ವಿಶ್ವದಾದ್ಯಂತ ತಂದೆಯಂದಿರ ದಿನವನ್ನು (Father's Day) ಆಚರಿಸಲಾಗುತ್ತಿರುವ ಈ ವಿಶೇಷ ಸಂದರ್ಭದಲ್ಲೇ, ತಂದೆ-ಮಗನ ಅಪೂರ್ವ ಬಾಂಧವ್ಯದ ಕಥೆ ಹೊಂದಿರುವ ʻಫಾದರ್ಸ್ ಡೇʼ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ವಿಶೇಷವೆಂದರೆ, ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೂಡಿಬರುತ್ತಿರುವ ಮೊದಲ ಬೈಕರ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಖ್ಯಾತಿಯ ಅಜಿತ್ ಹಂದೆ ನಟಿಸಿದ್ದಾರೆ.
ಬೈಕ್ ರೈಡ್ ಅಯೋಜಿಸಿದ್ದ ಚಿತ್ರತಂಡ
ಟ್ರೇಲರ್ ಬಿಡುಗಡೆಯ ಜೊತೆಗೆ, ಚಿತ್ರತಂಡವು ಬೆಂಗಳೂರಿನಲ್ಲಿ 'Triumph Motorcycle' ಸಹಯೋಗದೊಂದಿಗೆ ಬೈಕ್ ರೈಡ್ ಅನ್ನು ಸಹ ಆಯೋಜಿಸಿತ್ತು. ಚಿತ್ರದ ನಟರು ಹಾಗೂ ತಾಂತ್ರಿಕ ವರ್ಗದವರು ಈ ರೈಡ್‌ನಲ್ಲಿ ಪಾಲ್ಗೊಂಡು ಸಿನಿಮಾದ ಪ್ರಚಾರಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದರು. ಸದ್ಯ ಬಿಡುಗಡೆಯಾಗಿರುವ ಟ್ರೇಲರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಇಬ್ಬರು ಬೈಕರ್‌ಗಳ ರೋಚಕ ಪಯಣದ ಕಥೆ
ಸ್ಯಾಂಡಲ್‌ವುಡ್‌ನಲ್ಲಿ ಚೊಚ್ಚಲ ಬಾರಿಗೆ ನಿರ್ದೇಶಕರಾಗಿರುವ ರಾಜಾರಾಮ್ ರಾಜೇಂದ್ರನ್ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಇಬ್ಬರು ಬೈಕರ್‌ಗಳ ಸುತ್ತ ಸಾಗುವ ಈ ಕಥೆಯಲ್ಲಿ, ಸಹಪಯಣಿಗರ ನಡುವಿನ ಬಾಂಧವ್ಯ ಹಾಗೂ ಯಾರು ಊಹಿಸದಂತಹ ರೋಚಕ ಕ್ಲೈಮ್ಯಾಕ್ಸ್ ಇರಲಿದೆ ಎಂದು ಭರವಸೆ ನೀಡುತ್ತಾರೆ ಅವರು.
ಹರ್ಷಿಲ್ ಕೌಶಿಕ್ ಜೊತೆ ಅಜಿತ್ ಹಂದೆ
'ಆಚಾರ್ & ಕೋ', 'ಸಪ್ತಸಾಗರದಾಚೆ ಎಲ್ಲೋ' ಹಾಗೂ 'ಅನಾಮಧೇಯ ಅಶೋಕ್ ಕುಮಾರ್' ಚಿತ್ರಗಳ ಮೂಲಕ ಗಮನ ಸೆಳೆದಿರುವ ಪ್ರತಿಭಾವಂತ ನಟ ಹರ್ಷಿಲ್ ಕೌಶಿಕ್ ಹಾಗೂ 'ಶ್ರೀರಸ್ತು ಶುಭಮಸ್ತು' ಸೇರಿದಂತೆ ಹಲವು ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ನಟ ಅಜಿತ್ ಹಂದೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹೆಸರಾಂತ ರ‍್ಯಾಪರ್ ಹಾಗೂ ಗಾಯಕ ALL OK, ಸಾಮ್ರಾಗ್ನಿ ರಾಜನ್, ಕ್ಷೇಮ ಶೆಟ್ಟಿ ಮತ್ತು ಬಾಸ್ಕಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಫಸ್ಟ್ ಟೈಮ್ "ಬ್ಲೂಸ್" ಶೈಲಿಯ ಸಂಗೀತ
'ELEVEN ELEMENTS' ಸಂಸ್ಥೆಯ ಲಾಂಛನದಲ್ಲಿ ರಾಜಾರಾಮ್ ರಾಜೇಂದ್ರನ್ ಅವರೇ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರದ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಸಂಗೀತ. ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಪಾಶ್ಚಾತ್ಯ ಮೂಲದ ಪ್ರಸಿದ್ಧ "ಬ್ಲೂಸ್" (Blues) ಶೈಲಿಯ ಸಂಗೀತವನ್ನು ಈ ಚಿತ್ರಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಜೋ ಪ್ಯಾನಿಕರ್ ಅವರ ಸಂಗೀತ ನಿರ್ದೇಶನ ಹಾಗೂ ಜ್ಯೋಲ್ಸ್ನಾ ಪ್ಯಾನಿಕರ್ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ಕ್ರಿಯೇಟಿವ್ ನಿರ್ಮಾಪಕರಾಗಿ ನಿಧಿ ಜೋಶಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಅವಿನಾಶ್ ಡ್ಯಾನಿಯಲ್ ಕೆಲಸ ಮಾಡಿದ್ದಾರೆ.
ಈಗಾಗಲೇ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿಕೊಂಡು ತೆರೆಗೆ ಬರಲು ಸಜ್ಜಾಗಿರುವ ʻಫಾದರ್ಸ್ ಡೇʼ ಚಿತ್ರವು ಪ್ರಸಿದ್ಧ ಪಿ.ವಿ.ಆರ್ - ಐನಾಕ್ಸ್ ಪಿಕ್ಚರ್ಸ್ (PVR-Inox Pictures) ಮೂಲಕ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಟ್ರೇಲರ್ ಮೂಲಕ ಭಾರಿ ಕುತೂಹಲ ಮೂಡಿಸಿರುವ ಈ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.