ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

AI ಕ್ರಾಂತಿಯ ನಡುವೆ ನಟನೆಯ ಶಿಸ್ತು ಹುಡುಕಿಕೊಂಡು ರಂಗಭೂಮಿಗೆ ಮರಳಿದ ʻಅಮೃತಧಾರೆʼ ನಟ ರಾಜೇಶ್‌ ನಟರಂಗ

'ಮಳೆ ನಿಲ್ಲುವವರೆಗೆ' ನಾಟಕದ ಮೂಲಕ ಖ್ಯಾತ ನಟ ರಾಜೇಶ್‌ ನಟರಂಗ ಅವರು ರಂಗಭೂಮಿಗೆ ಮರಳುತ್ತಿದ್ದು, ಕಳೆದುಹೋದ ನಟನಾ ಶಿಸ್ತನ್ನು ಮರಳಿ ಪಡೆಯಲು ಸಜ್ಜಾಗಿದ್ದಾರೆ. ಕೃತಕ ಬುದ್ಧಿಮತ್ತೆಯ ಆತಂಕ ಹಾಗೂ ಓಟಿಟಿ ಗೊಂದಲಗಳ ನಡುವೆ ನೈಜ ಕಲೆಯನ್ನು ಹುಡುಕುವ ಆಶಯ ವ್ಯಕ್ತಪಡಿಸಿದ್ದಾರೆ. ಶರತ್ ಪರ್ವತವಾಣಿ ನಿರ್ದೇಶನದ ಈ ನಾಟಕವು ಸೆಪ್ಟೆಂಬರ್ 17ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

*ಸುಮಾರು ವರ್ಷಗಳ ನಂತರ ಮತ್ತೆ ನಾಟಕ ಮಾಡುತ್ತಿದ್ದೀರಿ. ಈ ನಿರ್ಧಾರಕ್ಕೆ ಕಾರಣವೇನು?

-ಮುಖ್ಯವಾಗಿ 'ಅಮೃತಧಾರೆ' ಧಾರಾವಾಹಿಯನ್ನು ಸತತ ಮೂರು ವರ್ಷಗಳಿಂದ ಮಾಡುತ್ತಿದ್ದೇನೆ. ಇದರಿಂದ ನಟನೆಯಲ್ಲಿ ನಾನು ನನ್ನ ಶಿಸ್ತನ್ನು (Discipline) ಕಳೆದುಕೊಳ್ಳುತ್ತಿದ್ದೇನೋ ಎಂಬ ಅನುಮಾನ ಶುರುವಾಗಿತ್ತು. ಒಂದು ಡೈಲಾಗ್ ನೆನಪಿಟ್ಟುಕೊಂಡು ಹೇಳಿ ಎಂದರೆ ತಕ್ಷಣಕ್ಕೆ ಬಾರದಷ್ಟು ಮೈಂಡ್ ಟ್ಯೂನ್ ಆಗಿಬಿಟ್ಟಿದೆ. ಮೊದಲಿನಂತೆ ಕ್ಯಾರೆಕ್ಟರ್ ಗ್ರಾಫ್ ಅನ್ನು ಆರಂಭದಿಂದ ಅಂತ್ಯದವರೆಗೆ ಹಿಡಿದಿಟ್ಟುಕೊಳ್ಳುವ ಆ ಎನರ್ಜಿ, ಮೆಮೊರಿ ಈಗ ಇದೆಯಾ ಎಂದು ಪರೀಕ್ಷಿಸಿಕೊಳ್ಳಬೇಕಿತ್ತು. ನನ್ನನ್ನು ನಾನು ಮತ್ತೆ ಕಂಡುಕೊಳ್ಳುವ ಪ್ರಯತ್ನವಿದು. ಇನ್ನೊಂದು ಭಯಾನಕ ವಿಚಾರವೆಂದರೆ, ಈಗ 'ಎಐ' (AI) ಬಂದಮೇಲೆ ಭವಿಷ್ಯ ತುಂಬಾ ಬ್ಲರ್ ಆಗಿದೆ.

ನಮ್ಮ ಮುಖವನ್ನು ಇಟ್ಟುಕೊಂಡು ಬೇರಾರದೋ ಭಾವನೆಗಳನ್ನು ಮಿಕ್ಸ್ ಮಾಡಿ, ಸಿನಿಮಾನೋ, ಸೀರಿಯಲ್ಲೋ ಅವರೇ ಮಾಡಿಸಿಬಿಡುವ ಹಂತಕ್ಕೆ ತಂತ್ರಜ್ಞಾನ ಬೆಳೆದಿದೆ. ಹಾಡುವವರ ಧ್ವನಿಯನ್ನೂ ಟ್ಯೂನ್ ಮಾಡಿ ಅದ್ಭುತವಾಗಿ ಕೇಳಿಸುವಂತೆ ಮಾಡುತ್ತಾರೆ. ಹೀಗಿರುವಾಗ ಭವಿಷ್ಯದಲ್ಲಿ ಫಿಸಿಕಲ್ ಆಗಿ ನಟರ ಅವಶ್ಯಕತೆಯೇ ಇರಲ್ಲವೇನೋ ಎನಿಸುತ್ತದೆ. ಪ್ರಕಾಶ್ ಬೆಳವಾಡಿಯವರು ಒಮ್ಮೆ ಹೇಳಿದ್ದರು, "ಎಲ್ಲವನ್ನೂ ಎಐ ತಿಂದರೂ ಕೊನೆಗೆ ನಾಟಕ ಮಾತ್ರ ಉಳಿದುಕೊಳ್ಳುತ್ತದೆ. ಅಲ್ಲಿಗೆ ನಾವೇ ಬೇಕು" ಎಂದು. ಹಾಗಾಗಿ ನಾಟಕ ಇರೋತನಕ ಮಾಡೋಣ ಅಂತ. ಮುಂದೆ ಆಕ್ಟಿಂಗ್ ಹಿಂದೆ ತುಂಬಾ ಬೀಳುವುದನ್ನು ಕಡಿಮೆ ಮಾಡುವ ಯೋಚನೆಯೂ ಇದೆ.

*ನಾಟಕದ ಹೆಸರು, ನಿರ್ದೇಶಕರು ಯಾರು ಮತ್ತು ಶೋ ಯಾವಾಗ ಇರುತ್ತದೆ?

ನಟ: ಇದು ಸುಧೀಂದ್ರ ಅವರು ಬರೆದಿರುವ 'ಮಳೆ ನಿಲ್ಲುವವರೆಗೆ' ಎಂಬ ನಾಟಕ. ಪರ್ವತವಾಣಿಯವರ ಮೊಮ್ಮಗ ಶರತ್ ಪರ್ವತವಾಣಿ ಅವರು ಇದನ್ನು ನಿರ್ದೇಶಿಸುತ್ತಿದ್ದಾರೆ. ಪ್ರದರ್ಶನವು ಮುಂದಿನ ತಿಂಗಳು (ಸೆಪ್ಟೆಂಬರ್) ೧೭ನೇ ತಾರೀಕು, ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಲಿದೆ.

*ಈಗಿನ ಕಾಲದಲ್ಲಿ ನಾಟಕ ನೋಡಲು ಬಂದು ಪ್ರೋತ್ಸಾಹಿಸುವ ಪ್ರೇಕ್ಷಕರು ಇದ್ದಾರಾ?

ನಟ: ಖಂಡಿತ, ಈಗ ಪ್ರೇಕ್ಷಕರ ಸಂಖ್ಯೆ ನಿಜವಾಗಲೂ ಜಾಸ್ತಿಯಾಗಿದೆ. ಓಟಿಟಿ ಪ್ಲಾಟ್‌ಫಾರ್ಮ್‌ಗಳ ಅತಿಯಾದ ಆಯ್ಕೆಗಳಿಂದ ಜನರೇ ಕನ್ಫ್ಯೂಸ್ ಆಗಿದ್ದಾರೆ. ಕಂಟಿನ್ಯೂಸ್ ಆಗಿ ಬಿಂಜ್ ವಾಚಿಂಗ್ (Binge Watching) ಮಾಡಿ ಬೋರ್ ಆಗಿದ್ದಾರೆ, ನಮ್ಮ ದೇಹ-ಮನಸ್ಸು ಸಹ ಅದಕ್ಕೆ ಒಗ್ಗಿಕೊಳ್ಳುವುದಿಲ್ಲ. ಈಗಿನ ಜನ ಸಿನಿಮಾ ಹೋದರೆ ಎರಡನೇ ರೀಲ್‌ಗೇ 'ಈ ಸಿನಿಮಾ ಇಷ್ಟೇ ಗುರು' ಎಂದು ಜಡ್ಜ್ ಮಾಡುತ್ತಾರೆ. ಆದರೆ ರಂಗಭೂಮಿ ಹಾಗಲ್ಲ. ಜನರಿಗೆ ಅಂತಿಮವಾಗಿ ಏನು ಬೇಕು ಎಂಬ ಹುಡುಕಾಟ ಇದ್ದೇ ಇರುತ್ತದೆ. ಇತ್ತೀಚೆಗೆ ನಾಟಕಗಳು ಆರ್ಥಿಕವಾಗಿಯೂ ಸಸ್ಟೈನ್ ಆಗುತ್ತಿವೆ. ಪ್ರಪಂಚದಾದ್ಯಂತ ಸುತ್ತಾಡಿ ನಾಟಕ ಮಾಡುವ ಅವಕಾಶಗಳೂ ಇವೆ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಆ ೨೦ ವರ್ಷಗಳ ಹಿಂದಿನ 'ಡಿಸಿಪ್ಲಿನ್' ಅನ್ನು ಮರಳಿ ಪಡೆಯಲು ರಂಗಭೂಮಿ ಬೇಕಿತ್ತು.

*ನಾಟಕದ ರಿಹರ್ಸಲ್ಸ್ ಪ್ರಕ್ರಿಯೆ ಹೇಗಿದೆ? ಎಂಜಾಯ್ ಮಾಡುತ್ತಿದ್ದೀರಾ ಅಥವಾ ಕಷ್ಟ ಅನ್ನಿಸುತ್ತಿದೆಯಾ?

-ಕಷ್ಟ ಎನ್ನುವುದಕ್ಕಿಂತ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಅರುಂಧತಿ ನಾಗ್ ಅವರು ಒಂದು ಮಾತು ಹೇಳುತ್ತಿದ್ದರು; ನಾಟಕ ಶುರುವಾಗುವ ಮುನ್ನ ಮೂರು ಬೆಲ್ ಹೊಡೆಯುತ್ತಾರೆ. ಮೊದಲನೇ ಬೆಲ್ ಆದಾಗ ಎಲ್ಲಾ ಡೈಲಾಗ್ಸ್, ಪೊಸಿಷನ್ಸ್ ನೆನಪು ಮಾಡಿಕೊಳ್ಳಲು ಶುರು ಮಾಡುತ್ತೇವೆ. ಎರಡನೇ ಬೆಲ್ ಆದಾಗ, 'ಆರಾಮಾಗಿದ್ದೆನಲ್ಲ, ಯಾಕಪ್ಪಾ ಈ ನಾಟಕ ಒಪ್ಪಿಕೊಂಡೆ, ಜನ ನಗುತ್ತಾರೋ ಏನೋ' ಅನ್ನಿಸುತ್ತದೆ. ಮೂರನೇ ಬೆಲ್ ಆದಾಗ ತಲೆ ಫುಲ್ ಬ್ಲಾಂಕ್ ಆಗುತ್ತದೆ! ವೇದಿಕೆಗೆ ಎಂಟ್ರಿ ಕೊಟ್ಟು ಮೊದಲ ಡೈಲಾಗ್ ಹೊಡೆದ ಮೇಲೆಯೇ ಮತ್ತೆ ಪ್ರಕ್ರಿಯೆ ಶುರುವಾಗುವುದು. ಈಗ ನನಗೂ ಅದೇ ಭಯ ಇದೆ. ಅಷ್ಟು ಜನದ ಮುಂದೆ, ಕತ್ತಲೆಯಲ್ಲಿ ನನ್ನ ಮೇಲೆ ಸ್ಪಾಟ್‌ಲೈಟ್ ಬಿದ್ದಾಗ ನಾನು ಕಾನ್ಫಿಡೆಂಟ್ ಆಗಿ ಡೈಲಾಗ್ ಹೇಳುತ್ತೇನಾ? ಆ ಪಾತ್ರಕ್ಕೆ, ನಿರ್ದೇಶಕರಿಗೆ ಹಾಗೂ ಪ್ರೇಕ್ಷಕರಿಗೆ ನಾನು ನ್ಯಾಯ ಒದಗಿಸುತ್ತೇನಾ ಎಂಬ ಸಣ್ಣ ಭಯ ಯಾವುದೇ ಪ್ರಾಜೆಕ್ಟ್‌ನ ಮೊದಲ ದಿನ ಇದ್ದೇ ಇರುತ್ತದೆ.

20 ವರ್ಷಗಳ ನಂತರ ರಂಗಭೂಮಿಗೆ ಮರಳಿದ ʻಅಮೃತಧಾರೆʼ ಖ್ಯಾತಿಯ ರಾಜೇಶ್ ನಟರಂಗ; ಯಾವುದು ಆ ನಾಟಕ?

*ಈ ನಾಟಕದ ಶೋ ಮುಗಿದ ಮೇಲೆ ನಿಮ್ಮ ನಿರೀಕ್ಷೆಗಳೇನು?

-ನನ್ನಲ್ಲಿ ಕಾನ್ಫಿಡೆನ್ಸ್ ಮತ್ತೆ ಬಿಲ್ಡ್ ಆಗಬೇಕು ಎಂದು ಎಕ್ಸ್ಪೆಕ್ಟ್ ಮಾಡುತ್ತಿದ್ದೀನಿ. ನನಗೀಗ ವಿಶ್ವಾಸ ಕಡಿಮೆಯಾಗಿದೆ ಎಂಬ ಸಣ್ಣ ಅನುಮಾನವಿದೆ. ಈ ನಾಟಕ ಮಾಡಿದ ಮೇಲೆ, 'ಇಲ್ಲ, ನಾನು ಈಗಲೂ ಥಿಯೇಟರ್ ಮಾಡಬಲ್ಲೆ' ಎಂಬ ವಿಶ್ವಾಸವನ್ನು ಮರಳಿ ಪಡೆಯುವುದು ನನ್ನ ಏಕೈಕ ನಿರೀಕ್ಷೆ. ಆ ಕಾನ್ಫಿಡೆನ್ಸ್ ಬಂದರೆ, ಭವಿಷ್ಯದಲ್ಲಿ ಇನ್ನೊಂದಷ್ಟು ಹೊಸ ನಾಟಕ ಪ್ರಯೋಗಗಳನ್ನು ಮಾಡುತ್ತೇನೆ.

-ಪ್ರಮೋದ್‌ ಮೋಹನ್‌ ಹೆಗಡೆ