಲ, ಅದನ್ನೂ ಮೀರಿದ್ದು ಏನೋ ಇದೆ" ಎಂಬ ಸಂದೇಶವನ್ನು ನಿರ್ದೇಶಕ ಶಿವತೇಜಸ್ ಈ ಚಿತ್ರದ ಮೂಲಕ ನೀಡಲು ಹೊರಟಿದ್ದಾರೆ.

ರಿಲೀಸ್ ಆಯ್ತು 'ಅಮೋರಾ' ಸಾಂಗ್

ಇತ್ತೀಚೆಗಷ್ಟೇ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿದ್ದ ಚಿತ್ರತಂಡ, ಇದೀಗ ಮೊದಲ ಹಾಡನ್ನು ಹೊರತಂದಿದೆ. ನಾಗಾರ್ಜುನ ಶರ್ಮಾ ರಚನೆಯ ಈ ‘ಅಮೋರಾ’ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದು, ಕುನಾಲ್ ಗಂಜಾವಾಲಾ ಅದ್ಭುತವಾಗಿ ಧ್ವನಿಯಾಗಿದ್ದಾರೆ. ಹಾಡಿನ ಬಿಡುಗಡೆ ವೇಳೆ ಮಾತನಾಡಿದ ನಟ ಅಜಯ್ ರಾವ್, "ಈ ಚಿತ್ರ ನನ್ನ ಮನಸ್ಸಿಗೆ ತುಂಬಾ ಹತ್ತಿರವಾದದ್ದು. ನನ್ನ ಹೃದಯದ ಒಂದು ಭಾಗವನ್ನೇ ಇದಕ್ಕಾಗಿ ನೀಡಿದ್ದೇನೆ. ಕೆಲವು ಸಿನಿಮಾಗಳು ಆರಂಭದಿಂದಲೇ ಮ್ಯಾಜಿಕ್ ಮಾಡುತ್ತವೆ ಅನಿಸುತ್ತದೆ, ಇದೂ ಸಹ ಅಂತಹದ್ದೇ ಚಿತ್ರ. ಈ ಸಿನಿಮಾದ ಮೇಲೆ ನನಗೆ ತುಂಬಾ ಭರವಸೆಯಿದೆ. ಕೌಟುಂಬಿಕ ಮೌಲ್ಯಗಳು ಹಾಗೂ ಭಾವುಕ ಸನ್ನಿವೇಶಗಳನ್ನು ಅತ್ಯುತ್ತಮವಾಗಿ ತೆರೆಯ ಮೇಲೆ ತರಲಾಗಿದೆ. ನನ್ನ ಶೈಲಿಯ ಸಿನಿಮಾಗಳಲ್ಲಿರುವ ಎಮೋಷನ್ ಇದರಲ್ಲಿದೆ" ಎಂದರು.

Krishna Ajay Rao: ಯುದ್ಧಕಾಂಡ ಸಿನಿಮಾಕ್ಕಾಗಿ ನಟ ಅಜಯ್‌ ರಾವ್‌ ಮಾಡಿ ಸಾಲ ಎಷ್ಟು ಗೊತ್ತಾ?

ನಾಯಕಿ ಬೃಂದಾ ಆಚಾರ್ಯ ಮಾತನಾಡಿ, "ನನ್ನ ಸಿನಿಮಾಗಳ ಹಾಡುಗಳ ಪೈಕಿ ‘ಅಮೋರಾ’ ಅತ್ಯುತ್ತಮ ಹಾಡು. ಒಂದೊಳ್ಳೆ ತಾಂತ್ರಿಕ ತಂಡದ ಜೊತೆ ಕೆಲಸ ಮಾಡಿದ ಅನುಭವ ನನಗಾಗಿದೆ" ಎಂದು ಹಂಚಿಕೊಂಡರು. "ದಿಲ್ ಪಸಂದ್ ಚಿತ್ರದ ಮೂಲಕ ನಿರ್ಮಾಪಕ ಹರೀಶ್ ಅವರ ಸ್ನೇಹ ಆರಂಭವಾಯಿತು. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ‘ಪಾರ್ಟ್ನರ್’ ಇರುತ್ತಾರೆ. ಅದನ್ನೇ ಆಧರಿಸಿ, ಇಂದಿನ ಜೆನ್-ಝೀ ಕಂಟೆಂಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಈ ಹಾಡನ್ನು ಕೂಡ ಯುವಜನತೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಸಿದ್ಧಪಡಿಸಲಾಗಿದೆ" ಎಂದರು ನಿರ್ದೇಶಕ ಶಿವತೇಜಸ್.

"ನಾನಿಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ನನ್ನ ತಾಯಿ ಮತ್ತು ಪತ್ನಿಯೇ ಕಾರಣ. ಇಡೀ ಕುಟುಂಬ ಸಮೇತ ಕುಳಿತು ನೋಡುವಂತಹ ಉತ್ತಮ ಸಿನಿಮಾವನ್ನು ನಿರ್ಮಿಸಿದ್ದೇವೆ. ಅಜಯ್ ರಾವ್ ಅವರ ಈ ಚಿತ್ರದ ಸ್ಯಾಟಲೈಟ್ ಹಕ್ಕಿಗೆ ಸಿಗುವ ಒಟ್ಟು ಮೊತ್ತದ ಶೇ. 50 ರಷ್ಟು ಹಣವನ್ನು ಆನಂದ್ ಆಡಿಯೋ ಸಂಸ್ಥೆಯೇ ನಮಗೆ ನೀಡಿದೆ" ಎಂದು ನಿರ್ಮಾಪಕ ಹರೀಶ್ ತಿಳಿಸಿದರು.

ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿ

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. 'ಹೆಚ್.ಪಿ.ಆರ್. ಎಂಟರ್‌ಪ್ರೈಸಸ್' ಬ್ಯಾನರ್ ಅಡಿಯಲ್ಲಿ ಹರೀಶ್ ದೇವಿತಂದೆ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಸುಜ್ಞಾನ್ ಅವರ ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನವಿದ್ದು, ಮುರಳಿ ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರದ ಒಟ್ಟು 4 ಹಾಡುಗಳಿಗೆ ಕವಿರಾಜ್, ಪ್ರಮೋದ್ ಮರವಂತೆ ಹಾಗೂ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ.