ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಮಕ್ಕಳ ಸಿನಿಮಾಗಳ ಸಂಖ್ಯೆ ತೀರಾ ವಿರಳವಾಗಿದೆ. ಅಪರೂಪಕ್ಕೆಂಬಂತೆ ಮೂಡಿಬರುವ ಇಂತಹ ಚಿತ್ರಗಳು ಸಿನಿರಸಿಕರ ಗಮನ ಸೆಳೆಯುತ್ತವೆ. ಇದೀಗ ಅದೇ ಸಾಲಿಗೆ ಸೇರಲು ಸಂಪೂರ್ಣ ಹೊಸ ಪ್ರತಿಭೆಗಳನ್ನೊಳಗೊಂಡ ತಂಡವೊಂದು ಸಜ್ಜಾಗಿದ್ದು, ‘ಅಂಬರ ಗುಡ್ಡ’ ಎಂಬ ವಿಭಿನ್ನ ಟೈಟಲ್‌ನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧತೆಯನ್ನ ನಡೆಸಿದೆ. ಅಂಬರ ಗುಡ್ಡದಲ್ಲಿ ಮಕ್ಕಳು ಎದುರಿಸುವ ರೋಚಕ ಸಾಹಸದ ಕಥೆಯನ್ನು ಹೊಂದಿರುವ ಈ ಚಿತ್ರದ ಅಧಿಕೃತ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.
ಅಂಬರ ಗುಡ್ಡದಲ್ಲಿ ಮಕ್ಕಳು ಕಳೆದುಹೋಗುವ ಕಥೆ
ʻಅಂಬರ ಗುಡ್ಡʼ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿರುವ ವಿಷ್ಣು ತೇಜ, ತಾವೇ ಪ್ರಮುಖ ಪಾತ್ರವೊಂದರಲ್ಲಿ ನಟಿಸಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೇಲರ್‌ನಲ್ಲಿ, ಶಾಲಾ ಪ್ರವಾಸಕ್ಕೆಂದು ‘ಅಂಬರ ಗುಡ್ಡ’ಕ್ಕೆ ತೆರಳುವ ಮುಗ್ಧ ಮಕ್ಕಳು ಅಲ್ಲಿನ ದಟ್ಟ ಕಾಡಿನಲ್ಲಿ ಹೇಗೆ ದಾರಿ ತಪ್ಪುತ್ತಾರೆ, ಆನಂತರ ಅಲ್ಲಿ ಅವರ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಸವಾಲುಗಳು ಹಾಗೂ ಕಷ್ಟಗಳನ್ನು ಹೇಗೆ ಧೈರ್ಯದಿಂದ ಎದುರಿಸುತ್ತಾರೆ ಎಂಬ ರೋಮಾಂಚಕಾರಿ ಕಥಾಹಂದರವನ್ನು ತೋರಿಸಲಾಗಿದೆ.
ಚಿತ್ರೀಕರಣದ ವೇಳೆ ನಿರ್ದೇಶಕನ ಮಗಳಿಗೆ ಹಾವು ಕಚ್ಚಿತ್ತು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವಿಷ್ಣು ತೇಜ, "ಇಷ್ಟು ಜನ ಮಕ್ಕಳನ್ನು ಒಟ್ಟಿಗೆ ಸೇರಿಸಿ ದಟ್ಟ ಅರಣ್ಯದಲ್ಲಿ ಶೂಟಿಂಗ್ ಮಾಡುವುದು ಒಂದು ದೊಡ್ಡ ಸಾಹಸವೇ ಆಗಿತ್ತು. ಅವರ ತುಂಟಾಟ, ತರ್ಲೆಗಳನ್ನು ನಿಭಾಯಿಸುವುದು ಕಷ್ಟವಾಗಿತ್ತು. ಇವೆಲ್ಲದರ ನಡುವೆ, ಕಾಡಿನಲ್ಲಿ ಶೂಟಿಂಗ್ ಮಾಡುವಾಗ ನನ್ನ ಮಗಳಿಗೆ (ಈ ಚಿತ್ರದ ಪ್ರಮುಖ ಬಾಲನಟಿ) ಹಾವು ಕಚ್ಚಿತ್ತು. ತಕ್ಷಣ ಆಕೆಗೆ ಚಿಕಿತ್ಸೆ ಕೊಡಿಸಿ, ಗುಣಮುಖಳಾದ ಬಳಿಕ ಮತ್ತೆ ಧೈರ್ಯದಿಂದ ಶೂಟಿಂಗ್ ಪೂರ್ಣಗೊಳಿಸಿದೆವು. ಈಗ ಸಿನಿಮಾ ಜೂನ್ 26ಕ್ಕೆ ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ" ಎಂದು ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು.
ಮಲೆನಾಡಿನ ಸುಂದರ ತಾಣಗಳಲ್ಲಿ ಶೂಟಿಂಗ್
ಈ ಸಾಹಸಮಯ ಚಿತ್ರದಲ್ಲಿ ತನಿಷಾ ಗೌಡ, ಖುಷಿ ಗೌಡ, ಗೀತಾ, ಚಂದ್ರು, ಗಣೇಶ್ ಸೇರಿದಂತೆ ಹಲವು ಅದ್ಭುತ ಪ್ರತಿಭೆಯುಳ್ಳ ಮಕ್ಕಳು ನಟಿಸಿದ್ದಾರೆ. ಮೊದಲ ಬಾರಿಗೆ ಬಣ್ಣ ಹಚ್ಚಿರುವ ಈ ಮಕ್ಕಳು, "ಮಳೆಯ ನಡುವೆ ಕಾಡಿನಲ್ಲಿ ಚಿತ್ರೀಕರಣ ಮಾಡುವುದು ಸವಾಲಾಗಿದ್ದರೂ ಹೊಸ ಅನುಭವ ನೀಡಿದೆ" ಎಂದು ಸಂತಸ ವ್ಯಕ್ತಪಡಿಸಿದರು.
Actor Akshay Kumar: ಅಕ್ಷಯ್ ಕುಮಾರ್ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ನೂಕು ನುಗ್ಗಲು; ಮಹಿಳೆಯರು-ಮಕ್ಕಳ ಗೋಳಾಟ!
ಜೂನ್ 26ಕ್ಕೆ ತೆರೆಗೆ ಬರಲಿದೆ ಈ ಸಿನಿಮಾ
ದೃಶ್ಯ ವೈಭವಕ್ಕೆ ಒತ್ತು ನೀಡಿರುವ ಈ ಚಿತ್ರವನ್ನು ಕುಂದಾಪುರದ ಕೊಲ್ಲೂರು ಮೂಕಾಂಬಿಕಾ ಸಂರಕ್ಷಿತ ಅರಣ್ಯ ಪ್ರದೇಶ, ಶಿವಮೊಗ್ಗ, ಪ್ರಕೃತಿ ಸೌಂದರ್ಯದ ಕೊಡಚಾದ್ರಿ ಬೆಟ್ಟ ಹಾಗೂ ಗೋಕರ್ಣದ ಕಡಲತೀರಗಳಲ್ಲಿ ಅತ್ಯಂತ ರಿಚ್ ಆಗಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಆಕಾಶ್ ಪರ್ವ ಅವರ ಸುಮಧುರ ಸಂಗೀತ ಹಾಗೂ ದೀಪಕ್ ಕುಮಾರ್ ಅವರ ಮನಮೋಹಕ ಛಾಯಾಗ್ರಹಣವಿದೆ. ಮಕ್ಕಳಿಗಷ್ಟೇ ಅಲ್ಲದೆ ಇಡೀ ಕುಟುಂಬ ಸಮೇತ ಕುಳಿತು ನೋಡಬಹುದಾದ ಒಂದು ಪಕ್ಕಾ ಅಡ್ವೆಂಚರಸ್ ಸಿನಿಮಾ ಇದಾಗಲಿದ್ದು, ಜೂನ್ 26ಕ್ಕೆ ಥಿಯೇಟರ್‌ಗಳಲ್ಲಿ ತೆರೆಗೆ ಬರಲಿದೆ.