ನಾಗಾರ್ಜುನ ಪುತ್ರ ಅಕ್ಕಿನೇನಿ ಅಖಿಲ್ ಕೊನೆಗೂ ಬಾಕ್ಸ್ ಆಫೀಸ್‌ನಲ್ಲಿ ತಮ್ಮ ಬಹುದಿನಗಳ ಗೆಲುವಿನ ಬರವನ್ನು ನೀಗಿಸಿಕೊಂಡಿದ್ದಾರೆ. ಮುರಳಿ ಕಿಶೋರ್ ಅಬ್ಬೂರು ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ‘ಲೆನಿನ್’ ಸಿನಿಮಾದ ಮೂಲಕ ಅಖಿಲ್ ಭರ್ಜರಿ ಸಕ್ಸಸ್ ಸಾಧಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನದಿಂದಲೇ ಅತ್ಯಂತ ಪಾಸಿಟಿವ್ ಟಾಕ್ ಪಡೆದುಕೊಂಡಿರುವ ಈ ಸಿನಿಮಾ, ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಸುನಾಮಿ ಸೃಷ್ಟಿಸುತ್ತಿದೆ.
2 ದಿನಗಳಲ್ಲಿ 37 ಕೋಟಿ ರೂ. ಬಾಚಿದ 'ಲೆನಿನ್'
ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ಚಿತ್ರದ ಅಧಿಕೃತ ಕಲೆಕ್ಷನ್ ಪೋಸ್ಟರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಅದರಂತೆ, ʻಲೆನಿನ್ʼ ಸಿನಿಮಾ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 37.20 ಕೋಟಿ ರೂ. ಗಳಿಕೆಯನ್ನು ಬಾಚಿಕೊಳ್ಳುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದೆ. ಮೊದಲ ದಿನವೇ ವಿಶ್ವಾದ್ಯಂತ 16.70 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಅಖಿಲ್ ವೃತ್ತಿಜೀವನದಲ್ಲೇ ಅತಿ ದೊಡ್ಡ ಓಪನಿಂಗ್ ಪಡೆದಿದ್ದ ಈ ಸಿನಿಮಾ, ಈಗ ಕೇವಲ ಮೌತ್ ಟಾಕ್‌ನಿಂದಲೇ ವೀಕೆಂಡ್‌ನಲ್ಲಿ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.
ಅಖಿಲ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳು ಪೂರ್ಣಗೊಂಡಿದ್ದರೂ, ಅವರ ಕೆರಿಯರ್‌ನಲ್ಲಿ ಒಂದು ಕಮರ್ಷಿಯಲ್ ಬ್ಲಾಕ್‌ಬಸ್ಟರ್ ಗೆಲುವು ಬಾಕಿ ಇತ್ತು. ಆ ಎಲ್ಲಾ ಕೊರತೆಯನ್ನು ಈ ಒಂದೇ ಸಿನಿಮಾ ಪೂರ್ತಿಯಾಗಿ ಅಳಿಸಿಹಾಕಿದೆ. ಚಿತ್ರದಲ್ಲಿರುವ ಅದ್ಭುತ ಇಂಟರ್ವೆಲ್ ಟ್ವಿಸ್ಟ್‌ಗಳು ಹಾಗೂ ಹಿನ್ನೆಲೆಯಲ್ಲಿ ಬರುವ ಜೂನಿಯರ್ ಎನ್‌ಟಿಆರ್ ಅವರ ಪವರ್‌ಫುಲ್ ವಾಯ್ಸ್ ಓವರ್ ಸಿನಿಮಾದ ತೂಕವನ್ನು ಹೆಚ್ಚಿಸಿದ್ದು, ವೀಕೆಂಡ್‌ನಲ್ಲಿ ಪ್ರೇಕ್ಷಕರು ಥಿಯೇಟರ್‌ಗಳತ್ತ ಮುಗಿಬೀಳುವಂತೆ ಮಾಡಿದೆ.
ಖಳನಾಯಕನಾಗಿ ಅಬ್ಬರಿಸಿದ ಕನ್ನಡಿಗ ಪ್ರಮೋದ್
ಈ ಸಿನಿಮಾದಲ್ಲಿ ಅಖಿಲ್‌ಗೆ ಜೋಡಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸಿದ್ದರೆ, ಪ್ರಮುಖ ಪಾತ್ರಗಳಲ್ಲಿ ಶಿವಾಜಿ ಮತ್ತು ಈಶ್ವರಿ ರಾವ್ ಕಾಣಿಸಿಕೊಂಡಿದ್ದಾರೆ. ಆದರೆ, ಇವರೆಲ್ಲರಿಗಿಂತ ಹೆಚ್ಚಾಗಿ ಸಿನಿಪ್ರೇಕ್ಷಕರ ಗಮನ ಸೆಳೆದಿರುವುದು ಕನ್ನಡದ ಪ್ರತಿಭಾವಂತ ನಟ ಪ್ರಮೋದ್ ಪಂಜು! ಚಿತ್ರದಲ್ಲಿ 'ವಸಂತ್' ಎಂಬ ಪವರ್‌ಫುಲ್ ವಿಲನ್ ಪಾತ್ರದಲ್ಲಿ ನಟಿಸಿರುವ ಪ್ರಮೋದ್, ಇಡೀ ಕಥೆಗೆ ಭರ್ಜರಿ ಟ್ವಿಸ್ಟ್ ನೀಡಿದ್ದಾರೆ.
ವಿಶೇಷವಾಗಿ ಸಿನಿಮಾದ ಸೆಕೆಂಡ್ ಹಾಫ್‌ನಲ್ಲಿ ಬರುವ ಊಹಿಸಲಾಗದ ತಿರುವುಗಳು ಮತ್ತು ಪ್ರೀ-ಕ್ಲೈಮ್ಯಾಕ್ಸ್ ಹಿನ್ನೆಲೆಯಲ್ಲಿ ಬರುವ 'ಜಾತ್ರೆಯ ಆ್ಯಕ್ಷನ್ ಎಪಿಸೋಡ್‌ನಲ್ಲಿ ಪ್ರಮೋದ್ ಅವರ ನಟನೆಗೆ ಇಡೀ ಚಿತ್ರಮಂದಿರವೇ ಫಿದಾ ಆಗಿದೆ. ಆ್ಯಕ್ಷನ್ ಸೀನ್‌ಗಳ ಖದರ್ ಇರಲಿ ಅಥವಾ ಇಂಟೆನ್ಸ್ ಭಾವನೆಗಳನ್ನು ವ್ಯಕ್ತಪಡಿಸುವ ದೃಶ್ಯಗಳಿರಲಿ, ತಮ್ಮ ಸಹಜ ನಟನೆಯ ಮೂಲಕ ಪ್ರಮೋದ್ ತೆಲುಗು ಪ್ರೇಕ್ಷಕರಿಂದಲೂ ವಿಪರೀತ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ನಾಗಾರ್ಜುನ ಕಡೆಯಿಂದ ಸಿಕ್ತು ಚಪ್ಪಾಳೆ
ಜಾತ್ರೆಯ ಪ್ರಮುಖ ಸನ್ನಿವೇಶದಲ್ಲಿ ತಮ್ಮ ಪವರ್‌ಫುಲ್ ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಪ್ರಮೋದ್ ಪಂಜು ಅವರು ಹೀರೋ ಅಖಿಲ್‌ಗೆ ಸಮನಾಗಿ ಭರ್ಜರಿ ಪೈಪೋಟಿ ನೀಡಿದ್ದಾರೆ ಎಂದು ಸಿನಿಮಾ ವಿಮರ್ಶಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಪಾಲ್ಗೊಂಡಿದ್ದ ಅಕ್ಕಿನೇನಿ ನಾಗಾರ್ಜುನ ಅವರು ವೇದಿಕೆಯ ಮೇಲೆಯೇ ಪ್ರಮೋದ್ ಪಂಜು ಅವರ ನಟನೆಯನ್ನು ವಿಶೇಷವಾಗಿ ಕೊಂಡಾಡಿದ್ದಾರೆ.
ಕನ್ನಡದ ಹೆಮ್ಮೆಯ ಚಿತ್ರ ʻಗೀತಾ ಬ್ಯಾಂಗಲ್ ಸ್ಟೋರ್ʼ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಪ್ರಮೋದ್, ಇತ್ತೀಚೆಗೆ ಪ್ರಭಾಸ್ ನಟನೆಯ 'ಸಲಾರ್'ನಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ 'ಲೆನಿನ್' ಸಿನಿಮಾದ ದೊಡ್ಡ ಯಶಸ್ಸಿನ ಮೂಲಕ ಪ್ರಮೋದ್ ಪಂಜು ಅವರ ಖ್ಯಾತಿ ಟಾಲಿವುಡ್‌ನಲ್ಲಿ ಅವರ ಖ್ಯಾತಿ ಹೆಚ್ಚಾಗಿದೆ.